ಕರ್ನಾಟಕ

karnataka

ಉತ್ತರ ಕೊರಿಯಾ ಸ್ವಾತಂತ್ರ್ಯೋತ್ಸವಕ್ಕೆ ಚೀನಾ, ರಷ್ಯಾ ಪ್ರತಿನಿಧಿಗಳಿಗೆ ಆಹ್ವಾನ, ಪಾಶ್ಚಾತ್ಯ ರಾಷ್ಟ್ರಗಳಿಗೆ ಸಡ್ಡು?

By ETV Bharat Karnataka Team

Published : Sep 9, 2023, 7:58 PM IST

ಸರ್ವಾಧಿಕಾರಿ ಆಡಳಿತದ ಉತ್ತರ ಕೊರಿಯಾದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಚೀನಾ ಮತ್ತು ರಷ್ಯಾದ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಇದು ಪಾಶ್ವಾತ್ಯ ರಾಷ್ಟ್ರಗಳ ವಿರುದ್ಧದ ತಂತ್ರ ಎಂದು ಬಿಂಬಿಸಲಾಗಿದೆ.

ಉತ್ತರ ಕೊರಿಯಾ ಸ್ವಾತಂತ್ರ್ಯೋತ್ಸವ
ಉತ್ತರ ಕೊರಿಯಾ ಸ್ವಾತಂತ್ರ್ಯೋತ್ಸವ

ಸಿಯೋಲ್:ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಅಮೆರಿಕ, ಫ್ರಾನ್ಸ್​, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖ ನಾಯಕರನ್ನು ಒಟ್ಟುಗೂಡಿಸಲು ಭಾರತ ಮುಂದಾಗಿದೆ. ಇತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್, ರಷ್ಯಾ ಮತ್ತು ಚೀನಾವನ್ನು ಸನಿಹಕ್ಕೆ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭಾರತದ ಜಿ20 ಸಭೆಯಲ್ಲಿ ಗೈರಾಗಿದ್ದಾರೆ.

ಅಮೆರಿಕ, ಇಂಗ್ಲೆಂಡ್​, ಫ್ರಾನ್ಸ್ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್​ ಮೇಲಿನ ರಷ್ಯಾ ಯುದ್ಧವನ್ನು ಟೀಕಿಸಿ, ನಿರ್ಬಂಧ ಹೇರಿವೆ. ಇದರಿಂದ ಖುದ್ದು ಹೋಗಿರುವ ರಷ್ಯಾ ಚೀನಾದ ಸಖ್ಯವನ್ನು ಬಲಪಡಿಸಿಕೊಳ್ಳುತ್ತಿದೆ. ಇದರ ಜೊತೆಗೆ ಈಚೆಗಷ್ಟೇ ಉತ್ತರ ಕೊರಿಯಾ ಜೊತೆಗೆ ಮಾತುಕತೆ ನಡೆಸಿದ್ದು, ಯುದ್ಧ ಸಾಮಗ್ರಿ ಒಪ್ಪಂದಕ್ಕೆ ಮುಂದಾಗಿದೆ. ಶಸ್ತ್ರಾಸ್ತ್ರ ಒಪ್ಪಂದ ಕುರಿತು ವ್ಲಾಡಿಮಿರ್ ಪುಟಿನ್ ಜೊತೆಗೆ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶೀಘ್ರದಲ್ಲೇ ರಷ್ಯಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ.

ಅರೆಸೈನಿಕ ಪಡೆ ಪರೇಡ್​ಗೆ ಆಹ್ವಾನ:ಉತ್ತರ ಕೊರಿಯಾದ 75 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಅರೆಸೈನಿಕ ಪಡೆಗಳ ಪರೇಡ್​ನಲ್ಲಿ ಚೀನಾ ಮತ್ತು ರಷ್ಯಾಕ್ಕೆ ಆಹ್ವಾನ ನೀಡಲಾಗಿದೆ. ಪರೇಡ್​ನಲ್ಲಿ ಭಾಗವಹಿಸಲು ಚೀನಾದ ಅಧಿಕಾರಿ ಪ್ರತಿನಿಧಿಗಳು ಮತ್ತು ರಷ್ಯಾದ ಕಲಾವಿದರು ಉತ್ತರ ಕೊರಿಯಾಕ್ಕೆ ತೆರಳಿದ್ದಾರೆ. ಇದು ಮೂರು ರಾಷ್ಟ್ರಗಳ ಬಾಂಧವ್ಯ ವೃದ್ಧಿ ಮತ್ತು ಅಮೆರಿಕ ವಿರುದ್ಧದ ಪ್ರಯತ್ನ ಎಂದು ಬಿಂಬಿಸಲಾಗಿದೆ.

ಉತ್ತರ ಕೊರಿಯಾದ ಸ್ವಾತಂತ್ರ್ಯೋತ್ಸವ ಆಚರಣೆಗೆ ವೈಸ್ ಪ್ರೀಮಿಯರ್ ಲಿಯು ಗುವೊಜಾಂಗ್ ನೇತೃತ್ವದ ನಿಯೋಗವನ್ನು ಚೀನಾ ಕಳುಹಿಸಿದ್ದರೆ, ರಷ್ಯಾವು ಮಿಲಿಟರಿ ಹಾಡು ಹಾಡುವ ಮತ್ತು ನೃತ್ಯ ಮಾಡುವ ಗುಂಪನ್ನು ಕಳುಹಿಸಿದೆ.

ವರದಿಗಳ ಪ್ರಕಾರ, ರಷ್ಯಾ ಮತ್ತು ಉತ್ತರ ಕೊರಿಯಾ ಮಧ್ಯೆ ಶಸ್ತ್ರಾಸ್ತ್ರ ಒಪ್ಪಂದ ಮುಂದಿನ ವಾರದಲ್ಲಿ ಸಂಭವಿಸಬಹುದು ಎಂದು ಹೇಳಲಾಗಿದೆ. ಪುಟಿನ್ ಅವರು ಸೆ.10 ರಿಂದ 14 ರವರೆಗೆ ಉತ್ತರಕ ಕೊರಿಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ವೇಳೆ ಇಬ್ಬರೂ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2019 ರಲ್ಲಿ ಇದೇ ನಗರದಲ್ಲಿ ಸಭೆ ನಡೆಸಲಾಗಿತ್ತು. ಈಗ ಅದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಜಿ20 ಶೃಂಗಸಭೆ: ಪರಿಸರ ಸ್ನೇಹಿ ಜೈವಿಕ ಇಂಧನ ಜಾಗತಿಕ ಮೈತ್ರಿಕೂಟ ರಚನೆಗೆ ಭಾರತ ಪ್ರಸ್ತಾಪ

ABOUT THE AUTHOR

...view details