ಕರ್ನಾಟಕ

karnataka

ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ: ರವಿಶಂಕರ್​ ಗುರೂಜಿ, ವಿದೇಶಾಂಗ ಸಚಿವ ಜೈಶಂಕರ್ ಭಾಗಿ

By ETV Bharat Karnataka Team

Published : Sep 30, 2023, 10:36 PM IST

Updated : Sep 30, 2023, 10:43 PM IST

ಅಮೆರಿಕದ ವಾಷಿಂಗ್ಟನ್​ನಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ '4ನೇ ವಿಶ್ವ ಸಂಸ್ಕೃತಿ ಉತ್ಸವ' ವೈಭವೋಪೇತವಾಗಿ ಜರುಗಿತು.

ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ
ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ

ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ

ವಾಷಿಂಗ್ಟನ್ (ಅಮೆರಿಕ):ಖ್ಯಾತ ಭಾರತೀಯ ಆಧ್ಯಾತ್ಮಿಕ ಗುರು, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ಅಮೆರಿಕದ ವಾಷಿಂಗ್ಟನ್​ನಲ್ಲಿ ನ್ಯಾಷನಲ್ ಮಾಲ್‌ನಲ್ಲಿ '4ನೇ ವಿಶ್ವ ಸಂಸ್ಕೃತಿ ಉತ್ಸವ' ವೈಭವೋಪೇತವಾಗಿ ಜರುಗಿತು. ಪ್ರಪಂಚದಾದ್ಯಂತದ ಕಲಾವಿದರು ತಮ್ಮ ಕಲಾ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದರು. ರವಿಶಂಕರ್​ ಗುರೂಜಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಿದ್ದರು.

ವಿಶ್ವ ಸಂಸ್ಕೃತಿ ಉತ್ಸವದ ಎರಡನೇ ದಿನವಾದ ಶನಿವಾರ, ರವಿಶಂಕರ್ ಗುರೂಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಯೋಗ ಮತ್ತು ಧ್ಯಾನದ ಬಗ್ಗೆ ಪ್ರವಚನ ನೀಡಿದರು. ಉತ್ಸವದ ಮೊದಲ ದಿನವಾದ ಶುಕ್ರವಾರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಹೇಳಿದರು.

ವಿಶ್ವದಲ್ಲಿ ಮಾನಸಿಕ ಆರೋಗ್ಯವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದೆಡೆ ಆಕ್ರಮಣಶೀಲತೆ ಇದ್ದರೆ, ಇನ್ನೊಂದೆಡೆ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿ ಇದೆ. ಇದನ್ನು ಇಂತಹ ಸಾಂಸ್ಕೃತಿಕ ಉತ್ಸವಗಳಿಂದ ದೂರ ಮಾಡಲು ಸಾಧ್ಯ. ಮಾನಸಿಕ ಒತ್ತಡದಿಂದ ಹೊರಬರಲು ನಮಗೆ ಸಹಾಯ ಮಾಡುವ ಆಚರಣೆಯಾಗಿದೆ ಎಂದು ಅವರು ಹೇಳಿದರು.

ಶಾಂತಿಯೇ ನಮ್ಮ ಆತ್ಮ:ನಾವೆಲ್ಲರೂ ಕನಸು ಕಾಣುತ್ತೇವೆ. ಆದರ್ಶಗಳನ್ನು ರೂಢಿಸಿಕೊಂಡಿದ್ದೇವೆ. ಆದರೆ, ಅವುಗಳ ತುಂಬಾ ಉದ್ವೇಗಗೊಂಡಾಗ, ಮಾನಸಿಕ ಒತ್ತಡಕ್ಕೆ ಸಿಲುಕುತ್ತೇವೆ. ಹಾಗಿದ್ದಾಗ ನಾವು ಏನೇ ಬಂದರೂ 'ಇರಲಿ ಬಿಡಿ' ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಶಾಂತ, ನೈಜ ಸ್ವಭಾವ ನಮ್ಮದಾಗಬೇಕು. ನಮ್ಮ ನಿಜವಾದ ಆತ್ಮವೆಂದರೆ ಅದು ಶಾಂತಿ. ನಮ್ಮ ತಾಳ್ಮೆಯೇ ನಮಗೆ ಮೂಲಾಧಾರ ಎಂದರು.

