ಮೆಲ್ಬೋರ್ನ್(ಆಸ್ಟ್ರೇಲಿಯಾ): ಮೂರು ತಂಡಗಳ ಫೈನಲ್ ಸುತ್ತು ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸೀಸ್ ಮಹಿಳೆಯರ ವಿರುದ್ಧ ಸೋತು ಹೊರಬಿದ್ದರೆ, ರನ್ ರೇಟ್ ಆಧಾರದ ಮೇಲೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ಗೇರಿವೆ.
ಭಾನುವಾರದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿತ್ತು. ಭಾರತ ತಂಡ 4 ಪಂದ್ಯಗಳಲ್ಲಿ ತಲಾ ಎರಡು ಸೋಲು ಹಾಗೂ ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ 3 ಪಂದ್ಯಗಳಲ್ಲಿ 2 ಸೋಲು ಹಾಗೂ 1 ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿತ್ತು.
ಫೈನಲ್ ಪ್ರವೇಶಕ್ಕಾಗಿ ಆಸ್ಟ್ರೇಲಿಯಾ ಗೆಲ್ಲಲೇಬೇಕಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ 132 ರನ್ ಗಳಿಸಿತ್ತು. ಬೆತ್ ಮೋನಿ 50 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ಇತ್ತ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದ್ದರಿಂದ ಈ ಪಂದ್ಯವನ್ನು ಗೆಲ್ಲದಿದ್ದರೂ ರನ್ ರೇಟ್ಗಾಗಿ ಕಡಿಮೆಯಂದರೂ 123 ರನ್ ಗಳಿಸಬೇಕಿತ್ತು. ಆದರೆ ಆಸೀಸ್ ಬೌಲರ್ಗಳ ದಾಳಿಗೆ ಕುಸಿದ ಇಂಗ್ಲೆಂಡ್ ವನಿತೆಯರು 116 ರನ್ಗಳಿಸಲಷ್ಟೇ ಶಕ್ತವಾಗಿ 16 ರನ್ಗಳ ಸೋಲುಕಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದರು.
ಆಸ್ಟ್ರೇಲಿಯಾ ಪರ ಸೋಫಿಯಾ ಮೊಲಿನೆಕ್ಸ್ 19 ರನ್ ನೀಡಿ 3 ವಿಕೆಟ್, ಟಾಯ್ಲ ವೇಮಿನಿಕ್ 18 ರನ್ ನೀಡಿ 2 ವಿಕೆಟ್ ಪಡೆದರೆ, ಮೇಗನ್ ಸ್ಕಟ್ ಹಾಗೂ ಜೆಸ್ ಜೊನಾಸೆನ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರಲ್ಲದೆ ಇಂಗ್ಲೆಂಡ್ ತಂಡವನ್ನು 116 ರನ್ಗಳಿಗೆ ಕಟ್ಟಿಹಾಕುವ ಮೂಲಕ ಭಾರತ ತಂಡ ಫೈನಲ್ ಪ್ರವೇಶಿಸುವಂತೆ ಮಾಡಿದರು.
ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಹಾಗೂ ಭಾರತ ಬುಧವಾರ ನಡೆಯುವ ಫೈನಲ್ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ.