ಕರ್ನಾಟಕ

karnataka

ಸ್ಯಾಂಡಲ್​​ವುಡ್ ಸಿನಿ ಸುಗ್ಗಿ: 8 ಸಿನಿಮಾಗಳು ತೆರೆಗೆ-ಬಾಕ್ಸ್​ ಆಫೀಸ್​ನಲ್ಲಿ ಯಾರಿಗೆ 'ಶುಕ್ರ'ದೆಸೆ?

By

Published : Jan 6, 2023, 12:41 PM IST

ಹೊಸ ವರ್ಷ ಮೊದಲ ವಾರವೇ ಒಟ್ಟು 8 ಸಿನಿಮಾಗಳು ಬಿಡುಗಡೆಯಾಗಿವೆ. ಯಾವ ಸಿನಿಮಾ ನೋಡಬೇಕೆನ್ನುವ ಗೊಂದಲದಲ್ಲಿ ಸಿನಿಪ್ರಿಯರಿದ್ದಾರೆ.

sandalwood movies 2023
ಬಿಡುಗಡೆಯಾದ ಕನ್ನಡ ಸಿನಿಮಾಗಳು

2022ರಲ್ಲಿ ಅತ್ಯುತ್ತಮ ಸಿನಿಮಾಗಳು ನಿರ್ಮಾಣವಾಗಿವೆ. ಕನ್ನಡ ಚಿತ್ರರಂಗಕ್ಕೆ 2023ನೇ ವರ್ಷವೂ ಕೂಡ ಲಕ್ಕಿ ಇಯರ್ ಆಗಲಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಸಂಕ್ರಾಂತಿ ಹಬ್ಬಕ್ಕೂ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಸುಗ್ಗಿ ಶುರುವಾಗಿದೆ. ಹೊಸ ವರ್ಷಾರಂಭದಲ್ಲೇ ಕನ್ನಡ ಚಿತ್ರರಂಗದಲ್ಲಿ 8 ಸಿನಿಮಾಗಳು ತೆರೆ ಕಾಣುವ ಮೂಲಕ ವರ್ಷದ ಹೊಸ್ತಿಲಲ್ಲೇ ದಾಖಲೆ ಬರೆದಿದೆ. ಈ ಎಂಟು ಚಿತ್ರಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಾವೆಲ್ಲಾ ಸಿನಿಮಾಗಳು ಸದ್ದು ಮಾಡಲಿವೆ ಎಂಬ ಕುತೂಹಲ, ಚರ್ಚೆ ಗಾಂಧಿನಗರದಲ್ಲಿ ನಡೆಯುತ್ತಿದೆ.

ತೆರೆ ಕಂಡ ಸಿನಿಮಾಗಳು ಯಾವುವು?: ಡಾರ್ಲಿಂಗ್ ಕೃಷ್ಣ ಅಭಿನಯದ ಮಿಸ್ಟರ್ ಬ್ಯಾಚುಲರ್, ಪ್ರಿಯಾಂಕಾ ಉಪೇಂದ್ರ ನಟನೆಯ ಮಿಸ್ ನಂದಿನಿ,‌ ದಿಯಾ ಖ್ಯಾತಿಯ ಖುಷಿ ರವಿ ಹಾಗು ವಿವೇಕ್ ಸಿಂಹ ನಟಿಸಿರೋ‌ ಸ್ಪೂಕಿ ಕಾಲೇಜು, ಕಿರುತೆರೆ ನಟ ರಾಜೇಶ್ ಧ್ರುವ ಅಭಿನಯಿಸಿ ನಿರ್ದೇಶಿಸಿರುವ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ, ಹೊಸ ಪ್ರತಿಭೆಗಳಾದ ಥಗ್ಸ್ ಆಫ್ ರಾಮಘಡ, ಮರೆಯದೆ ಕ್ಷಮಿಸು, ಕಾಕ್ಟೈಲ್, ಸದ್ಗುರು ಸೇರಿದಂತೆ 8 ಸಿನಿಮಾಗಳು ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ.

