ಕರ್ನಾಟಕ

karnataka

ರಾಜನಾಥ್ ಸಿಂಗ್ ಭೇಟಿ ಮುಂದೂಡಿಕೆ; ಶ್ರೀಲಂಕಾಗೆ ಭಾರತ ಎಚ್ಚರಿಕೆಯ ಸಂದೇಶ!

By ETV Bharat Karnataka Team

Published : Sep 3, 2023, 4:27 PM IST

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಯನ್ನು ಮುಂದೂಡುವ ಮೂಲಕ ಭಾರತವು ಶ್ರೀಲಂಕಾಗೆ ಕಟುವಾದ ಸಂದೇಶವನ್ನು ರವಾನಿಸಿದೆ.

Rajnath Singh's Sri Lanka visit postponement
Rajnath Singh's Sri Lanka visit postponement

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಶ್ರೀಲಂಕಾ ಭೇಟಿಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಭಾರತದ ದಕ್ಷಿಣ ದಿಕ್ಕಿನಲ್ಲಿರುವ ನೆರೆಯ ದೇಶವಾದ ಶ್ರೀಲಂಕಾ, ಚೀನಾದ ಹಡಗು ತನ್ನ ಜಲಪ್ರದೇಶ ಪ್ರವೇಶಿಸಲು ಅನುಮತಿ ನೀಡಿದ್ದಕ್ಕೆ ವ್ಯಗ್ರವಾಗಿರುವ ಭಾರತ ರಕ್ಷಣಾ ಸಚಿವರ ಭೇಟಿಯನ್ನು ಮುಂದೂಡುವ ಮೂಲಕ ಎಚ್ಚರಿಕೆಯ ಸಂದೇಶವನ್ನು ಆ ದೇಶಕ್ಕೆ ರವಾನಿಸಿದೆ. ಸೆಪ್ಟೆಂಬರ್ 2 ಮತ್ತು 3 ರಂದು ನಡೆಯಬೇಕಿದ್ದ ಭೇಟಿಯ ಆರಂಭಕ್ಕೂ ಮುನ್ನ ರಕ್ಷಣಾ ಸಚಿವಾಲಯ ಶುಕ್ರವಾರ ಸಂಜೆ ಹೇಳಿಕೆ ನೀಡಿದ್ದು, ಭೇಟಿಯನ್ನು ಮುಂದೂಡಲಾಗಿದೆ ಎಂದು ಘೋಷಿಸಿತು.

"ಅನಿವಾರ್ಯ ಕಾರಣಗಳಿಂದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಶ್ರೀಲಂಕಾ ಭೇಟಿಯನ್ನು ನಂತರದ ದಿನಾಂಕಕ್ಕೆ ಮುಂದೂಡಲಾಗಿದೆ" ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. "ಭಾರತ ಮತ್ತು ಶ್ರೀಲಂಕಾ ನಡುವೆ ಬಲವಾದ ದ್ವಿಪಕ್ಷೀಯ ಸಹಕಾರಕ್ಕೆ ರಾಜನಾಥ್ ಸಿಂಗ್ ಬದ್ಧರಾಗಿದ್ದಾರೆ. ಸಾಧ್ಯವಾದಷ್ಟು ಬೇಗ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಲು ಅವರು ಎದುರು ನೋಡುತ್ತಿದ್ದಾರೆ." ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

ರಾಜನಾಥ್ ಸಿಂಗ್ ಅವರು ಭೇಟಿಯ ಸಮಯದಲ್ಲಿ ಶ್ರೀಲಂಕಾ ಅಧ್ಯಕ್ಷ ಮತ್ತು ರಕ್ಷಣಾ ಸಚಿವ ರನಿಲ್ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್ ಗುಣವರ್ಧನೆ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಶ್ರೀಲಂಕಾದೊಂದಿಗಿನ ಭಾರತದ ರಕ್ಷಣಾ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಸಭೆಗಳಲ್ಲಿ ಪರಿಶೀಲಿಸಬೇಕಾಗಿತ್ತು. ರಾಜನಾಥ್ ಸಿಂಗ್ ಅವರು ಮಧ್ಯ ಶ್ರೀಲಂಕಾದ ನುವಾರಾ ಎಲಿಯಾ ಮತ್ತು ದೇಶದ ಪೂರ್ವ ಭಾಗದಲ್ಲಿರುವ ಟ್ರಿಂಕೋಮಲಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು.

ಭಾರತೀಯ ನೌಕಾಪಡೆಯು ಪ್ರಥಮ ಬಾರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿದ ಮಾರ್ಗದರ್ಶಿ ಕ್ಷಿಪಣಿ ನಾಶಕ ಐಎನ್ಎಸ್ ದೆಹಲಿ ಹಡಗು ಕೊಲಂಬೊ ಬಂದರಿನಲ್ಲಿ ಲಂಗರು ಹಾಕುವ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಉಪಸ್ಥಿತರಿರಬೇಕಿತ್ತು. ರಾಜನಾಥ್ ಸಿಂಗ್ ಅವರು ವಿಕ್ರಮಸಿಂಘೆ ಮತ್ತು ಶ್ರೀಲಂಕಾದ ಇತರ ಗಣ್ಯರಿಗೆ ಹಡಗಿನಲ್ಲಿ ಆತಿಥ್ಯ ನೀಡಬೇಕಿತ್ತು.

