ಕರ್ನಾಟಕ

karnataka

'ಮ್ಯಾಟ್ನಿ'ಯಲ್ಲಿ ಮೋಡಿ ಮಾಡಿದ 'ಅಯೋಗ್ಯ' ಜೋಡಿ.. ಹಾಡಿನ ಮೂಲಕ ಗಮನ ಸೆಳೆಯುತ್ತಿದೆ ಸಿನಿಮಾ

By

Published : Aug 5, 2023, 1:07 PM IST

ಮ್ಯಾಟ್ನಿ ಚಿತ್ರದ ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ಎಂಬ ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ.

Matinee
ಮ್ಯಾಟ್ನಿ ಚಿತ್ರ

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ತಾರೆಯರಾಗಿ ಗುರುತಿಸಿಕೊಂಡಿರುವ ಸತೀಶ್ ನೀನಾಸಂ ಹಾಗೂ ರಚಿತಾರಾಮ್ ಅಭಿನಯಿಸಿದ್ದ ಅಯೋಗ್ಯ ಚಿತ್ರದ "ಏನಮ್ಮಿ ಏನಮ್ಮಿ" ಹಾಡು ಸಖತ್ ಹಿಟ್ ಆಗಿತ್ತು. ಆ ಹಾಡು ಈಗಲೂ ಜನಪ್ರಿಯ. ಇದೀಗ ಅವರಿಬ್ಬರ ಕಾಂಬಿನೇಶನ್​​ನಲ್ಲಿ ಮೂಡಿಬರುತ್ತಿರುವ "ಮ್ಯಾಟ್ನಿ" ಚಿತ್ರದ ಮೇಲೆ ಸಾಕಷ್ಟು ಕುತೂಹಲವಿದೆ. "ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ" ಎಂಬ ಹಾಡು ಇತ್ತೀಚೆಗಷ್ಟೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಮ್ಯಾಟ್ನಿ ಚಿತ್ರತಂಡ

ಪೂರ್ಣಚಂದ್ರ ತೇಜಸ್ವಿ ಬರೆದು, ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಮಾಡಲಾಗಿತ್ತು. ಚಿತ್ರ ಮತ್ತು ಹಾಡಿನ ಬಗ್ಗೆ ಚಿತ್ರತಂಡ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದೆ.

ಅದ್ಭುತ ಹಾಡು... ಕಲಾ ನಿರ್ದೇಶನ, ನೃತೃ ನಿರ್ದೇಶನ, ಛಾಯಾಗ್ರಹಣ ಸೇರಿದಂತೆ ಎಲ್ಲವೂ ಚೆನ್ನಾಗಿದೆ ಎಂದು ಮಾತು ಪ್ರಾರಂಭಿಸಿದ ನಟ ಸತೀಶ್‌ ನೀನಾಸಂ, ''ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್​ನಲ್ಲಿ ಇದು ಬೆಸ್ಟ್ ಸಾಂಗ್. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅದ್ಭುತವಾಗಿ ಹಾಡು ರಚಿಸಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡು ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ'' ಎಂದು ತಿಳಿಸಿದರು.

ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು. ಅಯೋಗ್ಯ ಸಿನಿಮಾ ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ರಚಿತಾ ರಾಮ್ ಅವರೇ ಸೂಕ್ತ ಎನಿಸಿತು. ನಂತರ ಮತ್ತೋರ್ವ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ಚಿತ್ರತಂಡಕ್ಕೆ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಚಿತ್ರದಲ್ಲಿದ್ದಾರೆ. ಓರ್ವ ನಟಿ ಇರುವಾಗ ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು ಎಂದು ತಿಳಿಸಿದರು.

