ಕರ್ನಾಟಕ

karnataka

ಪಾಕಿಸ್ತಾನದಲ್ಲಿ 1956ರ ನಂತರ ಅತ್ಯಧಿಕ ಹಣದುಬ್ಬರ: ಜನಜೀವನ ದುಸ್ತರ

By

Published : May 3, 2023, 6:58 PM IST

ಪಾಕಿಸ್ತಾನದಲ್ಲಿ ಹಣದುಬ್ಬರ ಮಿತಿ ಮೀರಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಕೋಟ್ಯಂತರ ನಾಗರಿಕರು ಹಸಿವಿನಿಂದ ಬಳಲುವಂತಾಗಿದೆ.

Latest Pakistan inflation News
Latest Pakistan inflation News

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದಲ್ಲಿ ಗ್ರಾಹಕ ಬಳಕೆ ವಸ್ತುಗಳ ಬೆಲೆಯೇರಿಕೆಯು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಏಪ್ರಿಲ್​ನಲ್ಲಿ ಶೇ 36.4 ರಷ್ಟು ಹೆಚ್ಚಾಗಿದ್ದು, ಇದು 1964ರ ನಂತರ ದೇಶ ಕಂಡ ಅತ್ಯಧಿಕ ಹಣದುಬ್ಬರವಾಗಿದೆ. ಈ ಮೂಲಕ ಪಾಕಿಸ್ತಾನವು ಈ ವಿಷಯದಲ್ಲಿ ಶ್ರೀಲಂಕಾವನ್ನು ಹಿಮ್ಮೆಟ್ಟಿಸಿ ಏಷ್ಯಾದ ಅತಿವೇಗದ ಹಣದುಬ್ಬರ ಏರಿಕೆ ದಾಖಲಿಸಿದ ರಾಷ್ಟ್ರವೆಂಬ ಕುಖ್ಯಾತಿಗೆ ಈಗ ಪಾತ್ರವಾಗಿದೆ. 2023 ರಲ್ಲಿ ಈವರೆಗೆ ಪಾಕಿಸ್ತಾನ ಕರೆನ್ಸಿಯು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ. ಈ ವರ್ಷದಲ್ಲಿ ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಶೇ 20 ರಷ್ಟು ಮೌಲ್ಯ ಕಳೆದುಕೊಂಡಿದ್ದು, ಇದರಿಂದ ಆಮದು ವಸ್ತುಗಳು ದೇಶದಲ್ಲಿ ಮತ್ತಷ್ಟು ತುಟ್ಟಿಯಾಗಿವೆ.