ಈಗ ಭೇಟಿಯನ್ನು ಮುಂದೂಡುವ ಮೂಲಕ ತನ್ನ ರಾಷ್ಟ್ರದ ಜಲಪ್ರದೇಶಕ್ಕೆ ಚೀನಾದ ಹಡಗನ್ನು ಪ್ರವೇಶಿಸಲು ಮತ್ತೆ ಅನುಮತಿ ನೀಡಿದ್ದಕ್ಕಾಗಿ ನವದೆಹಲಿ ಕೊಲಂಬೊಗೆ ತನ್ನ ಅಸಮಾಧಾನದ ಸಂದೇಶವನ್ನು ಕಳುಹಿಸಿದೆ. ಚೀನಾದ ನೌಕಾ ಹಡಗುಗಳನ್ನು ತನ್ನ ಜಲಪ್ರದೇಶಕ್ಕೆ ಬಿಟ್ಟುಕೊಳ್ಳದಂತೆ ಭಾರತದ ನಿರಂತರ ಪ್ರತಿರೋಧದ ಹೊರತಾಗಿಯೂ, ಶ್ರೀಲಂಕಾದ ರಕ್ಷಣಾ ಸಚಿವಾಲಯವು ಕಳೆದ ತಿಂಗಳು ಸಂಶೋಧನಾ ಹಡಗು ಎಂದು ಹೇಳಿಕೊಳ್ಳುವ ಚೀನಾದ ಶಿ ಯಾನ್ 6 ಗೆ ತನ್ನ ಜಲಪ್ರದೇಶ ಪ್ರವೇಶಿಸಲು ಅನುಮತಿ ನೀಡಿದೆ.

ಚೀನಾದ ಧ್ವಜದೊಂದಿಗೆ ಚಲಿಸುವ ಈ ಹಡಗು 1,115 ಡಿಡಬ್ಲ್ಯೂಟಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 90.6 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಚೀನಾದ ಸರ್ಕಾರಿ ಮಾಧ್ಯಮ ಸಿಜಿಟಿಎನ್ ಪ್ರಕಾರ, ಶಿ ಯಾನ್ 6 ವೈಜ್ಞಾನಿಕ ಸಂಶೋಧನಾ ಹಡಗು ಆಗಿದ್ದು ಸಮುದ್ರಶಾಸ್ತ್ರ, ಸಾಗರ ಪರಿಸರ ವಿಜ್ಞಾನ ಮತ್ತು ಸಾಗರ ಭೂವಿಜ್ಞಾನ ಪರೀಕ್ಷೆಗಳನ್ನು ನಡೆಸುವ 60 ಸಿಬ್ಬಂದಿಯನ್ನು ಹೊಂದಿದೆ. ಆದರೆ ವಾಸ್ತವವೆಂದರೆ ಇಂಥ ಹೆಚ್ಚಿನ ಚೀನೀ ಹಡಗುಗಳು ಮಿಲಿಟರಿ ಉದ್ದೇಶಗಳನ್ನು ಸಹ ಹೊಂದಿರುತ್ತವೆ.

ಈ ಹಡಗು ಅಕ್ಟೋಬರ್ 26 ರಂದು ಶ್ರೀಲಂಕಾಕ್ಕೆ ಆಗಮಿಸಲಿದ್ದು, ಕೊಲಂಬೊ ಮತ್ತು ಹಂಬಂಟೋಟ ಬಂದರುಗಳಲ್ಲಿ ನಿಲ್ಲಲಿದೆ. ಇದು 17 ದಿನಗಳ ಕಾಲ ಇಲ್ಲಿರಲಿದ್ದು, ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುತ್ತದೆ. ರಾಷ್ಟ್ರೀಯ ಜಲ ಸಂಪನ್ಮೂಲ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ನಾರಾ)ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾತ್ರ ಚೀನಾದ ಹಡಗಿಗೆ ಸಂಶೋಧನಾ ಕಾರ್ಯ ನಡೆಸಲು ಅವಕಾಶ ನೀಡಲಾಗುವುದು ಎಂದು ಶ್ರೀಲಂಕಾ ಭಾರತಕ್ಕೆ ಭರವಸೆ ನೀಡಲು ಪ್ರಯತ್ನಿಸುತ್ತಿದೆ. ಆದರೆ ನವದೆಹಲಿ ಶ್ರೀಲಂಕಾದ ಭರವಸೆಗಳಿಂದ ತೃಪ್ತಿ ಹೊಂದಿಲ್ಲ ಎಂದು ತೋರುತ್ತಿದೆ. ಈಗ, ರಾಜನಾಥ್ ಸಿಂಗ್ ಅವರ ಭೇಟಿಯನ್ನು ಮುಂದೂಡುವುದರೊಂದಿಗೆ ಕೊಲಂಬೊಗೆ ನವದೆಹಲಿಯ ಆಕ್ರೋಶ ಅರ್ಥವಾಗಿರಬಹುದು.

ಇದನ್ನೂ ಓದಿ : ಭಾರತದ ದೃಷ್ಟಿಕೋನ ವಿಶ್ವದ ಭವಿಷ್ಯಕ್ಕೆ ಮಾರ್ಗಸೂಚಿ; ಜಿ20 ಸಭೆಗೂ ಮುನ್ನ ಪ್ರಧಾನಿ ಮಾತು

ABOUT THE AUTHOR

...view details