ಕರ್ನಾಟಕ

karnataka

ಗಾಜಾ ಮೇಲಿನ ದಾಳಿ ನಿಲ್ಲಿಸದಿದ್ದರೆ ಮಧ್ಯಪ್ರವೇಶ-ಇಸ್ರೇಲ್​ಗೆ ಇರಾನ್ ಎಚ್ಚರಿಕೆ; ಮತ್ತೊಂದು ಯುದ್ಧವಿಮಾನ ವಾಹಕ ನೌಕೆ ಕಳುಹಿಸಿಕೊಟ್ಟ ಅಮೆರಿಕ

By ETV Bharat Karnataka Team

Published : Oct 15, 2023, 3:06 PM IST

ಈ ಕೂಡಲೇ ಯುದ್ಧ ನಿಲ್ಲಿಸದಿದ್ದರೆ ತಾನು ಯುದ್ಧದಲ್ಲಿ ಮಧ್ಯಪ್ರವೇಶ ಮಾಡುವುದು ಅನಿವಾರ್ಯವಾಗಲಿದೆ ಎಂದು ಇರಾನ್ ಇಸ್ರೇಲ್ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ, ಇರಾನ್ ಮತ್ತು ಹಿಜ್ಬುಲ್ಲಾ ಉಗ್ರರನ್ನು ತಡೆಯಲು ಅಮೆರಿಕ ಮತ್ತೊಂದು ಬೃಹತ್ ಯುದ್ಧ ವಿಮಾನ ನೌಕೆಯನ್ನು ಇಸ್ರೇಲ್‌ಗೆ ಬೆಂಬಲದ ಭಾಗವಾಗಿ ಕಳುಹಿಸಿಕೊಟ್ಟಿದೆ.

intervention if the attacks on Gaza are not stopped Iran warns Israel
intervention if the attacks on Gaza are not stopped Iran warns Israel

ವಿಶ್ವಸಂಸ್ಥೆ : ಗಾಜಾ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಲಿದ್ದು, ಇಸ್ರೇಲ್ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇರಾನ್ ಎಚ್ಚರಿಕೆಯ ಸಂದೇಶ ನೀಡಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಇರಾನ್ ಮಿಷನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಗಾಜಾ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ತಾನು ಅದಕ್ಕೆ ಪ್ರತಿಕ್ರಿಯಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.

"ಇಸ್ರೇಲ್​ ತನ್ನ ವರ್ಣಭೇದ ನೀತಿಯ ಯುದ್ಧಾಪರಾಧಗಳು ಮತ್ತು ನರಮೇಧವನ್ನು ತಕ್ಷಣ ನಿಲ್ಲಿಸದಿದ್ದರೆ, ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಬಹುದು ಮತ್ತು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಇದನ್ನು ತಡೆಗಟ್ಟುವ ಜವಾಬ್ದಾರಿ ವಿಶ್ವಸಂಸ್ಥೆ, ಭದ್ರತಾ ಮಂಡಳಿ ಮತ್ತು ಕೌನ್ಸಿಲ್​ ರಾಷ್ಟ್ರಗಳ ಮೇಲಿದೆ" ಎಂದು ಇರಾನ್​ನ ಯುಎನ್ ಮಿಷನ್ ಪೋಸ್ಟ್ ಮಾಡಿದೆ.

ಜನನಿಬಿಡ ಪ್ರದೇಶವಾಗಿರುವ ಗಾಜಾದಲ್ಲಿ ವಾಸಿಸುವ ಪ್ಯಾಲೆಸ್ಟೈನಿಯರು ಈಜಿಪ್ಟ್​ನ ಮುಚ್ಚಿದ ಗಡಿಯ ಕಡೆಗೆ ದಕ್ಷಿಣಕ್ಕೆ ಪಲಾಯನ ಮಾಡುವಂತೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಗಾಜಾ ಪಟ್ಟಿಯಲ್ಲಿ ಇರಾನ್ ಬೆಂಬಲಿತ ಹಮಾಸ್ ವಿರುದ್ಧ ನೆಲದ ಮೂಲಕ ದಾಳಿ ನಡೆಸಲು ಇಸ್ರೇಲ್ ಶನಿವಾರ ಸಿದ್ಧತೆ ನಡೆಸಿತ್ತು. ಒಂದು ವಾರದ ಹಿಂದೆ ಹಮಾಸ್​ ಇಸ್ಲಾಮಿಸ್ಟ್ ಗುಂಪು ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಿರ್ನಾಮ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಹಮಾಸ್ ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿ 1,300 ಜನರನ್ನು ಕೊಂದು ಹಲವಾರು ಜನರನ್ನು ಒತ್ತೆಯಾಳಾಗಿ ಎಳೆದುಕೊಂಡು ಹೋಗಿತ್ತು.

