ಕರ್ನಾಟಕ

karnataka

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು ಪ್ರಕರಣ: ಸಾವಿನ ನಂತರ ನಗುತ್ತಿದ್ದ ಪೊಲೀಸ್​ ಅಧಿಕಾರಿಯ ವಿಡಿಯೋ ಬಹಿರಂಗ

By ETV Bharat Karnataka Team

Published : Sep 13, 2023, 3:49 PM IST

Updated : Sep 13, 2023, 4:35 PM IST

ಅಮೆರಿಕದಲ್ಲಿ ಜನವರಿ 23ರಂದು ಆಂಧ್ರ ಪ್ರದೇಶದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವಿನ ಸಮಯದಲ್ಲಿ ಪೊಲೀಸ್​ ಅಧಿಕಾರಿ ನಗುತ್ತಿದ್ದ ದೃಶ್ಯಾವಳಿ ಬಾಡಿಕ್ಯಾಮ್​ನಲ್ಲಿ ಸೆರೆಯಾಗಿದೆ.

Bodycam video shows US cop joking about Indian student killed by fellow officer
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು ಪ್ರಕರಣ: ಸಾವಿನ ನಂತರ ನಗುತ್ತಿದ್ದ ಪೊಲೀಸ್​ ಅಧಿಕಾರಿಯ ವಿಡಿಯೋ ಬಹಿರಂಗ

ನ್ಯೂಯಾರ್ಕ್ (ಅಮೆರಿಕ): ಅಮೆರಿಕದಲ್ಲಿ ಜನವರಿಯಲ್ಲಿ ಪೊಲೀಸ್ ಗಸ್ತು ಕಾರು ಡಿಕ್ಕಿ ಹೊಡೆದು ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಸಾವಿನ ನಂತರ ಪೊಲೀಸ್​ ಅಧಿಕಾರಿಯೊಬ್ಬರು ಫೋನ್​ನಲ್ಲಿ​ ನಗುತ್ತಾ ಮಾತನಾಡಿದ ಹಾಗೂ ಜೋಕ್​ ಮಾಡುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ಹೀಗಾಗಿ ಅಧಿಕಾರಿ ವಿರುದ್ಧ ತನಿಖೆ ಶುರು ಮಾಡಲಾಗಿದೆ.

ಜನವರಿ 23ರಂದು ಆಂಧ್ರ ಪ್ರದೇಶದ ಕರ್ನೂಲ್​ ಮೂಲದ ಜಾಹ್ನವಿ ಕಂದುಲಾ (23) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು. ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದ ಜಾಹ್ನವಿಗೆ ಪೊಲೀಸ್ ಕಾರು ಡಿಕ್ಕಿ ಹೊಡೆದಿತ್ತು. ಡೆಕ್ಸ್ಟರ್ ಅವೆನ್ಯೂ ನಾರ್ತ್ ಮತ್ತು ಥಾಮಸ್ ಸ್ಟ್ರೀಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಿಯಾಟಲ್ ಪೊಲೀಸ್ ಕಾರು ಗುದ್ದಿ ಮೃತಪಟ್ಟಿದ್ದರು. ಇದೀಗ ಬಾಡಿಕ್ಯಾಮ್ ದೃಶ್ಯಾವಳಿಗಳು ಬಿಡುಗಡೆಯಾಗಿವೆ.

ಹೊಸದಾಗಿ ಬಿಡುಗಡೆಯಾದ ಬಾಡಿಕ್ಯಾಮ್ ದೃಶ್ಯಾವಳಿಗಳಲ್ಲಿ ಸಿಯಾಟಲ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಸಹ ಪೊಲೀಸ್ ಓಡಿಸುತ್ತಿದ್ದ ಗಸ್ತು ಕಾರಿನಿಂದ ಡಿಕ್ಕಿ ಹೊಡೆದು ಸಾವನ್ನಪ್ಪಿದ ವಿದ್ಯಾರ್ಥಿನಿಯ ಬಗ್ಗೆ ಫೋನ್​ನಲ್ಲಿ ನಗುತ್ತಾ ಮಾತನಾಡುವುದು. ತಮಾಷೆ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೇ, ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಆಡೆರರ್ ಕಾರು ಚಾಲನೆ ಮಾಡುತ್ತಿರುವುದು ಸೆರೆಯಾಗಿದೆ. ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರೊಂದಿಗೆ ಮಾತನಾಡುತ್ತಾ ಡೇನಿಯಲ್, ''ಅವಳು ಸೀಮಿತ ಮೌಲ್ಯ ಹೊಂದಿದ್ದಳು'' (she had limited value) ಎಂಬುವುದಾಗಿ ಹೇಳುವುದನ್ನು ಕೇಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಷ್ಟೇ ಅಲ್ಲ, ಇದಾದ ಸ್ವಲ್ಪ ಹೊತ್ತಿನ ಬಳಿಕ ''ಅವಳು ಸತ್ತಿದ್ದಾಳೆ'' ಎಂದು ಡೇನಿಯಲ್ ನಗುತ್ತಾ "ಇದು ಸಾಮಾನ್ಯ ವ್ಯಕ್ತಿ'' ಎಂದು ಜಾಹ್ನವಿ ಕಂದುಲಾ ಅವರನ್ನು ಉಲ್ಲೇಖಿಸಿ ಹೇಳುತ್ತಾರೆ. ನಂತರ "ಕೇವಲ ಒಂದು ಚೆಕ್ ಬರೆಯಿರಿ.. 11,000 ಡಾಲರ್​.. ಅವಳು 26 ವರ್ಷ ವಯಸ್ಸಿನವಳು. ಅವಳು ಸೀಮಿತ ಮೌಲ್ಯವನ್ನು ಹೊಂದಿದ್ದಳು" ಎಂದು ಹೇಳುವುದು ಬಾಡಿಕ್ಯಾಮ್ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಕಾರು ಗಂಟೆಗೆ 50 ಮೈಲು ವೇಗದಲ್ಲಿ ಹೋಗಲಾಗುತ್ತಿತ್ತು. ತರಬೇತಿ ಪಡೆದ ಚಾಲಕನಿಗೆ ಅದು ನಿಯಂತ್ರಣದಿಂದ ಹೊರಗೆ ಇರಲಿಲ್ಲ ಎಂದೂ ಹೇಳುವುದು ಸೆರೆಯಾಗಿದೆ.

ಮತ್ತೊಂದೆಡೆ, ಜೂನ್‌ನಲ್ಲಿ ಹೊರಬಂದ ಪೊಲೀಸ್ ತನಿಖೆಯಲ್ಲಿ ಕಾರು ಚಾಲನೆಯು ವಾಸ್ತವವಾಗಿ ಗಂಟೆಗೆ 25 ಮೈಲು ವೇಗದ ವಲಯದಲ್ಲಿ ಗಂಟೆಗೆ 74 ಮೈಲು ವೇಗದಲ್ಲಿತ್ತು. ಜಾಹ್ನವಿ ಕಂದುಲಾ ಡಿಕ್ಕಿ ಹೊಡೆದು 100 ಅಡಿಗಳಿಗಿಂತ ಹೆಚ್ಚು ದೂರು ಬಿದ್ದಿದ್ದರು ಎಂಬುದು ಬಹಿರಂಗವಾಗಿತ್ತು. (ಐಎಎನ್​ಎಸ್​)

ಇದನ್ನೂ ಓದಿ:ಕೋಟಾದಲ್ಲಿ ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

Last Updated : Sep 13, 2023, 4:35 PM IST

ABOUT THE AUTHOR

...view details