ಕರ್ನಾಟಕ

karnataka

ಇಮ್ರಾನ್ ಖಾನ್, ಮತ್ತವರ ಪಕ್ಷ ಪಿಟಿಐ ಈಗಲೂ ಪಾಕಿಸ್ತಾನದಲ್ಲಿ ಜನಪ್ರಿಯ; ಸಮೀಕ್ಷಾ ವರದಿ

By ETV Bharat Karnataka Team

Published : Jan 2, 2024, 3:44 PM IST

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಪಿಟಿಐ ಈಗಲೂ ಜನಪ್ರಿಯವಾಗಿವೆ ಎಂದು ಸಮೀಕ್ಷೆಗಳು ಹೇಳಿವೆ.

Imran Khan, PTI remain most popular in Pakistan
Imran Khan, PTI remain most popular in Pakistan

ಲಾಹೋರ್ (ಪಾಕಿಸ್ತಾನ) : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷ ಈಗಲೂ ಪಾಕಿಸ್ತಾನದಾದ್ಯಂತ ಸಾಕಷ್ಟು ಜನಪ್ರಿಯತೆ ಹೊಂದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ವಿವಿಧ ರಾಜಕೀಯ ನಾಯಕರು ಮತ್ತು ಪಕ್ಷಗಳ ಜನಪ್ರಿಯತೆಯ ಬಗ್ಗೆ ಇತ್ತೀಚೆಗೆ ನಡೆದ ಸಮೀಕ್ಷೆಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಆದಾಗ್ಯೂ ಪಂಜಾಬ್ ಪ್ರಾಂತ್ಯದಲ್ಲಿ ಪಿಟಿಐ ಮತ್ತು ಪಿಎಂಎಲ್-ಎನ್ ನಡುವಿನ ಜನಪ್ರಿಯತೆಯ ಅಂತರ ಕಡಿಮೆಯಾಗಿದ್ದು, ಇಲ್ಲಿ ಪಿಎಂಎಲ್-ಎನ್ ಪರವಾಗಿ ಜನಾಭಿಪ್ರಾಯ ವ್ಯಕ್ತವಾಗತೊಡಗಿದೆ ಎಂದು ಸಮೀಕ್ಷೆ ಹೇಳಿವೆ. ಕೆಲವು ತಿಂಗಳ ಹಿಂದೆ ಶೇಕಡಾ 15 ರಷ್ಟು ಇದ್ದ ಪಿಟಿಐನ ಜನಪ್ರಿಯತೆ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು ಶೇಕಡಾ 5ಕ್ಕೆ ಇಳಿದಿದೆ. ಆದರೆ ಇಡೀ ದೇಶದ ದೃಷ್ಟಿಕೋನದಲ್ಲಿ ನೋಡುವುದಾದರೆ ಪಿಟಿಐ ಈಗಲೂ ಪಿಎಂಎಲ್-ಎನ್ ಗಿಂತ ಸಾಕಷ್ಟು ಮುಂಚೂಣಿಯಲ್ಲಿದೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ ಕಳೆದ 2018ರ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪಿಟಿಐನ ಜನಪ್ರಿಯತೆ ದೇಶಾದ್ಯಂತ ಹೆಚ್ಚಾಗಿದೆ. ಹಾಗೆಯೇ ಪಿಎಂಎಲ್-ಎನ್ 2018ಕ್ಕಿಂತ ಈ ಬಾರಿ ಕಡಿಮೆ ಜನಪ್ರಿಯತೆ ಹೊಂದಿದೆ.

