ಕರ್ನಾಟಕ

karnataka

ಕಿಚ್ಚ ಇಂದು ರಾಜಕೀಯ ಎಂಟ್ರಿ ವಿಚಾರ: ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಸಾಧ್ಯತೆ

By

Published : Apr 5, 2023, 6:42 AM IST

Updated : Apr 5, 2023, 6:34 PM IST

ಇಂದು ಮಧ್ಯಾಹ್ನ ಖಾಸಗಿ ಪಂಚತಾರಾ ಹೋಟೆಲ್​ನಲ್ಲಿ ನಡೆಯುವ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್​ ಬಿಜೆಪಿ ಪಕ್ಷವನ್ನು ಸೇರುವ ಇಲ್ಲವೇ ಪಕ್ಷಕ್ಕೆ ಬೆಂಬಲ ನೀಡಿ ಪಕ್ಷದ ಅಭ್ಯರ್ಥಿಗಳ ಪರವಾಗಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟ ಮಾಡುವ ಸಾಧ್ಯತೆ ಇದೆ.

sudeep
ಸುದೀಪ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ರಾಜಕಾರಣಿಗಳು ಮಾತ್ರವಲ್ಲದೇ ಚಲನಚಿತ್ರರಂಗದ ಪ್ರಸಿದ್ಧ ನಟರನ್ನೂ ಕೂಡ ಬಿಜೆಪಿ ಪಕ್ಷಕ್ಕೆ ಸೆಳೆಯತೊಡಗಿದೆ. ಸ್ಯಾಂಡಲ್​ವುಡ್​ನ ಸುಪ್ರಸಿದ್ಧ ನಟ ಕಿಚ್ಚ ಸುದೀಪ್ ಅವರನ್ನ ಮನವೊಲಿಸಿ ಬಿಜೆಪಿಗೆ ಸೇರಿಸಿಕೊಳ್ಳಲು ಪಕ್ಷದಲ್ಲಿ ವೇದಿಕೆ ಸಿದ್ಧವಾಗತೊಡಗಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ ನಟ ಕಿಚ್ಚ ಸುದೀಪ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.

ಕಿಚ್ಚ ಸುದೀಪ್ ಬಿಜೆಪಿ ಸೇರುವ ಇಲ್ಲವೇ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ನಟ ಸುದೀಪ್ ಸಮ್ಮುಖದಲ್ಲಿಯೇ ಪ್ರಕಟಿಸಲಿದ್ದಾರೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ. ಬೆಂಗಳೂರಿನ ಖಾಸಗಿ ಪಂಚತಾರಾ ಹೋಟೆಲ್​ನಲ್ಲಿ ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಸುದ್ದಿಗೋಷ್ಠಿ ಕರೆದಿದ್ದು, ಈ ಸಂದರ್ಭದಲ್ಲಿ ಸುದೀಪ್ ಅವರು ಬಿಜೆಪಿ ಸೇರುವ ಅಥವಾ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದೀಪ್ ಅವರನ್ನು ಬಿಜೆಪಿಗೆ ಕರೆತರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸತತ ಮಾತುಕತೆ ನಡೆಸಿ ಕಿಚ್ಚ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕಿಚ್ಚ ಸುದೀಪ್​ ಅವರಿಗೆ ತಮ್ಮ ಪಕ್ಷಗಳನ್ನ ಸೇರುವಂತೆ ಆಫರ್ ನೀಡಿದ್ದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿ 'ವಿಕ್ರಾಂತ್ ರೋಣ' ಸಿನಿಮಾಕ್ಕೆ ಶುಭ ಹಾರೈಸುವ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಸೇರುವಂತೆ ಆಹ್ವಾನ ನೀಡಿದ್ದರೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್ ಅವರು ಸಹ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಬರುವಂತೆಯೂ ಮನವಿ ಮಾಡಿದ್ದರು.

ಇದನ್ನೂ ಓದಿ :'ನಟ ಸುದೀಪ್​ ರಾಜಕೀಯ ಪ್ರವೇಶಕ್ಕೆ ಬಲವಂತವಿಲ್ಲ': ಡಿಕೆಶಿ

ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳಿಂದ ತಮಗೆ ಆಹ್ವಾನ ಬಂದಿರುವುದನ್ನು ಮಾಧ್ಯಮ ಸಂದರ್ಶನದ ವೇಳೆ ತಿಳಿಸಿದ್ದ ನಟ ಸುದೀಪ್ ಅವರು ಅಭಿಮಾನಿಗಳ ಅಭಿಪ್ರಾಯವನ್ನಾಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಈ ಬೆಳವಣಿಗೆಯ ನಡುವೆ ಬಿಜೆಪಿ ತನ್ನ ಸರ್ವ ರೀತಿಯ ಪ್ರಯತ್ನ ಮುಂದುವರಿಸಿ ಕಿಚ್ಚ ಸುದೀಪ್ ಅವರನ್ನು ಪಕ್ಷಕ್ಕೆ ಸೇರುವಂತೆ ಇಲ್ಲವೇ ಬೆಂಬಲ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸುದೀಪ್ ಇನ್ನೂ‌ ಕಾಂಗ್ರೆಸ್ ಪಕ್ಷ ಸೇರಿಲ್ಲ: ಸಚಿವ ಸುಧಾಕರ್

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಸೆಲೆಬ್ರೆಟಿಗಳನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೂ ಪ್ರಧಾನಿ ಭೇಟಿಗೆ ಆಹ್ವಾನ ಹೋಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಸುದೀಪ್ ಅವರು ಪ್ರಧಾನಿಯವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಮಂಡ್ಯ ಸಂಸದರಾದ ನಟಿ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದಂತೆ ಕಿಚ್ಚ ಸುದೀಪ್ ಸಹ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲವನ್ನ ಘೋಷಿಸಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಸುದೀಪ್ ಬಗ್ಗೆ: ಸುದೀಪ್ ಸ್ಯಾಂಡಲ್​ವುಡ್​ನ ಹೆಸರಾಂತ ನಟರಾಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಜೊತೆಗೆ, ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿದ್ದಾರೆ. ಸುದೀಪ್ ಬಿಜೆಪಿ ಪಕ್ಷವನ್ನು ಸೇರಿದ್ರೆ ಅಥವಾ ಬೆಂಬಲ ನೀಡಿದರೆ ಬಿಜೆಪಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಲವಾದ ತಾರಾ ಮೆರಗು ಬರಲಿದೆ.

Last Updated : Apr 5, 2023, 6:34 PM IST

ABOUT THE AUTHOR

...view details