ಕರ್ನಾಟಕ

karnataka

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬರ್ಮಿಂಗ್‌ಹ್ಯಾಮ್‌ನಲ್ಲಿ ವರ್ಣರಂಜಿತ ಚಾಲನೆ

By

Published : Jul 29, 2022, 7:55 AM IST

ಪ್ರಪಂಚದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕಳೆದ ರಾತ್ರಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಅದ್ಧೂರಿ ಚಾಲನೆ ದೊರೆಯಿತು.

Commonwealth Games Opening Ceremony
ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

ಬರ್ಮಿಂಗ್​​ಹ್ಯಾಮ್: 'ಮಿನಿ ಒಲಿಂಪಿಕ್ಸ್' ಎಂದೇ ಹೆಸರಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ 22ನೇ ಆವೃತ್ತಿ ಗುರುವಾರದಿಂದ ಆರಂಭವಾಗಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಸುಮಾರು 30,000 ಪ್ರೇಕ್ಷಕರ ನಡುವೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿತು.

ಬರ್ಮಿಂಗ್‌ಹ್ಯಾಮ್‌ನ ಭವ್ಯತೆ, ಶ್ರೀಮಂತ ಸಂಸ್ಕೃತಿ, ಸಂಗೀತ ಮತ್ತು ವೈವಿಧ್ಯತೆಯ ಅದ್ಭುತ ಪ್ರದರ್ಶನ ಅದ್ಧೂರಿ ಕಾರ್ಯಕ್ರಮದಲ್ಲಿ ಮೇಳೈಸಿತು. ಜಗತ್ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್‌ಗೆ ಗೌರವ ಸಮರ್ಪಣೆ ನಡೆಯಿತು. ಕ್ವೀನ್ ಎಲಿಜಬೆತ್ II ಅನುಪಸ್ಥಿತಿಯಲ್ಲಿ ಪ್ರಿನ್ಸ್ ಚಾರ್ಲ್ಸ್ ಪ್ರತಿನಿಧಿಸಿದರು.

ಏನಿದು ಕಾಮನ್‌ವೆಲ್ತ್ ಗೇಮ್ಸ್?ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆ. ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್​ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಸದ್ಯ ಕಾಮನ್​ವೆಲ್ತ್​ ಒಕ್ಕೂಟದಲ್ಲಿ 56 ಸದಸ್ಯ ರಾಷ್ಟ್ರಗಳಿವೆ. ಇದಲ್ಲದೆ ಒಲಿಂಪಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸದ ಇತರ ಪ್ರಾಂತ್ಯಗಳಿಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿ 72 ಧ್ವಜಗಳ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.

ಜು.28 ರಿಂದ ಶುರುವಾಗಲಿರುವ ಗೇಮ್ಸ್​ಗೆ ಆ.8ರಂದು ತೆರೆಬೀಳಲಿದೆ. ಭಾರತದಿಂದ 214 ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದಾರೆ. 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಒಟ್ಟು 66 ಪದಕ ಗೆದ್ದಿದ್ದ ಭಾರತ ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಟಾಪ್- 5ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಪಿ.ವಿ.ಸಿಂಧು ಭಾರತ ತಂಡದ ಧ್ವಜಧಾರಿಣಿ:ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡವನ್ನು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮತ್ತು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಧ್ವಜಧಾರಿಯಾಗಿ ಮುನ್ನಡೆಸಿದ್ದಾರೆ. ಈ ಹಿಂದೆ ನೀರಜ್ ಚೋಪ್ರಾ ಧ್ವಜಧಾರಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಗಾಯದ ಕಾರಣ ಚೋಪ್ರಾ ಕಾಮನ್​ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದ ಕಾರಣ ಪಿ.ವಿ.ಸಿಂಧು ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಾಮನ್​ವೆಲ್ತ್​ ಕ್ರೀಡಾಕೂಟ: ರಾಷ್ಟ್ರ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶ; ದೊಡ್ಡ ಗೌರವ ಎಂದ ಸಿಂಧು

ABOUT THE AUTHOR

...view details