ಕರ್ನಾಟಕ

karnataka

'ದಿ' ಸಿನಿಮಾ ಟ್ರೇಲರ್​ ಬಿಡುಗಡೆ: ಹೀರೋಯಿನ್​ ಯಾರು ಗೊತ್ತಾ?

By

Published : Jan 15, 2023, 9:22 AM IST

'ದಿ' ಸಿನಿಮಾದ ಟೈಟಲ್​ ಅನ್ನು ನಿರ್ದೇಶಕ ಸಿಂಪಲ್ ಸುನಿ ರಿವೀಲ್​ ಮಾಡಿದ್ದರು. ಸಿನಿಮಾದ ನಾಯಕ, ನಾಯಕಿ ಯಾರೆಂಬುದನ್ನು ಗೌಪ್ಯವಾಗಿಡಲಾಗಿತ್ತು. ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿದೆ.

Dee movie
'ದಿ' ಸಿನಿಮಾ

ರಂಗಭೂಮಿಯಿಂದ ಚಿತ್ರರಂಗಕ್ಕೆ ಕಾಲಿರಿಸಿ ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನಗೆದ್ದಿರುವ ನಟ ಮಂಡ್ಯ ರಮೇಶ್. ತನ್ನಂತೇ ಮಗಳು ದಿಶಾರನ್ನು ಕೂಡ ರಂಗಭೂಮಿಯಲ್ಲಿ ಪಳಗಿಸಿ, ಬೆಳ್ಳಿತೆರೆಗೆ ತಂದಿದ್ದಾರೆ. 'ದೇವರ ನಾಡಲ್ಲಿ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದಿಶಾ ರಮೇಶ್​ ಇದೀಗ ಹೊಸ ಕ್ಯಾಚಿ ಟೈಟಲ್​ ಹೊಂದಿರುವ ಸಿನಿಮಾದ ಮೂಲಕ ಮಿಂಚಲು ಸಜ್ಜಾಗಿದ್ದಾರೆ.

'ಕಡೆಮನೆ ಸಿನಿಮಾ' ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ‘ದಿ’ ಸಿನಿಮಾ ಮೂಲಕ ಕಂಬ್ಯಾಕ್ ಆಗಿದ್ದಾರೆ. ‘ದಿ’ ನಾಯಕ ಮತ್ತು ನಿರ್ದೇಶಕನಾಗಿ ವಿನಯ್​ ತೆರೆ ಮೇಲೆ ಬರಲಿದ್ದಾರೆ. ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ದಿಶಾ ರಮೇಶ್​, 'ನಾನು ಬಿ.ಸುರೇಶ್ ನಿರ್ದೇಶನದಲ್ಲಿ ಬಂದ ‘ದೇವರ ನಾಡಲ್ಲಿ’ ಎಂಬ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟೆ. ಅದಾದ ನಂತರ ಒಂದಿಷ್ಟು ಗ್ಯಾಪ್ ತೆಗೆದುಕೊಂಡೆ. ನನ್ನ ಮಾಸ್ಟರ್ಸ್ ಕೂಡ ಮುಗಿಸಿಕೊಂಡೆ. ಬಳಿಕ ಎಸ್​.ಎಲ್​.ವಿ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ವಿನಯ್​ ಅವರ 'ದಿ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಕಥೆ ತುಂಬಾ ಇಂಟ್ರಸ್ಟಿಂಗ್ ಇದೆ. ಇದು ಲವ್​ ಸ್ಟೋರಿ ಸಿನಿಮಾ. ತುಂಬಾ ಸರಳವಾದ ಕಥೆಯಾದರೂ, ಹಲವು ತಿರುವುಗಳನ್ನು ಪಡೆಯುತ್ತದೆ. ಇಡೀ ಸಿನಿಮಾದ ಆಲ್​ಮೋಸ್ಟ್ ಶೋಟಿಂಗ್​ ಕಾಡಲ್ಲಿ ನಡೆಯುತ್ತೆ ಅಂದಾಗ ಖುಷಿಯಲ್ಲೇ ಒಪ್ಪಿಕೊಂಡೆ. ಎಲ್ಲರ ಜೊತೆ ನಟಿಸಿದ್ದು, ತುಂಬಾ ಖುಷಿ ಕೊಟ್ಟಿದೆ. ಒಂದೊಳ್ಳೆ ಅನುಭವವನ್ನು ಈ ಸಿನಿಮಾದಿಂದ ಪಡೆದುಕೊಂಡಿದ್ದೇನೆ ಮತ್ತು ನೋಡುಗರಿಗೂ ಖಂಡಿತ ಬಹಳ ಇಷ್ಟ ಆಗುತ್ತೆ' ಎಂದರು.​

