ಕರ್ನಾಟಕ

karnataka

ತೆಲುಗಿನ 'ವೇದ' ರಿಲೀಸ್: ಶಿವಣ್ಣನ ಮುಂದಿನ ಸಿನಿಮಾ ಯಾವುದು? ಭಕ್ತಿ ಪ್ರಧಾನ ಚಿತ್ರದತ್ತ ಹ್ಯಾಟ್ರಿಕ್‌ ಹೀರೋ ಚಿತ್ತ

By

Published : Feb 9, 2023, 8:01 PM IST

ಇಂದು ನಟ ಶಿವರಾಜ್ ​ಕುಮಾರ್ ಅಭಿನಯದ ತೆಲುಗು ಅವತರಣಿಕೆಯ ವೇದ ಚಿತ್ರ ತೆರೆ ಕಂಡಿದೆ.

telugu version veda movie release
ತೆಲುಗಿನ ವೇದ ರಿಲೀಸ್

ಹ್ಯಾಟ್ರಿಕ್ ಹೀರೋ ಶಿವರಾಜ್‌ ​ಕುಮಾರ್ ಅಭಿನಯದ 125ನೇ ವೇದ ಚಿತ್ರ ಡಿಸೆಂಬರ್​ 23ರಂದು ಬಿಡುಗಡೆಯಾಗಿ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಚಿತ್ರಕ್ಕೆ ಹೊರ ರಾಜ್ಯಗಳಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಇಂದು ತೆಲುಗು ಅವತರಣಿಕೆಯಲ್ಲೂ ವೇದ ಬಿಡುಗಡೆ ಆಗಿದ್ದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವರಾಜ್ ​ಕುಮಾರ್ ಹಲವು ವಿಚಾರಗಳನ್ನು ಹಂಚಿಕೊಂಡರು. ​

ತೆಲುಗು ಚಿತ್ರೋದ್ಯಮ, ಪ್ರೇಕ್ಷಕರೊಂದಿಗೆ ನಿಮ್ಮ ಸಂಪರ್ಕವೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್,​ "ನನಗೆ ಈ ಇಂಡಸ್ಟ್ರಿಯೊಂದಿಗೆ, ಇಲ್ಲಿನ ಪ್ರೇಕ್ಷಕರೊಂದಿಗೆ ಹಲವು ವರ್ಷಗಳ ಒಡನಾಟವಿದೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ನನ್ನ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಜೊತೆಗೆ ಇನ್ನೂ ಕೆಲ ಚಿತ್ರಗಳು ತೆಲುಗಿನಲ್ಲಿ ಬಿಡುಗಡೆಯಾಗಿವೆ. ನಂದಮೂರಿ ಬಾಲಕೃಷ್ಣ ಅವರ 100ನೇ ಚಿತ್ರ 'ಗೌತಮಿಪುತ್ರ ಶಾತಕರ್ಣಿ'ಯಲ್ಲಿಯೂ ನಟಿಸಿದ್ದೇನೆ. ಈ ಇಂಡಸ್ಟ್ರಿಯಿಂದ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ಎನ್​ಟಿಆರ್ ಅವರಂಥ ಉತ್ತಮ ಸ್ನೇಹಿತರು ಇದ್ದಾರೆ. ಇಲ್ಲಿನ ಉಳವಚಾರು ಬಿರಿಯಾನಿ ನನಗೆ ಬಹಳ ಇಷ್ಟ" ಎಂದು ತಿಳಿಸಿದರು.

'ವೇದ' ಕಥೆಯೇನು, ನಿಮ್ಮ ಪಾತ್ರ ಹೇಗಿರಲಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಉತ್ತಮ ಸಂದೇಶವುಳ್ಳ ಕಮರ್ಷಿಯಲ್ ಚಿತ್ರ ಇದಾಗಿದೆ. ಕುಟುಂಬದಲ್ಲಿನ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಪ್ರೀತಿ, ಸಂತೋಷ, ವಿಶ್ವಾಸ ಹೀಗೆ ಎಲ್ಲದರ ಬಗ್ಗೆ ಹೇಳಲಾಗಿದೆ. ಸ್ತ್ರೀ ಶಕ್ತಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಆಗಿದೆ" ಎಂದರು.

ಟ್ರೇಲರ್ ನೋಡಿದರೆ ಸಿನಿಮಾದಲ್ಲಿ ಆ್ಯಕ್ಷನ್​ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ, "ಇದು ಸಂಪೂರ್ಣ ಸಾಹಸಮಯ ಚಿತ್ರವಲ್ಲ. ಇದರಲ್ಲಿ ಆ್ಯಕ್ಷನ್ ಜೊತೆಗೆ ಭಾವನೆಗಳ ಅನಾವರಣವಾಗಿದೆ. ಚಿತ್ರದಲ್ಲಿ ಮಹಿಳೆಯರು ಹೋರಾಡುತ್ತಾರೆ. ಸಿನಿಮಾ ವೀಕ್ಷಿಸಿದಾಗ ನಿಮಗಿದು ಅರ್ಥವಾಗುತ್ತದೆ. ಸಮಾಜದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅವರು ಗಟ್ಟಿಯಾಗಿ ನಿಲ್ಲಬೇಕು, ನಾವು ಅವರನ್ನು ಪ್ರೋತ್ಸಾಹಿಸಬೇಕು, ಈ ಎಲ್ಲಾ ವಿಷಯಗಳನ್ನು ಚಿತ್ರದಲ್ಲಿ ಹೆಣೆಯಲಾಗಿದೆ" ಎಂದು ವಿವರಿಸಿದರು.