ಏಪ್ರಿಲ್‌ನಲ್ಲಿ ಸಾರಿಗೆ ವೆಚ್ಚಗಳು ಶೇ 56.8 ರಷ್ಟು, ಆಹಾರ ಹಣದುಬ್ಬರ ಶೇ 48.1 ರಷ್ಟು ಏರಿಕೆಯಾಗಿವೆ ಎಂದು ಡೇಟಾ ತೋರಿಸಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಬೆಲೆಗಳು ಶೇ 21.6 ರಷ್ಟು ಮತ್ತು ಮತ್ತು ವಸತಿ, ನೀರು ಮತ್ತು ವಿದ್ಯುತ್ ವೆಚ್ಚಗಳು ಶೇ 16.9 ರಷ್ಟು ಏರಿಕೆಯಾಗಿವೆ. 6.5 ಶತಕೋಟಿ ಡಾಲರ್ ಮೊತ್ತದ ಸಾಲ ಕಾರ್ಯಕ್ರಮದ ಪುನರುಜ್ಜೀವನಕ್ಕಾಗಿ IMF ನ ಷರತ್ತುಗಳನ್ನು ಪೂರೈಸಲು ಸರ್ಕಾರವು ತೆರಿಗೆಗಳು ಮತ್ತು ಇಂಧನ ಬೆಲೆಗಳನ್ನು ಹೆಚ್ಚಿಸಿದ ನಂತರ ಪಾಕಿಸ್ತಾನದಲ್ಲಿ ಹಣದುಬ್ಬರವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಆಹಾರ ಮತ್ತು ಇಂಧನದಂತಹ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಸಾಲದ ಕಂತಿನ ಡೀಫಾಲ್ಟ್ ತಪ್ಪಿಸಲು ಪಾಕಿಸ್ತಾನಕ್ಕೆ ಬೇಲ್ಔಟ್ ನಿಧಿಗಳು ನಿರ್ಣಾಯಕವಾಗಿವೆ. ಆದಾಗ್ಯೂ ಐಎಂಎಫ್​ ಹೊಸ ಹಣಕಾಸು ಸಹಾಯವನ್ನು ಮರುಪ್ರಾರಂಭಿಸುವ ಮೊದಲು ಆರ್ಥಿಕತೆಯಲ್ಲಿ ಬದಲಾವಣೆ ಮಾಡುವಂತೆ ಷರತ್ತುಗಳನ್ನು ಹಾಕಿದೆ. ಬೆಲೆಯೇರಿಕೆಯ ಒತ್ತಡವನ್ನು ನಿಯಂತ್ರಿಸಲು, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ತನ್ನ ಬೆಂಚ್​ಮಾರ್ಕ್ ಬಡ್ಡಿ ದರವನ್ನು ಕಳೆದ ತಿಂಗಳು ಶೇ 21 ಕ್ಕೆ ಹೆಚ್ಚಿಸಿದೆ. ಇದು 1956 ರಿಂದ ಅತ್ಯಧಿಕವಾಗಿದೆ. ಏರುತ್ತಿರುವ ಹಣದುಬ್ಬರವು ಸಾಲದ ವೆಚ್ಚವನ್ನು ಸಹ ಹೆಚ್ಚಿಸಬಹುದು. ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಹೊಡೆತದಿಂದ ಪಾಕಿಸ್ತಾನ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಗಲೇ ಹಣದುಬ್ಬರದ ಹೊಡೆತ ಬಿದ್ದಿರುವುದು ಗಮನಾರ್ಹ.

ಮುಂದಿನ ಹಣಕಾಸು ನೀತಿ ಪರಾಮರ್ಶೆ ಸಭೆಯು ಜೂನ್ 12 ರಂದು ನಡೆಯಲಿದೆ. ಹಣದುಬ್ಬರವು ಸ್ಥಿರವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಕಳೆದ ತಿಂಗಳು ಹೇಳಿತ್ತು. ಆದರೆ ಇತ್ತೀಚಿನ ಮಾಹಿತಿಯನ್ನು ನೋಡಿದರೆ ಅದರ ಆಶಾವಾದ ಹುಸಿಯಾಗಿದೆ ಎಂದು ಕಂಡುಬಂದಿದೆ ಎಂದು ಅಟ್ಲಾಂಟಿಕ್ ಕೌನ್ಸಿಲ್‌ನ ದಕ್ಷಿಣ ಏಷ್ಯಾ ಕೇಂದ್ರದ ನಿರ್ದೇಶಕ ಉಝೈರ್ ಯೂನಸ್ ಹೇಳಿದ್ದಾರೆ. ಆಹಾರದ ಬೆಲೆಗಳು ಏರುಗತಿಯಲ್ಲಿ ಸಾಗಿರುವುದು ಬಹಳ ಕಳವಳಕಾರಿಯಾಗಿದೆ. ನಾಲ್ಕು ಮಿಲಿಯನ್​ಗೂ ಹೆಚ್ಚು ಜನ ಬಡತನ ರೇಖೆಯಿಂದ ಕೆಳಗೆ ಜಾರಿದ್ದಾರೆ. ಆಹಾರ ಪದಾರ್ಥಗಳ ಬೆಲೆಯೇರಿಕೆಯು ದೇಶದ ಹಲವಾರು ಮನೆಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ಯೂನಸ್ ತಿಳಿಸಿದ್ದಾರೆ.

ಈಗಾಗಲೇ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮೇಲೆ ಬೆಲೆಯೇರಿಕೆಯು ಗದಾಪ್ರಹಾರ ಮಾಡಿದೆ. ಅವರ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಅವರು ಅವಧಿಪೂರ್ವ ಚುನಾವಣೆಯನ್ನು ಬಯಸುತ್ತಿದ್ದಾರೆ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ : ನನ್ನ 3ನೇ ಹತ್ಯಾ ಯತ್ನ ನಡೆಯಲಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆತಂಕ

ABOUT THE AUTHOR

...view details