ಕರ್ನಾಟಕ

karnataka

'ವರ್ತೂರ್ ಸಂತೋಷ್‌ ಗೆಲ್ಲಬೇಕು': ಬಿಗ್​ ಬಾಸ್​ ಬಗ್ಗೆ ಅವಿನಾಶ್‌ ಶೆಟ್ಟಿ ಪ್ರತಿಕ್ರಿಯೆ

By ETV Bharat Karnataka Team

Published : Dec 26, 2023, 5:36 PM IST

ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್ ಆಗಿರುವ ಅವಿನಾಶ್‌ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Avinash Shetty
ಅವಿನಾಶ್‌ ಶೆಟ್ಟಿ

'ಆನೆ ಪಳಗಿಸಲು ಓರ್ವ ಮಾವುತ ಬೇಕು ಅಂದುಕೊಂಡೆ. ಹಾಗಾಗಿ ಬಂದೆ'. ಇದು ಅಸ್ತಿಕ್ ಅವಿನಾಶ್‌ ಶೆಟ್ಟಿ ಅವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಯೊಳಗೆ ಹೋದ ಸಂದರ್ಭದಲ್ಲಿ ಹೇಳಿದ ಮಾತು. ಅವರ ಶೈಲಿ, ಆತ್ಮವಿಶ್ವಾಸ, ಮಾತುಗಳು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂದು ಸೂಚಿಸಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಹಿನ್ನಡೆ ಕಂಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಶೆಟ್ಟಿ ಮನೆಯಿಂದ ಹೊರಬಂದಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಒಬ್ಬರ ಹಿಂದೊಬ್ಬರಂತೆ ಮನೆಯಿಂದ ಹೊರ ಬರುವುದರ ಮೂಲಕ, ಅರ್ಧದಲ್ಲಿ ಮನೆ ಪ್ರವೇಶಿಸಿ ಮನೆಯೊಳಗೆ ಜಾಗ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬ ನೆಟ್ಟಿಗರ ಮಾತನ್ನು ನಿಜ ಮಾಡಿದ್ದಾರೆ.

ಮೈಕಲ್‌ ಮತ್ತು ಅವಿನಾಶ್‌ ಭಾನುವಾರದ ಸಂಚಿಕೆಯ ಕೊನೆಯಲ್ಲಿ ಕಾರಿನಲ್ಲಿ ಕುಳಿತು ಮನೆಯಿಂದ ಹೊರ ಹೋದಾಗ, ಈ ವಾರ ಡಬಲ್‌ ಎಲಿಮಿನೇಷನ್‌ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಊಹೆ ಸುಳ್ಳಾಗಿದೆ. ಬಿಗ್‌ ಬಾಸ್‌ ಸೋಮವಾರದ ಸಂಚಿಕೆಯಲ್ಲಿ ಹೊಸ ಟ್ವಿಸ್ಟ್ ನೀಡಿದ್ದಾರೆ. ಮೈಕಲ್ ಮತ್ತೆ ಮನೆಯೊಳಗೆ ಬಂದಿದ್ದಾರೆ. ಹೀಗಾಗಿ ಅವಿನಾಶ್ ಒಬ್ಬರೇ ಎಲಿಮಿನೇಟ್ ಆಗಿದ್ದಾರೆ. ಅವಿನಾಶ್‌ ಶೆಟ್ಟಿ ಜಿಯೋಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಬಿಗ್​ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣದ ಬಗ್ಗೆ ಮುಕ್ತವಾಗಿ ಮಾತನಾಡಿದರು.

