ಕರ್ನಾಟಕ

karnataka

ಕದನವಿರಾಮ ನಿರ್ಣಯಕ್ಕೆ ವೀಟೋ; ಯುಎಸ್ ಕ್ರಮಕ್ಕೆ ವಿಶ್ವದ ರಾಷ್ಟ್ರಗಳ ಖಂಡನೆ

By ETV Bharat Karnataka Team

Published : Dec 10, 2023, 6:39 PM IST

ಗಾಝಾದಲ್ಲಿ ಮಾನವೀಯ ಕದನವಿರಾಮ ಕೋರುವ ಕರಡಿಗೆ ಅಮೆರಿಕ ತಡೆ ಒಡ್ಡಿರುವುದಕ್ಕೆ ವಿಶ್ವದ ಹಲವಾರು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.

Countries disappointed as US vetoes Gaza ceasefire resolution
Countries disappointed as US vetoes Gaza ceasefire resolution

ವಿಶ್ವಸಂಸ್ಥೆ : ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮವನ್ನು ಕೋರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕ ವೀಟೋ ಮೂಲಕ ತಿರಸ್ಕರಿಸಿದ ನಂತರ, ಅನೇಕ ದೇಶಗಳು ವಾಷಿಂಗ್ಟನ್ ಕ್ರಮದ ಬಗ್ಗೆ ನಿರಾಶೆ ಮತ್ತು ವಿಷಾದ ವ್ಯಕ್ತಪಡಿಸಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್, "ಕರಡನ್ನು ಯುಎಸ್ ವೀಟೋ ಮಾಡಿರುವುದಕ್ಕೆ ನಾವು ತೀವ್ರ ನಿರಾಶೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಹೇಳಿದ್ದಾರೆ.

"ಎರಡು ತಿಂಗಳ ಹೋರಾಟವು ಈಗಾಗಲೇ ಅಗಾಧ ಪ್ರಮಾಣದ ಸಾವು ಮತ್ತು ವಿನಾಶಕ್ಕೆ ಕಾರಣವಾಗಿದೆ ಮತ್ತು ತಕ್ಷಣದ ಕದನ ವಿರಾಮ ಈಗಿನ ತುರ್ತು ಅಗತ್ಯವಾಗಿದೆ" ಎಂದು ಜಾಂಗ್ ಹೇಳಿದರು.

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ನ ಖಾಯಂ ವೀಕ್ಷಕ ರಿಯಾದ್ ಎಚ್. ಮನ್ಸೂರ್, ಕೌನ್ಸಿಲ್ ತನ್ನ ಜವಾಬ್ದಾರಿಯನ್ನು ನಿಭಾಯಿಸದಂತೆ ತಡೆದಿರುವುದು ವಿಷಾದನೀಯ ಮತ್ತು ವಿನಾಶಕಾರಿಯಾಗಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನ ಉಪ ಖಾಯಂ ಪ್ರತಿನಿಧಿ ಮೊಹಮ್ಮದ್ ಅಬುಶಾಬ್ ಅಮೆರಿಕದ ಕ್ರಮಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದರು. ಆದಾಗ್ಯೂ ಅಮೆರಿಕದ ಈ ಕ್ರಮವು ಗಾಝಾದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಕೌನ್ಸಿಲ್ ಸದಸ್ಯರು ತಮ್ಮ ಪ್ರಯತ್ನ ಮುಂದುವರಿಸುವುದರಿಂದ ತಡೆಯಲಾರದು ಎಂದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ರಷ್ಯಾದ ಮೊದಲ ಉಪ ಖಾಯಂ ಪ್ರತಿನಿಧಿ ಡಿಮಿಟ್ರಿ ಪೊಲಿಯಾನ್ಸ್ಕಿ ಮಾತನಾಡಿ, ಯುಎಸ್ ಮತ್ತೊಮ್ಮೆ ಕದನ ವಿರಾಮದ ಮನವಿಯನ್ನು ನಿರ್ಬಂಧಿಸಿರುವುದು ಮಧ್ಯಪ್ರಾಚ್ಯದ ಕರಾಳ ದಿನಗಳಲ್ಲಿ ಒಂದಾಗಲಿದೆ ಎಂದು ಹೇಳಿದರು.

ತಾವು ಕದನವಿರಾಮ ಕರಡಿನ ಪರವಾಗಿ ಮತ ಚಲಾಯಿಸಿರುವುದಾಗಿ ಹೇಳಿದ ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್​ನ ಖಾಯಂ ಪ್ರತಿನಿಧಿ ನಿಕೋಲಸ್ ಡಿ ರಿವಿಯರ್, ಭದ್ರತೆ, ಮಾನವೀಯ ಅಥವಾ ರಾಜಕೀಯ ಸೇರಿದಂತೆ ಬಿಕ್ಕಟ್ಟಿನ ಎಲ್ಲಾ ವಿಷಯಗಳ ಬಗ್ಗೆ ಮಂಡಳಿಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಫ್ರಾನ್ಸ್ ಬದ್ಧವಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯಲ್ಲಿ ಜಪಾನ್​ನ ಖಾಯಂ ಪ್ರತಿನಿಧಿ ಇಶಿಕಾನೆ ಕಿಮಿಹಿರೊ ಮಾತನಾಡಿ, ಪ್ಯಾಲೆಸ್ಟೈನ್ ಅಥವಾ ಇಸ್ರೇಲ್ ಸೇರಿದಂತೆ ಯಾವುದೇ ದೇಶಗಳ ನಾಗರಿಕರ ಜೀವಹಾನಿ ದುರಂತವಾಗಿರುವುದರಿಂದ ತಮ್ಮ ನಿಯೋಗವು ಕರಡಿನ ಪರವಾಗಿ ಮತ ಚಲಾಯಿಸಿದೆ ಎಂದು ಹೇಳಿದರು. ಆದಾಗ್ಯೂ ಕರಡು ಅಂಗೀಕಾರವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ಯುಎನ್ ಭದ್ರತಾ ಮಂಡಳಿಯು ಯುಎಇ ಸಿದ್ಧಪಡಿಸಿದ ಮತ್ತು ಸುಮಾರು 100 ದೇಶಗಳ ಬೆಂಬಲದೊಂದಿಗೆ ಗಾಜಾ ಪಟ್ಟಿಯಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿತ್ತು. ಇದರಲ್ಲಿ 13 ರಾಷ್ಟ್ರಗಳು ಪರವಾಗಿ ಮತ ಚಲಾಯಿಸಿದರೆ, ಬ್ರಿಟನ್ ಮತದಾನದಿಂದ ದೂರ ಉಳಿಯಿತು. ಯುಎಸ್ ವಿರುದ್ಧವಾಗಿ ಮತ ಚಲಾಯಿಸಿತು.

ಇದನ್ನೂ ಓದಿ : ಚೇತರಿಕೆಯತ್ತ ಶ್ರೀಲಂಕಾ ಪ್ರವಾಸೋದ್ಯಮ; 12 ಲಕ್ಷ ಪ್ರವಾಸಿಗರ ಭೇಟಿ, $1.8 ಶತಕೋಟಿ ಆದಾಯ

ABOUT THE AUTHOR

...view details