'ಬಿಗ್ ಬಾಸ್'.. ಕನ್ನಡದ ಜನಪ್ರಿಯ ರಿಯಾಲಿಟಿ ಶೋನ 10ನೇ ಸೀಸನ್ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ 100 ದಿನಗಳ ಕಾರ್ಯಕ್ರಮವು ನಿನ್ನೆ ಗ್ರ್ಯಾಂಡ್ ಲಾಂಚ್ ಆಗಿದೆ. ಈ ವೇಳೆಯೇ ಕಲರ್ಫುಲ್ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇದೀಗ ಒಂದು ದಿನ ತಡವಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಡೊಳ್ಳು ಕುಣಿತದ ಮೂಲಕ ಅವರನ್ನು ಬಿಗ್ ಬಾಸ್ ಮನೆಗೆ ಸ್ವಾಗತಿಸಲಾಗಿದೆ.
"ಕಲರ್ಫುಲ್ ಮನೆಗೆ ತಾಳ್ಮೆಯ ಬಿಳುಪು; ಎಂಟ್ರೀ ಕೊಟ್ರು ಎಮ್.ಎಲ್.ಎ ಪ್ರದೀಪು!" ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಎಂಎಲ್ಎ ಸಡನ್ ಎಂಟ್ರಿ ಕಂಡು ದೊಡ್ಮನೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. "ನಾನು ನಿನ್ನೆಯೇ ಬಿಗ್ ಬಾಸ್ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಜಾಯಿನ್ ಆಗಿದ್ದಕ್ಕೆ ಬಹಳ ಸಂತೋಷವಾಯಿತು" ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
"ಅನಾಥ ಮಕ್ಕಳ ಏಳಿಗೆಗಾಗಿ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಬಿಗ್ ಬಾಸ್ನಿಂದ ಬಂದ ಹಣವನ್ನು ಅಪ್ಪ-ಅಮ್ಮ ಇಲ್ಲದ ಮಕ್ಕಳಿಗೆ ನೀಡಲು ಅವರು ನಿರ್ಧರಿಸಿದ್ದಾರೆ" ಎಂದು ಪ್ರದೀಪ್ ಈಶ್ವರ್ ಆಪ್ತರು ಮಾಹಿತಿ ನೀಡಿದ್ದಾರೆ. ಸದ್ಯ ಶಾಸಕರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:Bigg Boss Kannada : ಬಿಗ್ ಬಾಸ್ ಅಸಲಿ ಆಟ ಶುರು.. ಇಲ್ಲಿದೆ ಸ್ಪರ್ಧಿಗಳ ಮಾಹಿತಿ
ಪ್ರದೀಪ್ ಅವರು ಮೊದಲ ದಿನವೇ ದೊಡ್ಮನೆಗೆ ಎಂಟ್ರಿ ಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಒಂದು ದಿನ ತಡವಾಗಿ ಬಂದಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಇನ್ನು ಪ್ರದೀಪ್ ಈಶ್ವರ್ ಶಾಸಕರಾಗಿರುವುದರಿಂದ ಅವರು ಪೂರ್ಣಪ್ರಮಾಣದಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿರುತ್ತಾರೋ ಅಥವಾ ಕೆಲವು ದಿನಗಳ ಅತಿಥಿಯಾಗಿರುತ್ತಾರೋ? ಎಂಬುದನ್ನು ಕಾದು ನೋಡಬೇಕಿದೆ.
ಈ ಬಾರಿಯ ಸ್ಪರ್ಧಿಗಳಿವರು.. ಈ ಬಾರಿಯ ಬಿಗ್ ಬಾಸ್ ತುಂಬಾ ಸ್ಪೆಷಲ್ ಆಗಿರಲಿದೆ. ಹಲವು ವಿಶೇಷ ಸ್ಪರ್ಧಾಳುಗಳನ್ನು ದೊಡ್ಮನೆಗೆ ಕರೆತರಲಾಗಿದೆ. ಕಿರುತೆರೆ ನಟಿ ನಮ್ರತಾ, ಕಿರುತೆರೆ ನಟ ಸ್ನೇಹಿತ್, ರ‍್ಯಾಪರ್ ಈಶಾನಿ, ಕಿರುತೆರೆ ನಟ ವಿನಯ್, ಚಾರ್ಲಿ 777 ನಟಿ ಸಂಗೀತಾ ಶೃಂಗೇರಿ, ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್, ಕಿರುತೆರೆ ನಟಿ ಸಿರಿಜಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ನೀತು ವನಜಾಕ್ಷಿ, ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ಕಾರ್ತಿಕ್ ಮಹೇಶ್ ಮತ್ತು ಮೈಕಲ್ ಅಜಯ್ ಸ್ಪರ್ಧಿಗಳು.
ಚಾರ್ಲಿ ಎಲ್ಲಿ?: ಇನ್ನೂ ಈ ಮೊದಲೇ ಹೇಳಿದಂತೆ ಚಾರ್ಲಿ 777 ಖ್ಯಾತಿಯ ಶ್ವಾನ ಚಾರ್ಲಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿತ್ತು. ಆದರೆ, ಗ್ರ್ಯಾಂಡ್ ಲಾಂಚ್ಗೂ ಚಾರ್ಲಿ ಆಗಮನ ಇರಲಿಲ್ಲ. ನಂತರವೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ಚಾರ್ಲಿ ಎಲ್ಲಿ ಬಿಗ್ ಬಾಸ್? ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಎತ್ತಿದ್ದಾರೆ.
ಈ ಬಾರಿಯ ಮನೆ ಸಖತ್ ಸ್ಪೆಷಲ್:4 ತಿಂಗಳಲ್ಲಿ ಬಿಗ್ ಬಾಸ್ ಹೊಸ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್ಗೆ ತಕ್ಕಂತೆ ಮನೆಯೂ ಸ್ಪೆಷಲ್ ಆಗಿದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಒಳಗೊಂಡು 12 ಸಾವಿರ ಚದರ ಅಡಿ ಮನೆ ನಿರ್ಮಾಣ ಮಾಡಲಾಗಿದೆ. ಇಡೀ ಮನೆಯ ಚಿತ್ರಣವನ್ನು ತೋರಿಸುವ ವಿಡಿಯೋವನ್ನು ನಿನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲ ಭಾಷೆಯ 'ಬಿಗ್ ಬಾಸ್' ಮನೆಗಳಿಗಿಂತ ದೊಡ್ಡದಾಗಿದೆ. ಈ ಮನೆಯನ್ನು ಕಾಯಲು ಒಟ್ಟು 73 ಕ್ಯಾಮರಾಗಳು ಸಜ್ಜಾಗಿವೆ. ಒಟ್ಟಾರೆಯಾಗಿ ಈ ಬಾರಿಯ ಬಿಗ್ ಬಾಸ್ ಮನೆ ಕಲರ್ಫುಲ್ ಆಗಿದೆ. ಇಂದಿನಿಂದ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಸೀಸನ್ 10 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೊತೆಗೆ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 10: ಗ್ರ್ಯಾಂಡ್ ಈವೆಂಟ್ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?