ಕರ್ನಾಟಕ

karnataka

ಹರಾಜಿನಲ್ಲಿ ಆರ್‌ಸಿಬಿಗೆ ಲಾಭವಾಗಿದ್ದೇನು?​: ನಾಯಕ ಡು ಪ್ಲೆಸಿಸ್ ಹೇಳಿದ್ದಿಷ್ಟು

By ETV Bharat Karnataka Team

Published : Dec 20, 2023, 4:06 PM IST

IPL Auction 2024: ಹರಾಜು ತಂತ್ರವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಸಾಮರ್ಥ್ಯ ಸುಧಾರಿಸಲು ಸಹಾಯ ಮಾಡುವ ಆಟಗಾರರ ಸುತ್ತ ಇತ್ತು. ನಾವು ಅವರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್ ಹೇಳಿದ್ದಾರೆ.

RCB skipper Du Plessis
RCB skipper Du Plessis

ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿಯ ಗಮನ ಮುಂದಿನ ಐಪಿಎಲ್‌ನಲ್ಲಿ ತವರು ಮೈದಾನದಲ್ಲಿ ಸುಧಾರಿತ ಪ್ರದರ್ಶನಗಳನ್ನು ನೀಡಬಲ್ಲ ತಂಡ ನಿರ್ಮಿಸುವುದಾಗಿತ್ತು ಎಂದು ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದರು. ಮಂಗಳವಾರ ದುಬೈನ ಕೊಕೊ ಕೋಲಾ ಅರೆನಾದಲ್ಲಿ ನಡೆದ ಹರಾಜಿನಲ್ಲಿ ಆರು ಆಟಗಾರರನ್ನು ಬಿಡ್‌ನಲ್ಲಿ ಆರ್‌ಸಿಬಿ ಖರೀದಿಸಿತು. ಬಿಡ್​ನಿಂದ ಅತ್ಯುತ್ತಮ ಸಮತೋಲಿತ ತಂಡ ಸಿಕ್ಕಿದೆ. ನಮ್ಮ ಕಾರ್ಯತಂತ್ರದಂತೆ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.

"ಕಳೆದ ಆವೃತ್ತಿಯಲ್ಲಿ ಬೆಂಗಳೂರಿನ ಮೈದಾನಕ್ಕಿಂತ ಬೇರೆಡೆ ತಂಡ ಉತ್ತಮ ಪ್ರದರ್ಶನ ನೀಡಿದೆ. 2024ರ ಐಪಿಎಲ್​ನಲ್ಲಿ ನಾವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಹೀಗಾಗಿ ತವರಿನ ಮೈದಾನದಲ್ಲಿ ಆಡುವ ಕಾರ್ಯತಂತ್ರ ಇಟ್ಟುಕೊಂಡು ಬಿಡ್​ಗೆ ತೆರಳಿದ್ದೆವು. ಇದು ಖಂಡಿತವಾಗಿಯೂ ಉತ್ತಮ ಹರಾಜು" ಎಂದು ಫಾಫ್​ ಹೇಳಿದ್ದಾರೆ.

ಫಾಫ್​ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರಜತ್ ಪಾಟಿದಾರ್ ಅವರಂತಹ ಬಲಿಷ್ಠ ಅಗ್ರ ಕ್ರಮಾಂಕದ ಬ್ಯಾಟಿಂಗ್​ ಬಲವನ್ನು ತಂಡ ಹೊಂದಿದೆ. ಹರಾಜಿಗೂ ಮೊದಲು ಆರ್​ಸಿಬಿ ಮುಂಬೈ ಇಂಡಿಯನ್ಸ್‌ನಿಂದ ಟ್ರೇಡ್ ಇನ್ ಮೂಲಕ ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಸೇರಿಸಿಕೊಂಡಿತ್ತು.

ಬಿಡ್​ನಲ್ಲಿ ಬೌಲಿಂಗ್​ ಮತ್ತು ಬ್ಯಾಟಿಂಗ್​ ಕ್ಷೇತ್ರಕ್ಕೆ ಅಗತ್ಯ ಬಿಡ್​ಗಳನ್ನು ಮಾಡಿತು. ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ (₹11.5 ಕೋಟಿ), ನ್ಯೂಜಿಲೆಂಡ್ ವೇಗದ ಬೌಲರ್ ಲಾಕಿ ಫರ್ಗುಸನ್ (₹ 2ಕೋಟಿ) ಮತ್ತು ಇಂಗ್ಲೆಂಡ್‌ನ ಟಾಮ್ ಕರನ್ (₹ 1.5 ಕೋಟಿ) ವಿದೇಶಿ ಬಿಡ್​ ಆಗಿದ್ದಾರೆ. ಎಡಗೈ ವೇಗಿ ಯಶ್ ದಯಾಲ್ (₹5 ಕೋಟಿ) ಮತ್ತು ಸ್ಪಿನ್ ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್ (₹20 ಲಕ್ಷ), ಗುಜರಾತ್ ಜೈಂಟ್ಸ್‌ನ ವಿಕೆಟ್‌ಕೀಪರ್ ಸೌರವ್ ಚೌಹಾಣ್​ (₹20 ಲಕ್ಷ) ಭಾರತದಿಂದ ತಂಡದ ಆಯ್ಕೆ ಆಗಿದ್ದಾರೆ. ತಂಡ ₹2 ಕೋಟಿ ಮೊತ್ತ ಉಳಿಸಿಕೊಂಡು ಎಲ್ಲಾ ಸ್ಥಾನಗಳನ್ನು (25) ಭರ್ತಿ ಮಾಡಿಕೊಂಡಿದೆ. ಚೌಹಾಣ್ 2023ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 18 ಎಸೆತಗಳಲ್ಲಿ 61 ರನ್ ಗಮನ ಸೆಳೆದಿದ್ದರು.

ಇದನ್ನೂ ಓದಿ:ಏಷ್ಯನ್​ ಗೇಮ್ಸ್​​ 2023ರ ಭಾರತದ ಐತಿಹಾಸಿಕ ಸಾಧನೆಯ ಹಿನ್ನೋಟ

ABOUT THE AUTHOR

...view details