ಮಿಸ್ಟರ್ ಬ್ಯಾಚುಲರ್

ಮಿಸ್ಟರ್ ಬ್ಯಾಚುಲರ್: ಲವ್ ಮಾಕ್ ಟೈಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗು ನಿಮಿಕಾ ರತ್ನಾಕರ್ ಮುಖ್ಯ ಭೂಮಿಕೆಯಲ್ಲಿರುವ ಮಿಸ್ಟರ್ ಬ್ಯಾಚುಲರ್ ಚಿತ್ರ ಇಂದು ಪ್ರೇಕ್ಷಕರ ಮುಂದೆ ಬಂದಿದೆ. ನಟಿ ಮಿಲನಾ ನಾಗರಾಜ್​ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ನಾಯ್ಡು ಆ್ಯಕ್ಷನ್-ಕಟ್​ ಹೇಳಿರುವ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಯಾವ ರೀತಿ ರೆಸ್ಪಾನ್ಸ್ ಮಾಡ್ತಾರೆ ಅನ್ನೋದು ಶೀಘ್ರವೇ ತಿಳಿಯಲಿದೆ.

ಸ್ಪೂಕಿ ಕಾಲೇಜ್:ಟ್ರೈಲರ್, ಕಂಟೆಂಟ್ ಮತ್ತು ವಿಭಿನ್ನ ಪ್ರಚಾರದ ವಿಚಾರಕ್ಕೆ ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಹುಟ್ಟಿಸಿರೋ‌ ಸಿನಿಮಾ ಸ್ಪೂಕಿ ಕಾಲೇಜ್. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರದಂತಹ ಉತ್ತಮ ಚಿತ್ರಗಳನ್ನು ನಿರ್ಮಿಸಿದ ಹೆಚ್.ಕೆ.ಪ್ರಕಾಶ್ ಈ ಚಿತ್ರದ ನಿರ್ಮಾತೃ. ಭರತ್ ಜಿ‌ ನಿರ್ದೇಶನದ ಸ್ಪೂಕಿ ಕಾಲೇಜ್ ಚಂದನವನದಲ್ಲಿ ಗೆಲ್ಲುವ ಸುಳಿವು ಕೊಟ್ಟಿದೆ. ದಿಯಾ ಖ್ಯಾತಿಯ ಖುಷಿ ರವಿ ಹಾಗೂ ಪ್ರಿಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಅಭಿನಯದ ಸ್ಪೂಕಿ ಕಾಲೇಜ್ ಹಾರರ್ ಜೊತೆಗೆ ಕಾಮಿಡಿ ಹಾಗೂ ಥ್ರಿಲ್ಲರ್ ಕಥೆ ಒಳಗೊಂಡಿದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಸ್ಪೂಕಿ ಕಾಲೇಜ್ ಈ ವರ್ಷದ ಬೆಸ್ಟ್ ಹಾರರ್ ಸಿನಿಮಾ ಆಗಲಿದೆ ಅನ್ನೋದು ಸಿನಿಮಾ ನೋಡಿದವರ ಮಾತು. ವಿವೇಕ್ ಸಿಂಹ ಹಾಗು ಖುಷಿ ರವಿ ಅಲ್ಲದೇ ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಿಸ್ ನಂದಿನಿ

ಮಿಸ್ ನಂದಿನಿ: ನಟಿ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಶಿಕ್ಷಕಿಯಾಗಿ ಕಾಣಿಸಿಕೊಂಡಿರುವ ಚಿತ್ರ ಮಿಸ್ ನಂದಿನಿ. ಯುವ ನಿರ್ದೇಶಕ ಗುರುದತ್ತ ಡೈರೆಕ್ಟ್ ಮಾಡಿರೋ ಮಿಸ್ ನಂದಿನಿ ಚಿತ್ರದಲ್ಲಿ ಪ್ರಿಯಾಂಕಾ ಅವರು ಸರ್ಕಾರಿ ಶಾಲೆಯ ಶಿಕ್ಷಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರವು ಸರ್ಕಾರಿ ಶಾಲೆಗಳ ಸ್ಥಿತಿ, ಅದರ ಮುಚ್ಚುವಿಕೆ ಮತ್ತು ಈ ಸಮಸ್ಯೆಗೆ ಪರಿಹಾರ ಹಾಗು ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಒಳಗೊಂಡಿದೆ.

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ: ಟೈಟಲ್​, ಟ್ರೈಲರ್​ನಿಂದ ಗಮನ ಸೆಳೆದ ಚಿತ್ರ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ. ಕಿರುತೆರೆಯಲ್ಲಿ ಮಿಂಚಿರುವ ರಾಜೇಶ್ ಧ್ರುವ ಅಭಿನಯಿಸಿ ನಿರ್ದೇಶನ ‌ಮಾಡಿರೋ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರ ಒಬ್ಬ ಫೋಟೋಗ್ರಾಫರ್‌ನ ಕಥೆ ಆಧರಿಸಿದೆ. ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.