ಪಿಎಂಎಲ್-ಎನ್ ತನ್ನ ಭದ್ರಕೋಟೆಯಾಗಿದ್ದ ಪಂಜಾಬ್​ನಲ್ಲಿ 2022 ರ ಏಪ್ರಿಲ್ ನಂತರ ಮತ್ತೆ ಜನಪ್ರಿಯತೆ ಗಳಿಸಿಕೊಂಡಿದೆ. ಸ್ವಯಂ ದೇಶ ಭ್ರಷ್ಟರಾಗಿ ವಿದೇಶದಲ್ಲಿ ವಾಸಿಸುತ್ತಿದ್ದ ಮಾಜಿ ಪ್ರಧಾನಿ ಮತ್ತು ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ ಮರಳಿ ದೇಶಕ್ಕೆ ಬಂದ ನಂತರ ಅದು ಜನಪ್ರಿಯವಾಗತೊಡಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮುಂದಿನ ಐದು ವಾರಗಳು ರಾಜಕೀಯ ಪಕ್ಷಗಳಿಗೆ ಮತ್ತು ಮತದಾರರಿಗೆ ನಿರ್ಣಾಯಕವಾಗಿವೆ ಎಂದು ಹೇಳಲಾಗಿದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರವು ದಿನದಿಂದ ದಿನಕ್ಕೆ ವೇಗ ಪಡೆಯುವುದರಿಂದ ಮತದಾರರ ಪ್ರವೃತ್ತಿಯೂ ಬದಲಾಗುತ್ತದೆ. ಹೀಗಾಗಿ ಮತದಾನದ ದಿನ ಹತ್ತಿರವಾದಂತೆ ನಡೆಸಲಾಗುವ ಸಮೀಕ್ಷೆಗಳು ಮತ್ತು ಮೌಲ್ಯಮಾಪನಗಳು ಹೆಚ್ಚು ಪ್ರಸ್ತುತವಾಗುತ್ತವೆ.

ಕಳೆದ ವರ್ಷ ಜೂನ್-ಜುಲೈನಲ್ಲಿ ಗ್ಯಾಲಪ್ ನಡೆಸಿದ ಸಮೀಕ್ಷೆಯಲ್ಲಿ, ಶೇಕಡಾ 38 ರಷ್ಟು ಜನ ಪಿಟಿಐ, ಶೇಕಡಾ 16 ರಷ್ಟು ಪಿಎಂಎಲ್-ಎನ್, ಶೇಕಡಾ 10 ರಷ್ಟು ಪಿಪಿಪಿ, ಶೇಕಡಾ 15 ರಷ್ಟು ಟಿಎಲ್​ಪಿ, ಶೇಕಡಾ 9 ರಷ್ಟು ಜೆಐ ಮತ್ತು ಶೇಕಡಾ 6 ರಷ್ಟು ಎಂಕ್ಯೂಎಂಪಿಯನ್ನು ಇಷ್ಟಪಡುತ್ತಾರೆ ಎಂದು ತಿಳಿದು ಬಂದಿದೆ.

ರಾಜಕಾರಣಿಗಳಲ್ಲಿ, ಸಮೀಕ್ಷೆಯ ಪ್ರಕಾರ, ಇಮ್ರಾನ್ ಖಾನ್ ಅವರ ಜನಪ್ರಿಯತೆ ರೇಟಿಂಗ್ ಶೇಕಡಾ 60 ರಷ್ಟಿದ್ದರೆ, ನಂತರದ ಸ್ಥಾನಗಳಲ್ಲಿ ಸಾದ್ ರಿಜ್ವಿ ಮತ್ತು ಪರ್ವೇಜ್ ಇಲಾಹಿ ತಲಾ 38 ಶೇಕಡಾ, ಶಾ ಮೆಹಮೂದ್ ಖುರೇಷಿ ಶೇ 37, ನವಾಜ್ ಷರೀಫ್ ಶೇ 36, ಶೆಹಬಾಜ್ ಷರೀಫ್ ಶೇ 35, ಮರಿಯಮ್ ನವಾಜ್ ಶೇ 30, ಶಾಹಿದ್ ಖಾಕನ್ ಅಬ್ಬಾಸಿ ಶೇ 28 ಮತ್ತು ಇತರರು ಇದ್ದಾರೆ ಎಂದು ದಿ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ : ಕೆಂಪು ಸಮುದ್ರದಲ್ಲಿ ಹೌತಿ ಉಗ್ರರನ್ನು ಹೊಡೆದುರುಳಿಸಿದ ಯುಎಸ್​ ನೌಕಾಪಡೆ

ABOUT THE AUTHOR

...view details