2022ರಲ್ಲಿ ಸೌತ್ ಸಿನಿಮಾಗಳ ಅಬ್ಬರ ಜೋರಾಗಿತ್ತು. ಅದರಲ್ಲೂ ಸ್ಯಾಂಡಲ್ವುಡ್ ವಿಶೇಷವಾಗಿ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯಿತು. ಆದ್ರೆ ಬಾಲಿವುಡ್ಗೆ ಮಾತ್ರ ಬಾಯ್ಕಾಟ್ ಬಿಸಿ ತಾಗಿತ್ತು. ಅನೇಕ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದವು. ಬಾಯ್ಕಾಟ್ ಹೊಡೆತಕ್ಕೆ ನಲುಗಿದ್ದ ಬಾಲಿವುಡ್ ಚೇತರಿಕೆ ಕಾಣುತ್ತಿರುವ ಈ ಹೊತ್ತಿನಲ್ಲಿ ಬಹುನಿರೀಕ್ಷಿತ ಪಠಾಣ್ ಸಿನಿಮಾಗೆ ಬಾಯ್ಕಾಟ್ ಹೊಡೆತ ಬಿದ್ದಿದೆ. ಈ ಪರಿಸ್ಥಿತಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬಾಲಿವುಡ್ ಸಿನಿಮಾ ಮೇಲಿನ ಬಾಯ್ಕಾಟ್ ಪ್ರವೃತ್ತಿ ತಡೆಯಲು ಕ್ರಮ ಕೈಗೊಳ್ಳಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಿಂದಿ ಚಿತ್ರರಂಗದ ಹಿರಿಯ ನಟ ಸುನೀಲ್ ಶೆಟ್ಟಿ ಮನವಿ ಮಾಡಿದ್ದಾರೆ.
ನಟ ಸುನೀಲ್ ಶೆಟ್ಟಿ ಮನವಿ?:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಮುಂಬೈಗೆ ತಲುಪಿದ್ದಾರೆ. ಇಲ್ಲಿ ಅವರು ಅನೇಕ ದೊಡ್ಡ ಬಾಲಿವುಡ್ ನಟರು, ನಿರ್ದೇಶಕರು ಸೇರಿದಂತೆ ದೊಡ್ಡ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಹಿರಿಯ ನಟ ಸುನೀಲ್ ಶೆಟ್ಟಿ ಸಿಎಂ ಯೋಗಿ ಅವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಬಾಲಿವುಡ್ ಬಹಿಷ್ಕಾರವನ್ನು ತಡೆಯಲು ಸಹಾಯ ಮಾಡುವಂತೆ ಯೋಗಿ ಅವರಲ್ಲಿ ನಟ ಸುನೀಲ್ ಕೇಳಿಕೊಂಡರು. ಇದರೊಂದಿಗೆ ಬಾಲಿವುಡ್ ನಟರು ಡ್ರಗ್ಸ್ ಸೇವಿಸುವುದಿಲ್ಲ ಎಂದೂ ಕೂಡ ಹೇಳಿದ್ದಾರೆ.
ಮನೋರಂಜನಾ ಕ್ಷೇತ್ರ ಸಂಬಂಧ ಸಭೆ:ವಾಸ್ತವವಾಗಿ ಸಿನಿಮಾ ಶೂಟಿಂಗ್ ಮತ್ತು ರಾಜ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು, ನಿರ್ದೇಶಕರು ಮತ್ತು ದೊಡ್ಡ ಉದ್ಯಮಿಗಳೊಂದಿಗೆ ಸಿಎಂ ಯೋಗಿ ಅವರು ಗುರುವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಬಾಲಿವುಡ್ ತಾರೆಯರಾದ ಸುನೀಲ್ ಶೆಟ್ಟಿ, ಬೋನಿ ಕಪೂರ್, ಜಾಕಿ ಶ್ರಾಫ್, ರಾಜ್ಕುಮಾರ್ ಸಂತೋಷಿ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ನಟರು ಚಿತ್ರರಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಎಂ ಮುಂದೆ ಇಟ್ಟರು. ಈ ವೇಳೆಯೇ ಸುನೀಲ್ ಶೆಟ್ಟಿ ತಮ್ಮ ಮನವಿ ಸಲ್ಲಿಸಿದರು.