'ದಿ' ಸಿನಿಮಾ ನಾಯಕಿ ದಿಶಾ ರಮೇಶ್

ಇದನ್ನೂ ಓದಿ:ಹೊಸ ಪ್ರತಿಭೆಗಳ ಸಿನಿಮಾದ ವಿಭಿನ್ನ ಟೈಟಲ್ ರಿವೀಲ್ ಮಾಡಿದ ನಿರ್ದೇಶಕ ಸಿಂಪಲ್ ಸುನಿ

ನಟ ಹಾಗು ನಿರ್ದೇಶಕ ವಿನಯ್​ ಮಾತನಾಡಿ, 'ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಮುಕ್ಕಾಲು ಭಾಗ ಸಿನಿಮಾ ಕಾಡಿನಲ್ಲಿ ಚಿತ್ರೀಕರಣಗೊಂಡಿದೆ. ‘ದಿ’ ಕೋವಿಡ್ ನಲ್ಲಿ ರೆಡಿಯಾದ ಕಥೆ. ಸ್ನೇಹಿತರೆಲ್ಲರೂ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ‘ದಿ’ ಅಂದ್ರೆ ದಿವ್ಯ ಮತ್ತು ದೀಪಕ್. ಜೀವನದಲ್ಲಿ ಆಕಸ್ಮಿಕ ಘಟನೆಗಳು ಯಾವಾಗ ನಡೆಯುತ್ತೆ ಅನ್ನೋದು ಗೊತ್ತಾಗೋದಿಲ್ಲ. ವೀಕೆಂಡ್​ನಲ್ಲಿ ಔಟಿಂಗ್​ ಗೆಂದು ಕಾಡಿಗೆ ಹೋದ ಕ್ಯೂಟ್ ಲವರ್ಸ್ ಜೀವನದಲ್ಲಿ ಏನೇನು ಆಗುತ್ತೆ, ಅವರಿಗೆ ಗೊತ್ತಿಲ್ಲದೇ ಅವರ ಜೀವನದಲ್ಲಿ ಇನ್ಯಾರ ಪ್ರವೇಶ ಆಗುತ್ತೆ, ಮುಂದೆ ಆ ಲವರ್ಸ್ ಏನ್ ಆಗ್ತಾರೆ ಅನ್ನೋದು ಈ ಚಿತ್ರದ ಜೀವಾಳ. ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿವೆ. ಎಲ್ಲಾ ಪಾತ್ರಗಳಿಗೂ ಸಮನಾದ ಪ್ರಾಮುಖ್ಯತೆ ಇದೆ ಎಂದು 'ದಿ' ಕಥೆಯ ಬಗ್ಗೆ ಹಂಚಿಕೊಂಡರು.

'ಪೊಲೀಸ್ ಪಾತ್ರ ತುಂಬಾ ಮಾಡಿದ್ದೇನೆ. ಆದ್ರೆ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರ ಮಾಡಿದ್ದೇನೆ. ಸ್ಟ್ರಿಕ್ಟ್ ಆಫೀಸರ್ ಪಾತ್ರ. ಒಂದೊಳ್ಳೆ ಅನುಭವವನ್ನು ಈ ಚಿತ್ರದ ಚಿತ್ರೀಕರಣ ನೀಡಿದೆ. ತುಂಬಾ ಖುಷಿ ಆಯ್ತು. ಈ ಕಥೆ ಡಿಫ್ರೆಂಟ್ ಆಗಿ ಹೋಗುತ್ತೆ. ಕ್ಯಾಮೆರಾ ಮ್ಯಾನ್ ಭರತ್ ಕೈಚಳಕದಲ್ಲಿ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ' ನಾಗೇಂದ್ರ ಅರಸ್ ತಿಳಿಸಿದರು.

'ದಿ' ಚಿತ್ರದ ತಾರಾಗಣ ಹೀಗಿದೆ: ವಿನಯ್, ದಿಶಾ ರಮೇಶ್ ಅಲ್ಲದೇ ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗವಿದೆ. ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಡಿಕೆ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡಿಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ಚಿತ್ರೀಕರಿಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್ ಇದ್ದು, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನವಿದೆ. ಕವಿರಾಜ್ ಹಾಗೂ ವಿನಯ್ ಸಾಹಿತ್ಯ, ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ:ಶಿವಣ್ಣನ ಬಹುನಿರೀಕ್ಷಿತ ಘೋಸ್ಟ್‌ ಚಿತ್ರದ ಆಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟ

ABOUT THE AUTHOR

...view details