''ಎಲ್ಲರಿಗೂ ನಮಸ್ಕಾರ. ನಾನು ಅಸ್ತಿಕ್ ಅವಿನಾಶ್ ಶೆಟ್ಟಿ. ಈಗ ತಾನೇ ಬಿಗ್‌ ಬಾಸ್ ಮನೆಯಿಂದ ಹೊರಗೆ ಬಂದಿದ್ದೇನೆ. ತುಂಬಾನೇ ಫೀಲಿಂಗ್ಸ್‌ ಇವೆ. ವೈಲ್ಡ್‌ಕಾರ್ಡ್‌ ಕಂಟೆಸ್ಟೆಂಟ್ ಆಗಿ ನಾಲ್ಕು ವಾರ ಇದ್ದೆ. ನನ್ನ ಬೆಸ್ಟ್ ಕೊಡಲು ಟ್ರೈ ಮಾಡಿದೆ. ಫಿನಾಲೆಯ ಸಮೀಪಕ್ಕೆ ಹೋಗಿ ಹೊರಗೆ ಬಂದಿದ್ದೇನೆ. ಹಾಗಾಗಿ ಸ್ವಲ್ಪ ದುಃಖ ಆಗ್ತಿದೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಸೇವ್‌ ಆಗ್ತೀನಿ ಅಂತಾನೇ ಅಂದುಕೊಂಡಿದ್ದೆ. ಆದರೆ ಹಣೆಬರಹ, ಏನೂ ಮಾಡಕ್ಕಾಗಲ್ಲ'' - ಅವಿನಾಶ್‌ ಶೆಟ್ಟಿ.

'ನಿರೀಕ್ಷೆ ಹೆಚ್ಚು ಇತ್ತು': ವೈಲ್ಡ್ ಕಾರ್ಡ್‌ ಕಂಟೆಸ್ಟೆಂಟ್ ಅಂದ ಮೇಲೆ ನಿರೀಕ್ಷೆಗಳು ಹೆಚ್ಚೇ ಇರುತ್ತವೆ. ಆ ನಿರೀಕ್ಷೆಗಳನ್ನು ಪೂರೈಸುವ ಹಾದಿಯಲ್ಲೇ ನಾನಿದ್ದೆ ಕೂಡ. ಒಂದು ವಾರ ಗ್ರೇಸ್ ಟೈಮ್ ಕೂಡ ಇತ್ತು. ನಾನು ಹೋದ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದನ್ನು ನಾನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ ಅನಿಸುತ್ತಿದೆ. ಆದರೆ ಗೇಮ್‌ನಲ್ಲಿ ನನ್ನತನವನ್ನು ಬಿಟ್ಟುಕೊಡಲಿಲ್ಲ ಎಂದರು.

ನಾನು ಮನೆಯೊಳಗೆ ಹೋದಾಗ ವಿನಯ್, ತನಿಷಾ, ಕಾರ್ತಿಕ್​​ ಎಲ್ಲರ ಬಗ್ಗೆಯೂ ಕೆಲವು ಪೂರ್ವನಿರ್ಧರಿತ ಅಭಿಪ್ರಾಯಗಳಿದ್ದವು. ಎಲ್ಲರಿಗಿಂತ ಕಡಿಮೆ ಪರಿಚಯ ಇದ್ದದ್ದು ವರ್ತೂರ್ ಸಂತೋಷ್ ಮತ್ತು ತುಕಾಲಿ ಸಂತೋಷ್ ಬಗ್ಗೆ. ಬಿಗ್​​ ಬಾಸ್​​ ಶುರುವಾಗಿ ಐವತ್ತು ದಿನಗಳ ನಂತರ ಮನೆಯೊಳಗೆ ಹೋದಾಗ ಬೇರೆ ರೀತಿಯದ್ದೇ ಸ್ಪಂದನೆ ಸಿಕ್ತು. ಯಾರಿವನು? ಯಾಕೆ ಬಂದಿದ್ದಾನೆ? ಎನ್ನುವ ರೀತಿಯಲ್ಲೇ ನನ್ನನ್ನು ನೋಡಿದರು. ನಾನಾಗೇ ಹೋಗಿ ಮಾತಾಡಲು ಯತ್ನಿಸಿದರೂ ಕೂಡ ರೆಸ್ಪಾನ್ಸ್ ಚೆನ್ನಾಗಿರಲಿಲ್ಲ. ಆದರೆ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರು ತುಂಬಾನೇ ಸ್ನೇಹದಿಂದ ನೋಡಿಕೊಂಡರು. ನಮ್ಮ ಅಭಿಪ್ರಾಯಗಳು ಮ್ಯಾಚ್ ಆಗುತ್ತಿದ್ದವು ಎಂದು ಅವಿನಾಶ್ ಹೇಳಿದರು.

