ಕರ್ನಾಟಕ

karnataka

ಪಾಕ್​ಗೆ ಅತ್ಯಾಧುನಿಕ ಯುದ್ಧನೌಕೆ ನೀಡಿದ ಚೀನಾ: ಹಿಂದೂ ಮಹಾಸಾಗರದ ಮೇಲೆ ಕಣ್ಣು

By

Published : Nov 9, 2021, 5:24 PM IST

ಪಾಕ್​ಗೆ ಚೀನಾ ರಫ್ತು ಮಾಡಿರುವ ಯುದ್ಧನೌಕೆಯು ಅತ್ಯಂತ ದೊಡ್ಡ ಮತ್ತು ಸುಧಾರಿತ ಯುದ್ಧ ನೌಕೆಯಾಗಿದ್ದು, ಇನ್ನೂ ನಾಲ್ಕು ಯುದ್ಧನೌಕೆಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎಂದು ತಿಳಿದುಬಂದಿದೆ.

With an eye on Indian Ocean, China delivers largest, most advanced warship to Pakistan
ಪಾಕ್​ಗೆ ಅತ್ಯಾಧುನಿಕ ಯುದ್ಧನೌಕೆ ನೀಡಿದ ಚೀನಾ: ಹಿಂದೂ ಮಹಾಸಾಗರದ ಮೇಲೆ ಕಣ್ಣು..

ಬೀಜಿಂಗ್(ಚೀನಾ): ಪಾಕಿಸ್ತಾನದ ಅತ್ಯಾಪ್ತ ಗೆಳೆಯ ಚೀನಾ ಈಗ ತನ್ನದೇ ಆದ ಅತಿ ದೊಡ್ಡ ಮತ್ತು ಸುಧಾರಿತ ಯುದ್ಧನೌಕೆಯೊಂದನ್ನು ಪಾಕಿಸ್ತಾನಕ್ಕೆ ನೀಡಿದ್ದು, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದಲ್ಲೂ ಕೂಡಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದೆ.

ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (CSSC) ನಿರ್ಮಾಣ ಮಾಡಿರುವ ಈ ನೌಕೆಯನ್ನು ಶಾಂಘೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಹಸ್ತಾಂತರ ಮಾಡಲಾಗಿದೆ ಎಂದು ಸಿಎಸ್​ಎಸ್​ಸಿ ಸೋಮವಾರ ಘೋಷಿಸಿದೆ. 054A/P ಮಾದರಿಯ ನೌಕೆಗೆ ಪಿಎನ್​ಎಸ್​ ತುಘ್ರಿಲ್ ಎಂದು ಹೆಸರಿಡಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.

ಹಿಂದೂ ಮಹಾಸಾಗರದಲ್ಲಿ ಪಾಕಿಸ್ತಾನದ ಸಾಮರ್ಥ್ಯವನ್ನು ಪಿಎನ್​ಎಸ್ ತುಘ್ರಿಲ್‌ ಖಾತ್ರಿಪಡಿಸುತ್ತದೆ. ಒಟ್ಟಾರೆಯಾಗಿ ಭದ್ರತೆ ಹೆಚ್ಚುವುದಲ್ಲದೇ, ಹಿಂದೂ ಮಹಾಸಾಗರದಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಪಿಎನ್​ಎಸ್​ ತುಘ್ರಿಲ್ ನೆರವಾಗುತ್ತದೆ ಎಂದು ಚೀನಾಕ್ಕೆ ಪಾಕಿಸ್ತಾನಿ ರಾಯಭಾರಿಯಾಗಿರುವ ಮೊಯಿನ್ ಉಲ್ ಹಕ್ ಹೇಳಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ತಿಳಿಸಿದೆ.

ಪಿಎನ್​ಎಸ್ ತುಘ್ರಿಲ್​ನಲ್ಲಿ ಇರುವುದೇನು?

2017ರಲ್ಲೇ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಪಿಎನ್​ಎಸ್ ತುಘ್ರಿಲ್ ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದು, ನೌಕೆ ಮೇಲಿಂದ ನೌಕೆಯನ್ನು ಗುರಿಯಾಗಿಸಿ (Surface to Surface) ನೌಕೆ ಮೇಲಿಂದ ಗಾಳಿಯಲ್ಲಿರುವ ವಿಮಾನಗಳನ್ನು ಗುರಿಯಾಗಿಸಿ (Surface to Air) ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ನೀರೊಳಗಿನ ಕಾರ್ಯಾಚರಣೆಗಳಿಗೆ ಅತ್ಯದ್ಭುತವಾಗಿ ನೆರವಾಗಬಲ್ಲ ಸಾಮರ್ಥ್ಯವನ್ನು ಈ ಯುದ್ಧನೌಕೆ ಹೊಂದಿದೆ ಎಂದು ಪಾಕಿಸ್ತಾನ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನಕ್ಕಾಗಿ ಚೀನಾ ಸಿದ್ಧಪಡಿಸುತ್ತಿರುವ 054 ಮಾದರಿಯ ನಾಲ್ಕು ಯುದ್ಧನೌಕೆಗಳಲ್ಲಿ ಇದು ಮೊದಲನೇಯದಾಗಿದ್ದು, ಇನ್ನೂ ನಾಲ್ಕು ನೌಕೆಗಳನ್ನು ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಿರ್ಮಿಸಿ ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಲಿದೆ.

