ಕರ್ನಾಟಕ

karnataka

ಉತ್ತರ ಕೊರಿಯಾ ಉಪಗ್ರಹಕ್ಕೆ ವಿಚಕ್ಷಣಾ ಸಾಮರ್ಥ್ಯವೇ ಇರಲಿಲ್ಲ: ಅಧ್ಯಯನದಲ್ಲಿ ಬಹಿರಂಗ

By

Published : Jul 5, 2023, 6:07 PM IST

ಬಾಹ್ಯಾಕಾಶ ಕಕ್ಷೆಗೆ ಸೇರಲು ವಿಫಲವಾಗಿ ಸಮುದ್ರದಲ್ಲಿ ಪತನವಾಗಿದ್ದ ಉತ್ತರ ಕೊರಿಯಾ ಹಾರಿಸಿದ್ದ ಉಪಗ್ರಹವು ಮಿಲಿಟರಿ ಗೂಢಚರ್ಯೆ ನಡೆಸುವಷ್ಟು ಸಮರ್ಥವಾಗಿರಲಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ.

North Korean satellite wasn't advanced enough to conduct reconnaissance
North Korean satellite wasn't advanced enough to conduct reconnaissance

ಸಿಯೋಲ್, ದಕ್ಷಿಣ ಕೊರಿಯಾ:ಉತ್ತರ ಕೊರಿಯಾವು ತಾನು ಕಕ್ಷೆಗೆ ಸೇರಿಸಲು ವಿಫಲವಾದ ತನ್ನ ಉಪಗ್ರಹದ ಬಗ್ಗೆ ಹೇಳಿಕೊಂಡ ಹಾಗೆ ಅದು ಬಾಹ್ಯಾಕಾಶದಿಂದ ಮಿಲಿಟರಿ ವಿಚಕ್ಷಣೆ ನಡೆಸುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಉತ್ತರ ಕೊರಿಯಾದ ಉಪಗ್ರಹದ ಅವಶೇಷಗಳನ್ನು ಅಧ್ಯಯನ ಮಾಡಿದ ನಂತರ ದಕ್ಷಿಣ ಕೊರಿಯಾದ ಮಿಲಿಟರಿ ಈ ಮಾಹಿತಿ ಬಹಿರಂಗಪಡಿಸಿದೆ.

ಮೇ ಅಂತ್ಯದಲ್ಲಿ ಉತ್ತರ ಕೊರಿಯಾ ತನ್ನ ಮೊದಲ ಗೂಢಚಾರಿಕೆ ಉಪಗ್ರಹವನ್ನು ಉಡಾವಣೆ ಮಾಡಲು ಪ್ರಯತ್ನಿಸಿತ್ತು. ಆದರೆ, ಅದನ್ನು ಹೊತ್ತೊಯ್ಯುವ ದೀರ್ಘ ಶ್ರೇಣಿಯ ರಾಕೆಟ್ ಕೊರಿಯನ್ ಪೆನಿನ್ಸುಲಾದ ಪಶ್ಚಿಮ ಕರಾವಳಿಯ ನೀರಿನಲ್ಲಿ ಬಿದ್ದು ಯೋಜನೆ ವಿಫಲವಾಗಿತ್ತು. ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಉಪಗ್ರಹವು ಬಾಹ್ಯಾಕಾಶ ಆಧಾರಿತ ವಿಚಕ್ಷಣ ವ್ಯವಸ್ಥೆಯ ಭಾಗವಾಗಬೇಕಿತ್ತು ಎಂದು ಉತ್ತರ ಕೊರಿಯಾ ಹೇಳಿತ್ತು.