ಕಾಕ್ಟೈಲ್

ಕಾಕ್ಟೈಲ್: ಹಾರರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧರಿಸಿರೋ ಚಿತ್ರ ಕಾಕ್ಟೈಲ್. ನಿರ್ದೇಶಕ ಶ್ರೀರಾಮ್ ನಿರ್ದೇಶನದ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್ ಥ್ರಿಲ್ಲರ್ ಎಲ್ಲವೂ ಅಡಕವಾಗಿದೆ. ಯುವ ನಟ‌ ವೀರೆನ್ ಕೇಶವ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಥಗ್ಸ್ ಆಫ್ ರಾಮಘಡ

ಥಗ್ಸ್ ಆಫ್ ರಾಮಘಡ:ನೈಜ ಕಥೆ ಆಧರಿಸಿ ನಿರ್ಮಾಣಗೊಂಡಿರುವ ಸಿನಿಮಾ ಥಗ್ಸ್ ಆಫ್ ರಾಮಘಡ. ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಕಾರ್ತಿಕ್‌ ನಿರ್ದೇಶನ ಮಾಡಿದ್ದಾರೆ.

ಮರೆಯದೆ ಕ್ಷಮಿಸು

ಮರೆಯದೆ ಕ್ಷಮಿಸು:ಇನ್ನು ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸ ಮಾಡಿರುವ ಪ್ರಮೋದ್ ಬೋಪಣ್ಣ ಅವರ ಮರೆಯದೆ ಕ್ಷಮಿಸು ಚಿತ್ರ ಕೂಡ ಪ್ರೇಕ್ಷಕರ ಮುಂದೆ ಬಂದಿದೆ‌ .ಲವ್ ಸ್ಟೋರಿ ಕಥೆ ಒಳಗೊಂಡಿರುವ ಚಿತ್ರವನ್ನು ರಾಘವ್ ನಿರ್ದೇಶನ ಮಾಡಿದ್ದಾರೆ. ಪ್ರಮೋದ್​ಗೆ ಜೋಡಿಯಾಗಿ ಮೇಘನ ಗೌಡ ಅಭಿನಯಿಸಿದ್ದಾರೆ.

ಸದ್ಗುರು:ಈಗಾಗಲೇ ಶಿರಡಿ ಸಾಯಿ ಬಾಬಾ ಮೇಲೆ‌ ಸಾಕಷ್ಟು ಸಿನಿಮಾಗಳು ಬಂದಿವೆ. ಇದೀಗ ಸದ್ಗುರು ಅಂತಾ ಟೈಟಲ್ ಇಟ್ಟುಕೊಂಡು ಬಂದಿರುವ ಸಿನಿಮಾವನ್ನು ನಿರ್ದೇಶಕ ವಿಕ್ರಮಾದಿತ್ಯ ನಿರ್ದೇಶನ ಮಾಡಿದ್ದು ಸಾಕಷ್ಟು ಯುವ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲ್ಲ ಯಶ್‌: ಸರ್ಪ್ರೈಸ್‌ ಸುಳಿವು ಕೊಟ್ಟ ಕೆಜೆಎಫ್‌ ಸ್ಟಾರ್!

ಹೀಗೆ ಎಂಟು ಸಿನಿಮಾಗಳು ಶುಕ್ರವಾರ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಯಾವ ಸಿನಿಮಾ ನೋಡಬೇಕು ಅನ್ನೋ ಗೊಂದಲಕ್ಕೆ ಬಿದ್ದಂತಿದೆ. ಒಂದೇ ದಿನ 8 ಸಿನಿಮಾಗಳು ಬಿಡುಗಡೆ ಆಗಿರುವುದರಿಂದ ಯಾವ ನಿರ್ಮಾಪಕರಿಗೆ ನಷ್ಟ, ಯಾರಿಗೆ ಲಾಭ ಅನ್ನೋದು ಬಾಕ್ಸ್ ಆಫೀಸ್ ಕಲೆಕ್ಷನ್​ ಮಾಹಿತಿ ಹೊರಬಿದ್ದ ಬಳಿಕ ಗೊತ್ತಾಗಲಿದೆ.

ABOUT THE AUTHOR

...view details