ಚಿತ್ರತಂಡದ ಶ್ರಮದ ಪ್ರತಿಫಲ...ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ, ಪೂರ್ಣ ಎಲ್ಲರೂ ಸ್ನೇಹಿತರು. ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮುಂದೆ ನನ್ನ ಹಾಗೂ ಅದಿತಿ ಅವರ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆನಂದ್ ಆಡಿಯೋದವರು ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ನಮ್ಮದು ಹಳೆಯ ನಂಟು. ನನ್ನ ಹಲವು ಚಿತ್ರದ ಹಾಡುಗಳನ್ನು ಅವರೇ ಬಿಡುಗಡೆ ಮಾಡಿದ್ದಾರೆ. ಆನಂದ್ ಆಡಿಯೋ ನನಗೆ ಬಹಳ ಅದೃಷ್ಟ ತಂದುಕೊಟ್ಟಿದೆ ಎಂದು ತಿಳಿಸಿದರು.

ಈ ಹಾಡಿನ ಬಗ್ಗೆ ಮಾತು ಶುರು ಮಾಡಿದ ನಟಿ ರಚಿತಾ ರಾಮ್, ಚಿತ್ರೀಕರಣದಲ್ಲೇ ಇದು ಬಹಳ ಚೆನ್ನಾಗಿ ಮೂಡಿ ಬರುತ್ತದೆ ಎಂದೆನಿಸಿತ್ತು. ಅದರಂತೆ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಡು, ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್‌ಗಳನ್ನು ಹಾಕಿದ್ದಾರೆ. ಅದರಲ್ಲೂ ಒಂದು ಸೆಟ್​ನಲ್ಲೇ ಚಿತ್ರೀಕರಣ ಮಾಡಿದ್ದು, ಸ್ವಿಟ್ಜರ್​ಲ್ಯಾಂಡ್​ನಲ್ಲಿ ಶೂಟಿಂಗ್​​ ನಡೆಸಿದ ಅನುಭವ ಸಿಕ್ಕಿತು. ಇಡೀ ತಂಡದ ಶ್ರಮದಿಂದ ಈ ಹಾಡು ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಮನೋಹರ್ ಕಥೆ ಮಾಡಿಕೊಂಡು ಬಂದಾಗ ಖುಷಿಯಾಯಿತು. ಅದ್ಭುತವಾದ ತಾರಾಗಣ ಈ ಚಿತ್ರದಲ್ಲಿದೆ. ಒಳ್ಳೆಯ ಪಾತ್ರಗಳಿವೆ. ಇದರಲ್ಲಿ ಹೊಸ ಶೇಡ್ ಇದೆ. ಟ್ರೇಲರ್ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: 'ವೃತ್ತಿಜೀವನದಲ್ಲಿ ಸಾಕಷ್ಟು ಸಂಪಾದಿಸಿದ್ದೇನೆ' ಎಂದ ಸಮಂತಾ ರುತ್​ ಪ್ರಭು

ಇನ್ನೂ ನಟಿ ಅದಿತಿ ಪ್ರಭುದೇವ ಮಾತನಾಡಿ, ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಎನ್ನುತ್ತೇವೆ. ಅದೇ ರೀತಿ ನಮ್ಮ ಚಿತ್ರದ ಅದ್ಭುತ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ನಮ್ಮ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಿದ್ದೇವೆ. ಸತೀಶ್ ಹಾಗೂ ರಚಿತಾರಾಮ್ ಅಭಿನಯದ ಈ ಹಾಡು ಅದ್ಭುತವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದರು.

ಸಿನಿಮಾವನ್ನ ಯುವ ನಿರ್ದೇಶಕ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಅದ್ಧೂರಿ ವೆಚ್ಚದಲ್ಲಿ ಪಾರ್ವತಿ ಎಸ್. ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸದ್ಯ ಹಾಡುಗಳು ಪೋಸ್ಟರ್​ನಿಂದ‌ ಸದ್ದು ಮಾಡುತ್ತಿರುವ 'ಮ್ಯಾಟ್ನಿ' ಚಿತ್ರವನ್ನು ಸೆಪ್ಟೆಂಬರ್​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ.

ABOUT THE AUTHOR

...view details