ಕರ್ನಾಟಕ

karnataka

ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ..

By ETV Bharat Karnataka Team

Published : Sep 11, 2023, 2:39 PM IST

China plane makes emergency landing in Singapore: 146 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯೊಂದಿಗೆ A320 ಚೀನಾದ ವಿಮಾನ ಭಾನುವಾರ ಸಂಜೆ 4.15ರ ಸುಮಾರಿಗೆ ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಚಾಂಗಿ ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ತಿಳಿಸಿವೆ.

China plane emergency landing
ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ..

ಬೀಜಿಂಗ್ (ಚೀನಾ):ಎಂಜಿನ್​ನಲ್ಲಿ ಬೆಂಕಿ ಕಾಣಿಕೊಂಡಿರುವ ಹಿನ್ನೆಲೆ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಆವರಿಸಿದೆ. ಪರಿಣಾಮ 9 ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ. ಚೀನಾದ ಏರ್‌ಲೈನ್‌ನ ಏರ್‌ ಚೀನಾ ವಿಮಾನದ ಇಂಜಿನ್‌ಗೆ ಬೆಂಕಿ ತಗುಲಿ, ಅದರ ಕ್ಯಾಬಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಸಿಂಗಾಪುರದ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಯಿತು.

146 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಇದ್ದ ಚೀನಾದ A320 ವಿಮಾನವು ಭಾನುವಾರ ಸಂಜೆ 4.15 ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ಚಾಂಗಿ ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ತಮ್ಮ ಜೆಟ್‌ಲೈನರ್‌ನ ಫೇಸ್‌ಬುಕ್ ಪೇಜ್​ನಲ್ಲಿ ತಿಳಿಸಿವೆ. ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಗರದಿಂದ ವಿಮಾನ ಬರುತ್ತಿತ್ತು.

ತುರ್ತು ಲ್ಯಾಂಡಿಂಗ್‌ಗೆ ಅನುಮತಿ:ಅಧಿಕಾರಿಗಳ ಪ್ರಕಾರ, ವಿಮಾನದಲ್ಲಿ ಕ್ಯಾಬಿನ್‌ನಲ್ಲಿ ಹೊಗೆ ತುಂಬಿತ್ತು. ಸ್ಥಳಾಂತರಿಸುವ ಸಮಯದಲ್ಲಿ ಕೆಲವರು ಉಸಿರಾಟದ ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನದ ಕಾರ್ಗೋ ಹೋಲ್ಡ್ (ಲಗೇಜ್ ಇರಿಸಲಾಗಿರುವ ಭಾಗ) ಮತ್ತು ಶೌಚಾಲಯದಲ್ಲಿ ಹೊಗೆ ಏರುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಪೈಲಟ್, ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೋರಿದರು. ಹೊಗೆಯಿಂದಾಗಿ ಕ್ಯಾಬಿನ್​ನಲ್ಲಿರುವ ಪ್ರಯಾಣಿಕರಿಗೆ ಕಣ್ಣು ಉರಿಯಲು ಕಾರಣವಾಯಿತು. ಕೆಲವು ಪ್ರಯಾಣಿಕರು ತಮ್ಮ ಆಸನಗಳಲ್ಲಿ ಎದ್ದು ನಿಂತರು. ನಂತರ ಸಿಬ್ಬಂದಿ ಸದಸ್ಯರು ತಾಳ್ಮೆಯಿಂದಿರಿ ಮತ್ತು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು ಎಂದು ಪ್ರಯಾಣಿಕರೊಬ್ಬರು ಚೀನಾದ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಚೀನಾದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ವಿಮಾನವನ್ನು ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಎಂಜಿನ್​ಗೆ ತಗುಲಿದ್ದ ಬೆಂಕಿಯನ್ನು ನಂದಿಸಲಾಗಿದೆ ಎಂದು ಏರ್ ಚೀನಾ ವಿಮಾನದ ಅಧಿಕಾರಿಗಳು ಸೋಮವಾರ ಮುಂಜಾನೆ ಹೇಳಿಕೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷದಿಂದ ವಿಮಾನದ ಎಂಜಿನ್‌ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದಿದೆ.

ತಾಂತ್ರಿಕ ದೋಷದ ಹಿನ್ನೆಲೆ ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ:ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದ ಹಿನ್ನೆಲೆ ಸೆ.4ರಂದು ತುರ್ತು ಭೂ ಸ್ಪರ್ಶ ಮಾಡಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದರು. ಇಲ್ಲಿನ ಬಿಜು ಪಟ್ನಾಯಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆದ 40 ನಿಮಿಷಗಳ ನಂತರ ಒಡಿಶಾದ ಭುವನೇಶ್ವರ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದ್ದರು.

ಈ ಕುರಿತು ತಿಳಿಸಿದ್ದ ಬಿಪಿಐಎ ನಿರ್ದೇಶಕ ಪ್ರಸನ್ನ ಪ್ರಧಾನ್ ಅವರು​, ''ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವನ್ನು ಸೆ.4ರಂದು ಬೆಳಿಗ್ಗೆ 8.20ಕ್ಕೆ ತುರ್ತು ಲ್ಯಾಂಡಿಂಗ್​ ಮಾಡಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ತಾಂತ್ರಿಕ ದೋಷ ಕಂಡು ಬಂದ ಕೂಡಲೇ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದ್ದರಿಂದ ತಾಂತ್ರಿಕ ತೊಂದರೆ ಆಗಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಜಾಗತಿಕ ತಾಪಮಾನ: ಯುಎಸ್​ ಓಪನ್ ಟೆನಿಸ್​ ಟೂರ್ನಿ ವೇಳೆ ಭಾರತ ಮೂಲದ ವ್ಯಕ್ತಿಯಿಂದ ಪ್ರತಿಭಟನೆ

ABOUT THE AUTHOR

...view details