ಕ್ಯಾಂಟರ್ಬರಿ, ಇಂಗ್ಲೆಂಡ್: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ರ ಭರ್ಜರಿ ಶತಕ ಮತ್ತು ಹರ್ಲಿನ್ ಡಿಯೋಲ್ಸ್ರ ಚೊಚ್ಚಲ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ದಾಖಲೆಯ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ಆರಂಭದಲ್ಲಿ ಶೆಫಾಲಿ ವರ್ಮಾರ ವಿಕೆಟ್ ಬೇಗನೇ ಕಳೆದುಕೊಂಡಿತು. ಬಳಿಕ ಸ್ಮೃತಿ ಮಂಧಾನಾ 40, ಯಾಸ್ತಿಕಾ ಬಾಟಿಯಾ 26 ರನ್ ಗಳಿಸಿ, 54 ರನ್ಗಳ ಜೊತೆಯಾಟ ಕಟ್ಟಿದರು.
ನಾಯಕಿ ಕೌರ್ ಗರಿಷ್ಠ ವೈಯಕ್ತಿಕ ರನ್:ಯಾಸ್ತಿಕಾ ಭಾಟಿಯಾ ಔಟಾದ ಬಳಿಕ ಕ್ರೀಸ್ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಬ್ಯಾಟ್ ಬೀಸಿದರು. 111 ಎಸೆತಗಳಲ್ಲಿ 143 ಬಾರಿಸಿದ ಕೌರ್ ಇಂಗ್ಲಿಷ್ ಮಹಿಳೆಯರ ಬೆವರಿಳಿಸಿದರು. ಇವರ ಇನಿಂಗ್ಸ್ನಲ್ಲಿ 18 ಬೌಂಡರಿಗಳಿದ್ದರೆ, 4 ಭರ್ಜರಿ ಸಿಕ್ಸರ್ಗಳಿದ್ದವು. ಭಾರತ ತಂಡದ ನಾಯಕಿ ಕೌರ್ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೂಡ ಇದಾಗಿದೆ.
ಕೌರ್ಗೆ ಉತ್ತಮ ಸಾಥ್ ನೀಡಿದ ಹರ್ಲಿನ್ ಡಿಯೋಲ್ 58 ರನ್ ಗಳಿಸಿದರು. ಇದು ಏಕದಿನದಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ. ಲಾರೆನ್ ಬೆಲ್ಲಾಗೆ ಹರ್ಲಿನ್ ವಿಕೆಟ್ ಒಪ್ಪಿಸಿದ ಬಳಿಕ ಬಿರುಸಾಗಿ ಬ್ಯಾಟ್ ಬೀಸಿದ ಪೂಜಾ ವಸ್ತ್ರಕಾರ್ 18, ದೀಪ್ತಿ ಶರ್ಮಾ 15 ರನ್ ಗಳಿಸಿದರು.