ಅವಿನಾಶ್‌ ಶೆಟ್ಟಿ

ಕೆಲವು ಟಾಸ್ಕ್‌ಗಳಲ್ಲಿ ಎಂಟರ್​​​ಟೈನಿಂಗ್​​ ಆಗಿರಬೇಕು ಎಂಬ ಕಾರಣಕ್ಕೆ ಕೆಲವು ಚಟುವಟಿಕೆ ಮಾಡಿದ್ದೆ. ಉದಾಹರಣೆಗೆ, ಕುದುರೆಯ ಹಾಗೆ ಮಾಡುವುದು, ಇನ್ನೊಂದು ಕಡೆ ಟಾಸ್ಕ್‌ನಲ್ಲಿ ಜಿಂಕೆಯ ರೀತಿ ಆಡಿದ್ದೆ. ಕುದುರೆ, ಜಿಂಕೆ, ಮಾವುತ ಅಂತೆಲ್ಲಾ ಟ್ಯಾಗ್ ಮಾಡಲು ನೋಡಿದರು. ಕೆಲವೊಂದಿಷ್ಟು ಜನ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲು ಟ್ರೈ ಮಾಡಿದ್ರು ಅನಿಸ್ತು ಎಂದರು.

ನಾನು ಹೋದ ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದೇನೆ, ಗೆದ್ದಿಲ್ಲ. ಎರಡನೇ ವಾರವೂ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಟಾಪ್‌ 4 ಸ್ಪರ್ಧಿಗಳಲ್ಲಿ ನಾನಿದ್ದೆ. ನನ್ನ ಶಕ್ತಿಮೀರಿ ಪ್ರದರ್ಶನ ಕೊಟ್ಟಿದ್ದೇನೆ. ಈ ವಾರ ಎಲ್ಲಾ ವಿಚಾರದಲ್ಲಿಯೂ ಮುಂದಿದ್ದೆ. ಆದರೆ ಸಂಗೀತಾ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ನಾನು ಸಂಗೀತಾ ಬಗ್ಗೆ ಎಲ್ಲಿಯೂ ತಪ್ಪು ಆಪಾದನೆ ಮಾಡಿಲ್ಲ. ಹಾಗಾಗಿ ಸಂಗೀತಾ ಅವರಿಗೆ ತಪ್ಪು ಅರ್ಥ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ. ಆದರೆ ಅವರು ಮತ್ತೆ ತಂಡವನ್ನು ಹೊಂದಿಸುವಾಗ ನನ್ನನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ತನಿಷಾ ತಂಡ ಸೇರಿಕೊಂಡೆ. ಅಲ್ಲಿಯೂ ನನ್ನ ಪ್ರಯತ್ನ ಮುಂದುವರಿಸಿದೆ. ಕ್ಯಾಪ್ಟನ್ಸಿ ಟಾಸ್ಕ್ ಆಡಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ:'ಕ್ರಿಸ್ಮಸ್​​ಗೆ ನನಗೆ ಬೇಕಾಗಿರುವುದು ಇಷ್ಟೇ': ಚಿರು ನೆನಪಲ್ಲಿ ನಟಿ ಮೇಘನಾ ರಾಜ್

