ಕರ್ನಾಟಕ

karnataka

'ನಿನ್ನ ಜೀವನ ದಂತಕಥೆ, ನೆನಪು ಅಮರ': ಶಿವಣ್ಣನ ಭಾವುಕ ಶುಭಾಶಯ​

By

Published : Mar 17, 2023, 1:25 PM IST

ದಿ.ಪುನೀತ್ ರಾಜ್‌ಕುಮಾರ್​ ಜನ್ಮದಿನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ಹಾಗೂ ಸ್ಯಾಂಡಲ್​ವುಡ್​​ ಸೆಲೆಬ್ರಿಟಿಗಳು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

Shivarajkumar tweet
ಶಿವಣ್ಣ ಭಾವುಕ ಟ್ವೀಟ್​

ಬೆಂಗಳೂರು:ಇಂದು ದಿ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಅವರ ಸಹೋದರ ಶಿವರಾಜ್​​ ಕುಮಾರ್​ ಸೇರಿದಂತೆ ಸ್ಯಾಂಡಲ್​ವುಡ್‌​​ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ನಿನ್ನ ಜೀವನವೇ ದಂತಕಥೆ: "ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನು ಆಗಲೇ ಹೇಳ್ತಿತ್ತು. ನೀನು ನಕ್ಕರೆ ಎಲ್ಲರೂ ನಗ್ತಿದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಿದ್ರು. ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ".

"ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನೊಂದಿಗೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚಿ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಿದೀನಿ. ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು" ಎಂದು ಶಿವರಾಜ್​​ ಕುಮಾರ್​ ಟ್ವೀಟ್​ ಮಾಡಿದ್ದಾರೆ.

ಅಪ್ಪು ಅಜರಾಮರ: "ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಗೈದು ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ ಅವರ ಜನ್ಮಸ್ಮರಣೆಯಂದು ಗೌರವ ಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಸಾಧಕ ಚೇತನಕ್ಕೆ ನಮನ: "ತಮ್ಮ ವ್ಯಕ್ತಿತ್ವ ಹಾಗೂ ಕಲಾಪ್ರೌಢಿಮೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದ ಪ್ರತಿಭಾನ್ವಿತ ಕಲಾವಿದ, ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಪುತ್ರ, ಅಕಾಲಿಕವಾಗಿ ನಮ್ಮನ್ನಗಲಿದ ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ನಮನಗಳು" ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.

"ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದ ಸ್ಮರಣೆಗಳು" ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಪುನೀತ್ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ ಬಹಳ ವಿಶೇಷವಾದ ದಿನ ಎಂದು ನಟ ಸುದೀಪ್​​ ಟ್ವೀಟ್​ ಮಾಡಿದ್ದಾರೆ. ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು ಎಂದು ನಟ ನಿರ್ದೇಶಕ ರಿಷಬ್​ ಶೆಟ್ಟಿ ಟ್ವೀಟ್​ ಮಾಡಿದ್ಧಾರೆ. ಪ್ರಿಯ ಅಪ್ಪು, ನೀವು ನಮ್ಮ ಬದುಕಿನಲ್ಲಿ ಹೀಗೆ ಬಂದು ಹಾಗೆ ಹೋದವರಲ್ಲ, ಸದಾ ಚೇತನವಾಗಿ ಚಿರಸ್ಥಾಯಿಯಾದವರು. ನೆನಪು ಅಮರ. ನಿತ್ಯ ನಿರಂತರ! ಹುಟ್ಟು ಹಬ್ಬದ ಸವಿ ಸ್ಮರಣೆ ಎಂದು ಗೋಲ್ಡನ್​ ಸ್ಟಾರ್​ ಗಣೇಶ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಅಪ್ಪು ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಂದ ನೆಚ್ಚಿನ ನಟನ ಸ್ಮರಣೆ

ABOUT THE AUTHOR

...view details