ಕರ್ನಾಟಕ

karnataka

ಸುಡಾನ್​ನಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ: ರಾಜಧಾನಿ ಖಾರ್ಟೂಮ್​​ನಲ್ಲಿ ಭೀಕರ ಬಾಂಬಿಂಗ್!

By

Published : May 11, 2023, 2:30 PM IST

ಕೆಲ ದಿನಗಳ ಕಾಲ ಶಾಂತಿ ನೆಲೆಸಿದ ನಂತರ ಸುಡಾನ್ ರಾಜಧಾನಿ ಖಾರ್ಟೂಮ್​​ನಲ್ಲಿ ಮತ್ತೆ ಭೀಕರ ಕಾಳಗದ ವಾತಾವರಣ ಮರುಕಳಿಸಿದೆ. ಖಾರ್ಟೂಮ್ ಮತ್ತು ಅಲ್ ಹಲ್ಫಾಯಾ ಸೇತುವೆಯ ಸುತ್ತಲೂ ಬುಧವಾರ ಭೀಕರ ಘರ್ಷಣೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Violent clashes renew in Sudan's capital after relative calm
Violent clashes renew in Sudan's capital after relative calm

ಖಾರ್ಟೂಮ್ (ಸುಡಾನ್): ಕೆಲ ದಿನಗಳ ಶಾಂತತೆಯ ನಂತರ ರಾಜಧಾನಿ ಖಾರ್ಟೂಮ್‌ನಲ್ಲಿ ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಮತ್ತೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಜಧಾನಿಯ ಪಕ್ಕದ ನಗರಗಳಾದ ಬಹ್ರಿ ಮತ್ತು ಒಮ್‌ದುರ್‌ಮನ್‌ಗಳನ್ನು ಸಂಪರ್ಕಿಸುವ ಖಾರ್ಟೂಮ್ ಮತ್ತು ಅಲ್ ಹಲ್ಫಾಯಾ ಸೇತುವೆಯ ಸುತ್ತಲೂ ಬುಧವಾರ ಭೀಕರ ಘರ್ಷಣೆಗಳು ನಡೆದಿವೆ.

ಬಹ್ರಿಯ ಉತ್ತರ ಭಾಗದಲ್ಲಿ ಆರ್‌ಎಸ್‌ಎಫ್ ಮಿಲಿಟರಿ ಪೋಸ್ಟ್‌ಗಳ ಮೇಲೆ ಸೇನೆಯು ತೀವ್ರವಾದ ವಾಯು ಬಾಂಬ್ ದಾಳಿ ನಡೆಸುತ್ತಿರುವುದು ಮತ್ತು ಪ್ರಮುಖ ಬೀದಿಗಳಲ್ಲಿ ಸೇನಾ ಬೆಂಗಾವಲು ಪಡೆಗಳನ್ನು ನಿಯೋಜಿಸುವುದು ವಿಡಿಯೋ ಕ್ಲಿಪ್ ಒಂದರಲ್ಲಿ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವಿಡಿಯೊ ತುಣುಕು ಪ್ರಸಾರವಾಗಿದೆ.

"ಬಹ್ರಿಯಲ್ಲಿ ವ್ಯಾಪಕ ಬಾಂಬಿಂಗ್ ನಡೆಸಲಾಗಿದೆ ಮತ್ತು ಈ ಕಾರ್ಯಾಚರಣೆಯಲ್ಲಿ ನೂರಾರು ಬಂಡುಕೋರ ಅರೆ ಸೇನಾಪಡೆ ಯೋಧರು ಸಾವಿಗೀಡಾಗಿದ್ದಾರೆ. ಡಜನ್​ಗಟ್ಟಲೆ ಸಶಸ್ತ್ರ ವಾಹನಗಳನ್ನು ನಾಶಪಡಿಸಲಾಗಿದೆ. ಪ್ರದೇಶದಲ್ಲಿನ ಅನೇಕ ಶತ್ರು ಚೆಕ್‌ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ" ಎಂದು SAF ಹೇಳಿಕೆಯಲ್ಲಿ ತಿಳಿಸಿದೆ. ಹೋರಾಟ ನಡೆಯುತ್ತಿರುವ ಪ್ರದೇಶಗಳಲ್ಲಿ ನಾಗರಿಕರು ಮನೆಗಳಿಂದ ಹೊರಬರದಂತೆ ಮತ್ತು ತಮ್ಮ ಸುರಕ್ಷತೆಗಾಗಿ ಕಾಳಜಿ ವಹಿಸುವಂತೆ ಸೇನೆ ಎಚ್ಚರಿಕೆ ನೀಡಿದೆ.