ಈ ಯುದ್ಧನೌಕೆ ಈವರೆಗೆ ಚೀನಾ ರಫ್ತು ಮಾಡಿರುವ ಅತ್ಯಂತ ದೊಡ್ಡ ಮತ್ತು ಸುಧಾರಿತ ಯುದ್ಧ ನೌಕೆಯಾಗಿದೆ. ಈ ಯುದ್ಧ ನೌಕೆಯಲ್ಲಿ ಯುದ್ಧ ನಿರ್ವಹಣಾ ವ್ಯವಸ್ಥೆ, ಆಧುನಿಕ ಸ್ವರಕ್ಷಣಾ ಸಾಮರ್ಥ್ಯ, ಸತತವಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಇದೆ ಎಂದು ಸಿಎಸ್​ಎಸ್​ಸಿ ಹೇಳಿದೆ.

ಇನ್ನು ಚೀನಾ ಪಾಕಿಸ್ತಾನಕ್ಕೆ ಅತಿ ದೊಡ್ಡ ಯುದ್ಧ ಸಾಮಗ್ರಿ ರಫ್ತು ಮಾಡುವ ದೇಶವಾಗಿದ್ದು, ಯುದ್ಧನೌಕೆ ಮಾತ್ರವಲ್ಲದೇ, ಪಾಕಿಸ್ತಾನ ವಾಯುಪಡೆಯ ಸಹಭಾಗಿತ್ವದಲ್ಲಿ ಜೆಎಫ್​-17 ಥಂಡರ್ ಫೈಟರ್ ಏರ್​ಕ್ರಾಫ್ಟ್​ ಸಿದ್ಧಪಡಿಸುತ್ತಿದೆ. ಇನ್ನೂ ಹಲವು ತಂತ್ರಗಳ ಮೂಲಕ ಭಾರತವನ್ನೇ ಗುರಿಯಾಗಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಡಿಜಿಬೋಟಿಯಿಂದ ಹಂಬನ್​ತೋಟಾವರೆಗೆ..

ಚೀನಾದ ಈಗಾಗಲೇ ಹಾರ್ನ್​ ಆಫ್ ಆಫ್ರಿಕಾದಲ್ಲಿರುವ ಡಿಜಿಬೋಟಿಯಲ್ಲಿ ಮೊದಲ ಮಿಲಿಟರಿ ನೆಲೆಯನ್ನು ಸ್ಥಾಪಿಸಿದೆ. ಇದು ಮಿಲಿಟರಿ ನೆಲೆ ಹಿಂದೂ ಮಹಾಸಾಗರದ ಸಮೀಪದಲ್ಲಿಯೇ ಇದೆ. ಪಾಕಿಸ್ತಾನದ ಗ್ವಾದಾರ್ ಬಂದರನ್ನು 'ವಶಕ್ಕೆ' ಪಡೆದಿರುವ ಚೀನಾ ಅಲ್ಲಿಂದ ಅರ್ಥಾತ್ ಅರಬ್ಬಿ ಸಮುದ್ರದಿಂದ ಚೀನಾದ ಕ್ಸಿನ್​ಜಿಯಾಂಗ್ ಪ್ರಾಂತ್ಯವನ್ನು ಸಂಪರ್ಕಿಸಲು ಯತ್ನಿಸುತ್ತಿದೆ.

ಇದಕ್ಕಾಗಿ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (CPEC) ಅಡಿಯಲ್ಲಿ 60 ಬಿಲಿಯನ್ ಅಮೆರಿಕನ್ ಡಾಲರ್​ಗಳನ್ನು ಖರ್ಚು ಮಾಡುತ್ತಿದೆ. ಇದರ ಜೊತೆಗೆ ಶ್ರೀಲಂಕಾದ ಹಂಬನ್​ತೋಟಾ ಬಂದರನ್ನು ಚೀನಾ 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದು, ಇಲ್ಲಿಂದಲೂ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ.

ಇದನ್ನೂ ಓದಿ:ಉಗ್ರಗಾಮಿ ಸಂಘಟನೆ ಟಿಎಲ್​ಪಿ ವಿರುದ್ಧದ ನಿಷೇಧ ಹಿಂಪಡೆದ ಪಾಕಿಸ್ತಾನ

ABOUT THE AUTHOR

...view details