ವರ್ತೂರ್ ಸಂತೋಷ್ ಜೆನ್ಯೂನ್‌ ಮನುಷ್ಯ: ನನಗೆ ವರ್ತೂರ್ ಸಂತೋಷ್ ಬಹಳ ಜೆನ್ಯೂನ್‌ ಮನುಷ್ಯ ಅನಿಸುತ್ತದೆ. ವಿನಯ್ ಸ್ವಲ್ಪ ಫೇಕ್ ಮಾಡ್ತಿದ್ದಾರೆ ಅನಿಸುತ್ತಿದೆ. ತನಿಷಾ ಕೂಡ ಸ್ವಲ್ಪ ಫೇಕ್ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್ ಖಂಡಿತಾ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜೊತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್‌ ಅವರಿಗೆ ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ಬಹಳ ಚೆನ್ನಾಗಿ ಗೊತ್ತಿದೆ. ಸಂಗೀತಾ ಕೂಡ ಟಾಪ್‌ 5ನಲ್ಲಿ ಇರುತ್ತಾರೆ. ಕಾರ್ತಿಕ್ ಕೂಡ ಪ್ರಬಲ ಸ್ಪರ್ಧಿ. ತುಕಾಲಿ ಬುದ್ಧಿವಂತ. ಅಷ್ಟೇ ಸ್ವಯಂಕೇಂದ್ರಿತ ಮನುಷ್ಯ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆ ಇದೆ. ಮುಂದಿನ ವಾರ ನನ್ನ ಜಾಗದಲ್ಲಿ ಸಿರಿ ಇರುತ್ತಾರೆ ಅನಿಸುತ್ತಿದೆ ಎಂದರು.

ಇದನ್ನೂ ಓದಿ:ಮನೆಯವ್ರು ಬಂದ್ರು ದೊಡ್ಮನೆಗೆ: ಬಿಗ್​ ಬಾಸ್​​ ಸ್ಪರ್ಧಿಗಳಲ್ಲಿ ಸಂತಸವೋಸಂತಸ!!

ಜಿಯೊಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ನಲ್ಲಿ ನನಗೆ ಇಷ್ಟವಾಗಿದ್ದು, ಕಣ್ಣಿಗೆ ಪಟ್ಟಿ ಹಾಕಿಕೊಂಡು ಬಾಲ್ ಕಲೆಕ್ಟ್ ಮಾಡುವ ಟಾಸ್ಕ್‌. ಅದನ್ನು ನಾನು ಬಹಳ ಎಂಜಾಯ್ ಮಾಡಿದೆ. ಬಿಗ್‌ ಬಾಸ್‌ ಮನೆ ಎಂಬುದೇ ಒಂದು ಮ್ಯಾಜಿಕ್. ಅಲ್ಲಿ ಇರುವ ಸ್ಪರ್ಧಿಗಳಿಗಷ್ಟೇ ಅದರ ಮ್ಯಾಜಿಕ್ ಗೊತ್ತಾಗಲು ಸಾಧ್ಯ. ಅಲ್ಲಿನ ಶಿಸ್ತನ್ನು ಮಿಸ್ ಮಾಡಿಕೊಳ್ತೀನಿ. ಲೈಫ್‌ನಲ್ಲಿ ಶಿಸ್ತು ಏಕೆ ಮುಖ್ಯ ಎಂಬುದನ್ನು ಕಲಿಸಿಕೊಟ್ಟ ಮನೆ ಅದು. ಬಿಗ್‌ ಬಾಸ್ ನನ್ನ ಜೀವನದಲ್ಲಿಯೇ ಒಂದು ಗಾಡ್‌ಫಾದರ್. ಏಕೆಂದರೆ ನಾಲ್ಕೇ ವಾರ ಇದ್ದರೂ ಬದುಕಿನಲ್ಲಿ ನಲ್ವತ್ತು ವರ್ಷ ಇದ್ದಂಥ ಪಾಠ ಕಲಿಸಿದೆ. ಎಷ್ಟೇ ಚಿಕ್ಕ ವಿಚಾರವಾಗಲಿ, ಕೊರತೆಯಾಗಲಿ, ಸಮಸ್ಯೆಯಾಗಲಿ ತಕ್ಷಣವೇ ಗಮನಿಸಿ ಕೊಡುವ ಪರಿಹಾರ, ಪ್ರೀತಿಗೆ ನಾನು ಆಭಾರಿಯಾಗಿದ್ದೀನಿ. ಹಾಗಾಗಿಯೇ ಬಿಗ್‌ ಬಾಸ್‌ಗೆ ನಾನು ಋಣಿ ಎಂದು ಅವಿನಾಶ್ ಮಾತು ಮುಗಿಸಿದರು.

ABOUT THE AUTHOR

...view details