ರಾಕೆಟ್ ಮತ್ತು ಉಪಗ್ರಹದ ಅವಶೇಷಗಳನ್ನು ಶೋಧಿಸಲು ದಕ್ಷಿಣ ಕೊರಿಯಾ ನೌಕಾಪಡೆಯ ಹಡಗುಗಳು, ವಿಮಾನಗಳು ಮತ್ತು ಡೈವರ್‌ಗಳನ್ನು ನಿಯೋಜಿಸಿತ್ತು. 36 ದಿನಗಳ ಕಾಲ ನಡೆದ ಈ ಕಾರ್ಯಾಚರಣೆ ಬುಧವಾರ ಅಂತ್ಯಗೊಂಡಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ರಾಕೆಟ್ ಮತ್ತು ಉಪಗ್ರಹದ ಅಸಂಖ್ಯಾತ ಮತ್ತು ಪ್ರಮುಖ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಜಂಟಿಯಾಗಿ ಪರಿಶೀಲಿಸಿದ ದಕ್ಷಿಣ ಕೊರಿಯಾ ಮತ್ತು ಯುಎಸ್ ತಜ್ಞರು, ಈ ಉಪಗ್ರಹವು ಮಿಲಿಟರಿ ವಿಚಕ್ಷಣ ಕಾರ್ಯಗಳನ್ನು ನಡೆಸಲು ಸಮರ್ಥವಾಗಿಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ದಕ್ಷಿಣ ಕೊರಿಯಾದ ಹೇಳಿಕೆಗೆ ಉತ್ತರ ಕೊರಿಯಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಕೆಟ್ ತನ್ನ ಮೊದಲ ಮತ್ತು ಎರಡನೇ ಹಂತಗಳನ್ನು ಬೇರ್ಪಡಿಸಿದ ನಂತರ ಒತ್ತಡವನ್ನು ಕಳೆದುಕೊಂಡಿತು ಮತ್ತು ನಂತರ ಸಮುದ್ರಕ್ಕೆ ಅಪ್ಪಳಿಸಿತು ಎಂದು ಉಡಾವಣೆ ವಿಫಲವಾದ ದಿನದಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿತ್ತು. ಉಪಗ್ರಹ ಉಡಾವಣೆ ವಿಫಲವಾಗಿರುವುದು ಈ ವರ್ಷದ ಅತ್ಯಂತ ಗಂಭೀರ ಲೋಪ ಎಂದು ಕಳೆದ ತಿಂಗಳು ನಡೆದ ಉತ್ತರ ಕೊರಿಯಾದ ಆಡಳಿತ ಪಕ್ಷದ ಸಭೆ ಪರಿಗಣಿಸಿತ್ತು ಮತ್ತು ಈ ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಉಡಾವಣೆ ವಿಫಲವಾಗಿರುವುದಕ್ಕೆ ಕಾರಣಗಳನ್ನು ತಿಳಿದುಕೊಂಡ ನಂತರ ಮತ್ತೊಮ್ಮೆ ಉಪಗ್ರಹ ಉಡಾವಣೆಗೆ ಪ್ರಯತ್ನಿಸುವುದಾಗಿ ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳು ಪ್ರತಿಜ್ಞೆ ಮಾಡಿದ್ದಾರೆ. ತಮ್ಮ ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮಿಲಿಟರಿ ಬೇಹುಗಾರಿಕಾ ಉಪಗ್ರಹ ಹೊಂದುವುದು ನಿರ್ಣಾಯಕವಾಗಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಪ್ರತಿಪಾದಿಸಿದ್ದಾರೆ. ಉತ್ತರ ಕೊರಿಯಾವು ಮಲ್ಟಿ ವಾರ್‌ಹೆಡ್ ಪರಮಾಣು ಕ್ಷಿಪಣಿಗಳು, ಘನ ಇಂಧನ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳಂತಹ ಇತರ ಹೈಟೆಕ್ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ವಿಶ್ವದ 4ನೇ ಅತಿದೊಡ್ಡ ಸಾಲಗಾರ ರಾಷ್ಟ್ರ ಪಾಕಿಸ್ತಾನ

ABOUT THE AUTHOR

...view details