ತುಮಕೂರು:ಬೆಂಗಳೂರಿನಂತಹ ಮಹಾನಗರಗಳಲ್ಲಿ ಸರ್ವೇಸಾಮಾನ್ಯವಾಗಿರುವ ಅಪರಾಧ ಚಟುವಟಿಕೆಗಳು ತುಮಕೂರು ಜಿಲ್ಲೆಯಲ್ಲಿಯೂ ಬೆಳಕಿಗೆ ಬರುತ್ತಿವೆ. ಶ್ರೀಮಂತ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಹಣಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕರಣಗಳು ಆರಂಭವಾಗಿವೆ.
ಇಂತಹ ಚಟುವಟಿಕೆ ತುಮಕೂರು ನಗರದಲ್ಲಿ ಕಂಡುಬಂದಿದ್ದು, ಬೆಂಗಳೂರು ಮೂಲದ ಆರೋಪಿಗಳು ಇದರಲ್ಲಿ ಭಾಗಿಯಾಗಿರುವುದು ಗಮನಾರ್ಹ ಅಂಶ. ಆಗಸ್ಟ್ 8 ರಂದು ಮತ್ತು ಜುಲೈ 9 ರಂದು ತುಮಕೂರು ನಗರದ ಮಂಡಿಪೇಟೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕ್ರಿಮಿನಲ್ ತಂಡ ವ್ಯವಸ್ಥಿತ ಸಂಚು ರೂಪಿಸಿತ್ತು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆ ಮತ್ತು ತುಮಕೂರು ನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಬರೋಬರಿ 50 ಲಕ್ಷ ರೂ. ಗಳಿಗೆ ದುಷ್ಕರ್ಮಿಗಳು ಉದ್ಯಮಿಗಳಿಗೆ ಬೇಡಿಕೆ ಇರಿಸಿದ್ದರು.
ಬೆಂಗಳೂರಿನ ಯಶವಂತಪುರದ ಮೆಹಬೂಬ್ ಖಾನ್ ಎಂಬಾತನೇ ಈ ಕ್ರಿಮಿನಲ್ ಚಟುವಟಿಕೆಯ ರೂವಾರಿ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತುಮಕೂರಿನ ಅಲಿ ಹುಸೇನ ಶಾನವಾಜ್ ಪಾಷಾ ಮತ್ತು ಸೈಯದ್ ಶವರ್ ಎಂಬುವರೊಂದಿಗೆ ತುಮಕೂರು ನಗರದಲ್ಲಿ ಬೆಂಗಳೂರು ಮಾದರಿಯ ಕ್ರಿಮಿನಲ್ ಚಟುವಟಿಕೆಗೆ ಸಂಚು ರೂಪಿಸಿದ್ದನು.