ಅತಿಥಿ ಪಾತ್ರಗಳಲ್ಲಿ ನಟನೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, "ಹಲವು ಆಸಕ್ತಿದಾಯಕ ಪಾತ್ರಗಳಿರುತ್ತವೆ. ಹಾಗಾಗಿ ನಾನು ಅತಿಥಿ ಪಾತ್ರ ಮಾಡುತ್ತಿದ್ದೇನೆ. ಸೂಪರ್​​ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ನಟಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹಾಗಾಗಿಯೇ ನಾನು 'ಜೈಲರ್' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ. ಸಣ್ಣ ಪಾತ್ರವಾದರೂ ಅದು ಗ್ರೇಟ್. ನನಗೆ ನಟ ಧನುಷ್ ಅಂದ್ರೆ ಬಹಳ ಇಷ್ಟ. ಅವರ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಅದಕ್ಕಾಗಿಯೇ ಆ ಪಾತ್ರವನ್ನು ಮಾಡುತ್ತಿದ್ದೇನೆ. ಉಳಿದಂತೆ ತೆಲುಗಿನಲ್ಲಿ ಎರಡ್ಮೂರು ಕಥೆ ಕೇಳಿದ್ದೇನೆ, ಆದ್ರೆ ಯಾವುದೂ ಫೈನಲ್ ಆಗಿಲ್ಲ. ಬಾಲಕೃಷ್ಣ ಕೂಡ ಸಿನಿಮಾ ಮಾಡೋಣ ಎಂದಿದ್ದಾರೆ. ಏನಾಗುತ್ತದೆ ಎಂದು ನೋಡೋಣ" ಅಂತಾ ತಿಳಿಸಿದರು.

ಈಗಾಗಲೇ ಹಲವು ಪಾತ್ರಗಳನ್ನು ನಿರ್ವಹಿಸಿದ್ದೀರಾ, ಬೇರೆ ಯಾವುದಾದರೂ ಕನಸಿನ ಪಾತ್ರಗಳಿವೆಯೇ? ಎಂಬ ಪ್ರಶ್ನೆಗೆ, "ನನಗೆ 'ಅನ್ನಮಯ್ಯ' ದಂತಹ ಭಕ್ತಿ ಪ್ರಧಾನ ಸಿನಿಮಾ ಮಾಡಬೇಕೆನ್ನುವ ಕನಸಿದೆ. ಪ್ರಸ್ತುತ ಅಶ್ವತ್ಥಾಮ, ಘೋಸ್ಟ್, ಕರಟಕ ಧಮನಕ ಚಿತ್ರಗಳನ್ನು ಮಾಡುತ್ತಿದ್ದೇನೆ" ಎಂದು ತಿಳಿಸಿದರು.

ಇದನ್ನೂ ಓದಿ:'ವೇದ' ಈವೆಂಟ್​ನಲ್ಲಿ ಕಣ್ಣೀರಿಟ್ಟ ಶಿವಣ್ಣ: ಸಮಾಧಾನಪಡಿಸಿದ ಬಾಲಯ್ಯ

ಕನ್ನಡ ಚಿತ್ರರಂಗದ ಸಾಧನೆ ಬಗ್ಗೆ ಮಾತನಾಡಿ, "ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಸಿನಿಮಾಗಳು ಚೆನ್ನಾಗಿ ಮೂಡಿಬಂದಿವೆ. ಈ ಬಗ್ಗೆ ನನಗೆ ಬಹಳ ಖುಷಿ ಇದೆ. ಸೂಕ್ತ ಯೋಜನೆಯೊಂದಿಗೆ ಒಳ್ಳೆಯ ಚಿತ್ರಗಳನ್ನು ಮಾಡಲು ಸಮರ್ಥರಾಗಿದ್ದೇವೆ. ನಾವು ಕಷ್ಟಪಟ್ಟು ಪ್ರಯತ್ನಿಸಿದಾಗ ಮಾತ್ರ ನಾವು ನಮ್ಮ ಗುರಿಗಳನ್ನು ಸಾಧಿಸಬಹುದು. ನನ್ನ ದೃಷ್ಟಿಯಲ್ಲಿ ಪ್ಯಾನ್ ಇಂಡಿಯಾ ಸ್ಟಾರ್​ಗಳು ಎಲ್ಲಾ ಭಾಷೆಗಳನ್ನು ಮಾತನಾಡಲು ಪ್ರಯತ್ನಪಡಬೇಕು. ನಾನು ತೆಲುಗು ಕೂಡ ಮಾತನಾಡುತ್ತೇನೆ. ಆದರೆ ಅಷ್ಟೊಂದು ನಿರರ್ಗಳವಾಗಿ ಮಾತನಾಡುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಸರಿಯಾಗಿ ಮಾತನಾಡಲು ಬಯಸುತ್ತೇನೆ" ಎಂದರು.

ABOUT THE AUTHOR

...view details