ನಮ್ಮಲ್ಲಿ ಒಳ್ಳೆಯತನ ಅಂತರ್ಗತವಾಗಿರುತ್ತದೆ. ನಾವೆಲ್ಲರೂ ವಿಶ್ವ ಕುಟುಂಬದ ಸದಸ್ಯರು ಎಂದು ಅರಿತುಕೊಂಡಾಗಲೇ ವಿಶ್ವಶಾಂತಿ ಕಾಪಾಡಲು ಸಾಧ್ಯ. ಸಮಾಜದಲ್ಲಿ ಸಂತೋಷ, ಇನ್ನಷ್ಟು ನಗುವನ್ನು ಸೃಷ್ಟಿಸೋಣ ಮತ್ತು ಬಡವರ ಕಣ್ಣೀರು ಒರೆಸೋಣ ಎಂದು ಗುರೂಜಿ ಹೇಳಿದರು.

ವಿದೇಶಾಂಗ ಸಚಿವ ಡಾ.ಎಸ್​.ಜೈಶಂಕರ್​ ಮಾತನಾಡಿ, ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳು ಮಾನವೀಯ ಗುಣಗಳನ್ನು ಎತ್ತಿಹಿಡಿಯುತ್ತವೆ. ಇಂದಿನ ಜಗತ್ತಿನಲ್ಲಿ ಎಲ್ಲರೂ ಒಂದಾಗುವ ಅಗತ್ಯವಿದೆ. ವಿಶ್ವ ಕುಟುಂಬ ರಚನೆಯಾಗಬೇಕಿದೆ ಎಂದು ಅವರು ಹೇಳಿದರು.

ಮನಸೂರೈಗೆದ ಕಲಾ ಪ್ರದರ್ಶನ:4ನೇ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ವಿವಿಧ ದೇಶಗಳ ಕಲಾವಿದರು, ತಮ್ಮ ಕಲಾ ಪ್ರದರ್ಶನ ನೀಡಿ, ನೆರೆದಿದ್ದವರ ಮನಸೂರೆಗೈದರು. ಭಾರತದ ಸಂಗೀತ ಕಲಾವಿದರು ಸಹಿತ ಉತ್ಸವದಲ್ಲಿ ಪ್ರದರ್ಶನ ನೀಡಿದರು. ಮಾಜಿ ನೈಜೀರಿಯನ್ ಅಧ್ಯಕ್ಷ ಒಲುಸೆಗುನ್ ಒಬಸಾಂಜೊ, ಯುರೋಪಿಯನ್ ಪಾರ್ಲಿಮೆಂಟ್‌ನ ರಿಚರ್ಡ್ ಝಾರ್ನೆಕಿ, ಜಪಾನ್​ ಸಂಸದ ಹಕುಬುನ್ ಶಿಮೊಮುರಾ, ಮಿಚಿಗನ್ ಕಾಂಗ್ರೆಸ್ಸಿಗ ಥಾನೇಡರ್, ಮೇಯರ್‌ಗಳು, ಮಾಜಿ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಯಭಾರಿಗಳು, ಸೆನೆಟರ್‌ಗಳು ಮತ್ತು ಅಮೆರಿಕದ ಹಲವಾರು ಸಂಸದರು ಭಾಗವಹಿಸಿದ್ದರು.

ಆರ್ಟ್ ಆಫ್ ಲಿವಿಂಗ್ ಬಗ್ಗೆ ಒಂದಿಷ್ಟು:1981 ರಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಂದ ಸ್ಥಾಪಿಸಲ್ಪಟ್ಟ ಆರ್ಟ್ ಆಫ್ ಲಿವಿಂಗ್ ಶೈಕ್ಷಣಿಕ ಮತ್ತು ಮಾನವೀಯ ಆಂದೋಲನವಾಗಿದ್ದು, ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಜಾಗತಿಕವಾಗಿ 156 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. 450 ಮಿಲಿಯನ್​ಗೂ ಹೆಚ್ಚು ಜನರನ್ನು ಇದು ತಲುಪಿದೆ.

ಇದನ್ನೂ ಓದಿ:ಭೂಮಿಯ ಪ್ರಭಾವ ಗೋಳ ದಾಟಿ ಎಲ್​ 1 ಪಾಯಿಂಟ್ ಕಡೆಗೆ ಪಯಣ ಆರಂಭಿಸಿದ 'ಆದಿತ್ಯ': ಇಸ್ರೋ

Last Updated : Sep 30, 2023, 10:43 PM IST

ABOUT THE AUTHOR

...view details