ಖಾರ್ಟೂಮ್ ಸ್ಟೇಟ್ ಸೆಕ್ಯೂರಿಟಿ ಕಮಿಟಿಯು ಎಸ್​ಎಎಫ್ ಮುಖ್ಯಸ್ಥ ಅಬ್ದೆಲ್ ಫತಾ ಅವರಿಗೆ ತುರ್ತು ಮನವಿ ಅರ್ಜಿಯೊಂದನ್ನು ಸಲ್ಲಿಸಲಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಲು, ಕರ್ಫ್ಯೂ ಹೇರಲು ಮತ್ತು ಸೈನ್ಯದ ಜಮಾವಣೆ ಮಾಡುವಂತೆ ಮನವಿಯಲ್ಲಿ ಕೋರಲಿದೆ. ಅಲ್ಲದೇ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಮಿಟಿ ಮನವಿ ಮಾಡಲಿದೆ.

ಮೊದಲ ಬಾರಿಗೆ ಏಪ್ರಿಲ್ 15 ರಂದು ಹಿಂಸಾಚಾರ ಸ್ಫೋಟಗೊಂಡಾಗಿನಿಂದ 7,00,000 ಕ್ಕಿಂತ ಹೆಚ್ಚು ಜನರು ಈಗ ಸ್ಥಳಾಂತರಗೊಂಡಿದ್ದಾರೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ (IOM) ಅಂದಾಜಿಸಿದೆ. ವಿಶ್ವಸಂಸ್ಥೆ ಅಂಕಿ - ಅಂಶಗಳ ಪ್ರಕಾರ ಕನಿಷ್ಠ 1,00,000 ಸುಡಾನ್‌ ಪ್ರಜೆಗಳು ಸುರಕ್ಷತೆ ಅರಸಿ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೇ ಆರಂಭದಲ್ಲಿ ದೇಶದ ಆರೋಗ್ಯ ಸಚಿವಾಲಯವು ಒದಗಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಘರ್ಷಣೆಗಳಲ್ಲಿ ಕನಿಷ್ಠ 550 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 5,000 ಜನರು ಗಾಯಗೊಂಡಿದ್ದಾರೆ. ಸಂಘರ್ಷ ಕೊನೆಗೊಳಿಸಲು ಎರಡೂ ಪಕ್ಷಗಳ ನಡುವೆ ಸದ್ಯ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮಾತುಕತೆಗಳು ನಡೆದಿವೆ. ಆದರೆ, ಈವರೆಗೂ ಈ ಮಾತುಕತೆಗಳು ಯಾವುದೇ ಫಲ ನೀಡಿಲ್ಲ.

ಪ್ರಸ್ತುತ ಸಂಘರ್ಷದಿಂದಾಗಿ ಮುಂಬರುವ ತಿಂಗಳುಗಳಲ್ಲಿ 2.5 ಮಿಲಿಯನ್‌ಗೂ ಅಧಿಕ ಸುಡಾನಿಗಳು ಹಸಿವಿನಿಂದ ಬಳಲಲಿದ್ದಾರೆ ಎಂದು ಯುಎನ್ ವಿಶ್ವ ಆಹಾರ ಕಾರ್ಯಕ್ರಮವು ಬುಧವಾರ ಹೇಳಿದೆ. ತೀವ್ರ ಆಹಾರ ಅಭದ್ರತೆಯಿಂದ ಬಳಲುತ್ತಿರುವವರ ಸಂಖ್ಯೆಯು ಈಗ 19 ಮಿಲಿಯನ್‌ಗೆ ಏರಿಕೆಯಾಗಿದೆ. ಜೆಡ್ಡಾದಲ್ಲಿ ನಡೆಯುತ್ತಿರುವ ಮಾತುಕತೆಗಳು ಯಶಸ್ವಿಯಾಗಲಿ ಮತ್ತು ಯುದ್ಧ, ಲೂಟಿ, ದರೋಡೆ, ಅವ್ಯವಸ್ಥೆ ಕೊನೆಯಾಗಲಿ ಎಂಬುದೊಂದೇ ನಮ್ಮ ಬಯಕೆಯಾಗಿದೆ ಎಂದು 25 ವರ್ಷದ ಖಾರ್ಟೂಮ್ ನಿವಾಸಿ ಅಹ್ಮದ್ ಅಲಿ ಹೇಳಿದರು.

ಇದನ್ನೂ ಓದಿ : ತೆಲಂಗಾಣ ವೃತ್ತಿಪರ ಕೋರ್ಸ್​ನ ಪ್ರವೇಶ ಪರೀಕ್ಷೆ TS EAMCET: ಇಲ್ಲಿದೆ ಮಾಹಿತಿ

ABOUT THE AUTHOR

...view details