ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ, ನಟ ವಸಿಷ್ಠ ಸಿಂಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ವೈರಲ್ ಫೋಟೋಗಳು ಖಚಿತ ಪಡಿಸಿವೆ. ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ಆಗಿ ಈ ಶುಭ ಕಾರ್ಯ ನಡೆದಿತ್ತು. ಈ ಇಬ್ಬರ ನಡುವಿನ ಪ್ರೀತಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಕಳೆದ ವಾರದಿಂದ ಈ ಜೋಡಿಯ ಲವ್ ಮ್ಯಾಟರ್ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ ಅನ್ನೋ ವಿಚಾರವನ್ನೀಗ ಸ್ವತಃ ಈ ಜೋಡಿಯೇ ಬಹಿರಂಗಪಡಿಸಿದ್ದಾರೆ.
ವಸಿಷ್ಠ ಸಿಂಹ ನೀಡಿದ ಮುದ್ದಾದ ನಾಯಿಮರಿಯಿಂದ ಇವರ ಪ್ರೇಮ್ ಕಹಾನಿ ಶುರುವಾಯಿತು. ಆ ಮರಿಯ ಹೆಸರು ಕ್ರಿಸ್ಟಲ್. ಹರಿಪ್ರಿಯಾ ಅವರು ಲಕ್ಕಿ ಮತ್ತು ಹ್ಯಾಪಿ ಎಂಬ ಶ್ವಾನಗಳನ್ನು ಸಾಕಿದ್ದರು. ಆದರೆ ಲಕ್ಕಿ ಸಾವಿನ ನಂತರ ಹ್ಯಾಪಿ ಒಂಟಿಯಾಯ್ತು. ಹರಿಪ್ರಿಯಾ ಕೂಡ ಲಕ್ಕಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿಯನ್ನು ಹರಿಪ್ರಿಯಾಗೆ ನೀಡಿದ್ದರು. ಬಳಿಕ ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಾ ಬೆಳೆಯಿತು.
'ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹವಾಗಲು ಕೆಲ ಸಮಯ ಹಿಡಿಯಿತು. ಕ್ರಿಸ್ಟಲ್ ಹ್ಯಾಪಿಯ ವಸ್ತುಗಳ ಜೊತೆ ಆಟ ಆಡ್ತಿದ್ದ. ಅದರಿಂದ ಹ್ಯಾಪಿಗೆ ಸಿಟ್ಟು ಬರುತ್ತಿತ್ತು. ಆದ್ರೆ ಕ್ರಿಸ್ಟಲ್ ಯಾರನ್ನೂ ಮೋಡಿ ಮಾಡುವ ಕಲೆ ಹೊಂದಿದ್ದಾನೆ. ಹ್ಯಾಪಿ ಜೊತೆಗೂ ಸ್ನೇಹ ಬೆಳೆಸಿಕೊಂಡ. ಈಗ ಅವರಿಬ್ಬರೂ ಜೊತೆಯಲ್ಲೇ ಇರುತ್ತಾರೆ' ಎಂದು ಹರಿಪ್ರಿಯಾ ಹೇಳಿದ್ದಾರೆ.