ಇಸ್ರೇಲ್ ಮತ್ತು ಹಮಾಸ್​ ಮಧ್ಯದ ಸಂಘರ್ಷದಲ್ಲಿ ಇರಾನ್ ಮಧ್ಯ ಪ್ರವೇಶಿಸದಂತೆ ಮಾಡಲು ಅಮೆರಿಕ ಪ್ರಯತ್ನ ಮಾಡುತ್ತಿದೆ. ವಿಶಾಲವಾದ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಭಾಗವಾಗಿ ಯುದ್ಧವು ಲೆಬನಾನ್​ಗೆ ಹರಡದಂತೆ ಮತ್ತು ಇದೊಂದು ಪ್ರಾದೇಶಿಕ ಯುದ್ಧವಾಗಿ ಮಾರ್ಪಾಡಾಗದಂತೆ ನೋಡಿಕೊಳ್ಳುವುದು ಅಮೆರಿಕದ ಉದ್ದೇಶವಾಗಿದೆ. ಲೆಬನಾನ್ ನ ಇರಾನ್ ಬೆಂಬಲಿತ ಭಾರಿ ಶಸ್ತ್ರಸಜ್ಜಿತ ಹಿಜ್ಬುಲ್ಲಾ ಉಗ್ರವಾದಿಗಳ ಗುಂಪು ಕಳೆದ ಒಂದು ವಾರದಲ್ಲಿ ಲೆಬನಾನ್ ಗಡಿಯುದ್ದಕ್ಕೂ ಇಸ್ರೇಲ್‌ನೊಂದಿಗೆ ಅನೇಕ ಬಾರಿ ಘರ್ಷಣೆ ನಡೆಸಿದೆ.

ಅಮೆರಿಕದಿಂದ ಮತ್ತೊಂದು ವಿಮಾನ ವಾಹನ ನೌಕೆ ರವಾನೆ: ಇರಾನ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತೊಂದು ಅತ್ಯಾಧುನಿಕ ಬೃಹತ್ ವಿಮಾನ ವಾಹಕ ನೌಕೆಯನ್ನು ಇಸ್ರೇಲ್‌ಗೆ ಬೆಂಬಲವಾಗಿ ರವಾನಿಸಿದೆ. ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಹಿಜ್ಬುಲ್ಲಾ ಉಗ್ರರು ಮತ್ತು ಇರಾನ್ ಮಧ್ಯಪ್ರವೇಶಿಸದಂತೆ ತಡೆಯುುವುದು ಇದರ ಉದ್ದೇಶ.

ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ಶಾಂತಿ ರಾಯಭಾರಿ ಟಾರ್ ವೆನ್ನೆಸ್ಲ್ಯಾಂಡ್ ಅವರು ಶನಿವಾರ ಬೈರುತ್ನಲ್ಲಿ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಅವರನ್ನು ಭೇಟಿಯಾಗಿದ್ದರು ಎಂದು ವಿಶ್ವಸಂಸ್ಥೆ ತಿಳಿಸಿದೆ. ನಂತರ ಅಬ್ದೊಲ್ಲಾಹಿಯಾನ್ ಕತಾರ್​ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಭೇಟಿಯಾದರು ಎಂದು ಅಲ್ ಜಜೀರಾ ಟಿವಿ ವರದಿ ಮಾಡಿದೆ.

ಇದನ್ನೂ ಓದಿ : ಯುದ್ಧದ ಎಫೆಕ್ಟ್​; ಅವಸಾನದತ್ತ ಪ್ಯಾಲೆಸ್ಟೈನ್​ನ ತಂತ್ರಜ್ಞಾನ-ಸ್ಟಾರ್ಟ್ ಅಪ್ ಉದ್ಯಮ

ABOUT THE AUTHOR

...view details