ಕರ್ನಾಟಕ

karnataka

ಸೂರ್ಯ ಬ್ಯಾಟಿಂಗ್​ ವೇಳೆ ಫೀಲ್ಡಿಂಗ್​ ನಿಲ್ಲಿಸುವುದು ಕಷ್ಟ: ಡೇವಿಡ್ ಮಿಲ್ಲರ್

By ETV Bharat Karnataka Team

Published : Dec 15, 2023, 10:37 PM IST

ಸರಣಿ ಸಮಬಲಗೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್, ಸೂರ್ಯ ಅವರಿದ್ದಾಗ ಕ್ಷೇತ್ರರಕ್ಷಣೆ ಸವಾಲಿನದ್ದು ಎಂದಿದ್ದಾರೆ.

Suryakumar Yadav
Suryakumar Yadav

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಟಿ20 ನಂ.1 ಬ್ಯಾಟರ್​​ ಸೂರ್ಯಕುಮಾರ್​ ಯಾದವ್ ಬ್ಯಾಟಿಂಗ್​ ಮಾಡುವಾಗ ಫೀಲ್ಡಿಂಗ್​ ಸೆಟ್​ ಮಾಡುವುದು ಕಠಿಣ ಸವಾಲು. ಮೈದಾನದ ಎಲ್ಲಾ ಕಡೆ ಆಡುವ ಸಾಮರ್ಥ್ಯ ಅವರಿಗಿದೆ ಎಂದು ಹರಿಣಗಳ ಪಡೆಯ ಹಿರಿಯ ಆಟಗಾರ ಡೇವಿಡ್ ಮಿಲ್ಲರ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯ ತಮ್ಮ ಟಿ20 ವೃತ್ತಿ ಜೀವನದ ನಾಲ್ಕನೇ ಶತಕ ಗಳಿಸಿದರು. ಕೇವಲ 55 ಬಾಲ್​ ಎದುರಿಸಿದ ಅವರು 106 ರನ್​ ಕಲೆಹಾಕಿದರು. ಅವರ ಇನ್ನಿಂಗ್ಸ್​ 8 ಸಿಕ್ಸರ್​ ಮತ್ತು 7 ಬೌಂಡರಿ ಒಳಗೊಂಡಿತ್ತು. ಸ್ಕೈ ಸ್ಕೋರ್​ ಸಹಾಯದಿಂದ ಭಾರತ 201ರನ್​ಗಳ ಮೊತ್ತ ಕಲೆಹಾಕಿತು. ಟಿ20 ಮಾದರಿಯಲ್ಲಿ ಹೆಚ್ಚು ಶತಕಗಳನ್ನು ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರೋಹಿತ್​ ಶರ್ಮಾ, ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಪಟ್ಟಿ ಸೇರಿದ್ದಾರೆ.

"ಸೂರ್ಯ ವಿಶೇಷ ಆಟಗಾರ ಮತ್ತು ಇದು ನಿಜವಾಗಿಯೂ ಉತ್ತಮ ಆಟ ಆಗಿತ್ತು. ನಮ್ಮ ಆಟಗಾರರು ಅವರನ್ನು ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಆದರೆ ಒಂದು ಹೆಜ್ಜೆ ಮುಂದೆ ಇದ್ದ ಸೂರ್ಯ ಎಲ್ಲರ ವಿರುದ್ಧ ಅಬ್ಬರಿಸಿದರು. ನಾವು ಭಾವಿಸಿದಂತೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮೈದಾನದ ಎಲ್ಲಾ ಕಡೆ ರನ್​ ಗಳಿಸಿದ್ದಾರೆ. ಅವರಿಗೆ ಫೀಲ್ಡಿಂಡ್​ ಸೆಟ್​ ಮಾಡುವುದು ಅತ್ಯಂತ ಕಷ್ಟದ ಕೆಲಸ" ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಿಲ್ಲರ್ ಹೇಳಿದರು.

ತಂಡ ಗಿಲ್​, ತಿಲಕ್​ ವರ್ಮಾ ಬೇಗ ವಿಕೆಟ್​ ಕಳೆದುಕೊಂಡಿತು. ನಂತರ ಬಂದ ಸೂರ್ಯ ಜೈಸ್ವಾಲ್​ ಜೊತೆಗೆ ವಿಕೆಟ್​ ಕಾಯ್ದುಕೊಂಡು ನಿಧಾನಗತಿಯಲ್ಲಿ ಇನ್ನಿಂಗ್ಸ್​ ಕಟ್ಟಿದರು. ಒಂದು ಹಂತದಲ್ಲಿ ಸ್ಕೈ 25 ಎಸೆತಗಳಲ್ಲಿ 27 ರನ್ ಗಳಿಸಿದ್ದರು, ನಂತರದ 31 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ಅಬ್ಬರಕ್ಕೆ ಅಣಿ ಆದರು. 13ನೇ ಓವರ್‌ನಲ್ಲಿ ಆಂಡಿಲ್ ಫೆಹ್ಲುಕ್ವಾಯೊ ಅವರಿಗೆ ಮೂರು ಸಿಕ್ಸರ್‌, ಒಂದು ಬೌಂಡರಿ ಸಿಡಿಸಿ ಗುಡುಗಿದರು. ಅಂತಿಮ ಓವರ್​ನಲ್ಲಿ ಶತಕ ಪೂರೈಸಿ ಔಟ್​ ಆದರು.

ಭಾರತ ನೀಡಿದ್ದ 201 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಮಿಲ್ಲರ್ ತಮ್ಮ ತಂಡದಿಂದ ನೀರಸ ಬ್ಯಾಟಿಂಗ್ ಪ್ರದರ್ಶನ ಬಂದಿದೆ ಎಂದಿದ್ದಾರೆ. "ಕಠಿಣ ಸವಾಲಾಗಿರಲಿಲ್ಲ. ಆದರೆ ಬ್ಯಾಟಿಂಗ್​ ವೈಫಲ್ಯ ಎದುರಿಸಿದೆವು. ವಿಕೆಟ್​ ಮೊದಲ ಇನ್ನಿಂಗ್ಸ್​​ನ ರೀತಿ ಇರಲಿಲ್ಲ. ವಿಕೆಟ್​ಗೆ ಹೊಂದಿಕೊಳ್ಳುವಲ್ಲಿ ವಿಫಲರಾದೆವು" ಎಂದು ಮಿಲ್ಲರ್​ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟಿ20 ಸರಣಿಯನ್ನು ಸಮಬಲ ಮಾಡಿಕೊಂಡಿದೆ. ಇನ್ನು ಭಾನುವಾರದಿಂದ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಕೆ.ಎಲ್​.ರಾಹುಲ್​ ಮುಂದಾಳತ್ವದಲ್ಲಿ ತಂಡ ಆಡಲಿದೆ.

ಇದನ್ನೂ ಓದಿ:ಐಪಿಎಲ್‌: ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕ

ABOUT THE AUTHOR

...view details