ಕರ್ನಾಟಕ

karnataka

Bigg Boss Kannada : ಬಿಗ್​ ಬಾಸ್​ ಅಸಲಿ ಆಟ ಶುರು.. ಇಲ್ಲಿದೆ ಸ್ಪರ್ಧಿಗಳ ಮಾಹಿತಿ

By ETV Bharat Karnataka Team

Published : Oct 8, 2023, 10:42 PM IST

Updated : Oct 9, 2023, 7:57 AM IST

ಇಂದಿನಿಂದ ಬಿಗ್​ ಬಾಸ್​ ಸೀಸನ್​ 10 ಶುರುವಾಗಿದೆ. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸ್ಫರ್ಧಿಗಳ ಪಟ್ಟಿ ಇಂತಿದೆ..

Bigg Boss Kannada
ಬಿಗ್​ ಬಾಸ್​ ಕನ್ನಡ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯಲಿರುವ​ ಬಿಗ್​ ಬಾಸ್​ ಸೀಸನ್​ 10ಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಸೀಸನ್​ನ​​ ಗ್ರಾಂಡ್​ ಇವೆಂಟ್​ ಭಾನುವಾರದಿಂದ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಶುರುವಾಗಿದೆ.

ಬಿಗ್​ ಬಾಸ್​ ರಿಯಾಲಿಟಿ ಶೋನ ಒಂಭತ್ತು ಆವೃತ್ತಿಗಳು ಯಶಸ್ವಿಯಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರನ್ನು ಪಡೆದಿದೆ. ಬಿಗ್​ ಬಾಸ್​ನಲ್ಲಿನ ಸುದೀಪ್​ ನಿರೂಪಣೆ ಅತಿ ಹೆಚ್ಚು ಜನರನ್ನು ಕಾರ್ಯಕ್ರಮ ವೀಕ್ಷಿಸುವಂತೆ ಮಾಡಿದೆ. ಈ ಬಾರಿಯ ಬಿಗ್ ಬಾಸ್​ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಉಂಟು ಮಾಡಿತ್ತು. ಜೊತೆಗೆ ವಿವಿಧ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಇದರ ನಡುವೆ ಇಂದು ನಡೆದ ಬಿಗ್​ಬಾಸ್​ ಗ್ರಾಂಡ್​ ಪ್ರೀಮಿಯರ್​ನಲ್ಲಿ ಬಿಗ್​ಬಾಸ್​ ಸ್ಪರ್ಧಿಗಳನ್ನು ಪರಿಚಯಿಸಲಾಗಿದೆ.

ಬಿಗ್​ ಬಾಸ್​ ಸೀಸನ್​ 10 : ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಿಗ್​ಬಾಸ್ ಸ್ಪರ್ಧಿಗಳ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿತ್ತು. ಕೊನೆಗೂ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿದೆ. ಇದಕ್ಕೂ ಮುನ್ನ ಬಿಗ್​ಬಾಸ್​ ಮನೆಗೆ ಹೋಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು.

ಹೊಸ ಸಾಂಗ್​, ಹೊಸ ಮನೆ, ಹೊಸ ಸ್ಪರ್ಧಿ, ಈ ಬಾರಿ ಬೇರೆನೇ ಲೆಕ್ಕಾಚಾರ: ಈ ಬಾರಿಯ ಬಿಗ್​ಬಾಸ್​ನಲ್ಲಿ ಹಲವು ವಿಶೇಷ ಸ್ಪರ್ಧಾಳುಗಳನ್ನು ಕರೆತರಲಾಗಿದೆ. ಬಿಗ್​ಬಾಸ್​ ಮನೆಯಲ್ಲಿ ಅಬ್ಬರಿಸಲು ಮೊದಲ ಕಂಟೆಸ್ಟಂಟ್​ ಆಗಿ ಪುಟ್ಟ ಗೌರಿಯ ಮದುವೆ ಧಾರಾವಾಹಿಗಳಲ್ಲಿ ಮಿಂಚಿರುವ ನಮ್ರತಾ ಅವರು ಆಗಮಿಸಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟ ಸ್ನೇಹಿತ್​ ಅವರು ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಿದ್ದಾರೆ. ಮೂರನೇ ಬಿಗ್ ಬಾಸ್​ ಸ್ಪರ್ಧಿಯಾಗಿ ರ್ಯಾಪರ್​ ಈಶಾನಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಹರಹರ ಮಹಾದೇವ್​ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಮಿಂಚಿದ್ದ ವಿನಯ್​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿಗಳ ಮಾಹಿತಿ

ಐದನೇ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್​​ ಬಿಗ್​ ಬಾಸ್​ಗೆ ಎಂಟ್ರಿಯಾಗಿದ್ದಾರೆ. ಆರನೇ ಸ್ಪರ್ಧಿಯಾಗಿ ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತೃತೀಯ ಲಿಂಗಿ ನೀತು ವನಜಾಕ್ಷಿ ಆಯ್ಕೆಯಾಗಿದ್ದಾರೆ. ಏಳನೇ ಸ್ಪರ್ಧಿಯಾಗಿ ರಂಗೋಲಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಸಿರಿ ಬಿಗ್​ಬಾಸ್​ ಅಂಗಳಕ್ಕೆ ಧುಮುಕಿದ್ದಾರೆ. ಎಂಟನೇ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತ, ಮೈಸೂರಿನ ಸ್ನೇಕ್​ ಮಾಸ್ಟರ್​ ಸ್ನೇಕ್​ ಶ್ಯಾಮ್​ ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

9ನೇ ಕಂಟೆಸ್ಟಂಟ್​ ಆಗಿ ಧಾರವಾಹಿ ನಟಿ ಭಾಗ್ಯಶ್ರೀ ಬಿಗ್​ ಮನೆಗೆ ಕಾಲಿರಿಸಿದ್ದಾರೆ. ಸೋಮವಾರದಿಂದ ಬಿಗ್​ಬಾಸ್​ ಕಾರ್ಯಕ್ರಮ ಆರಂಭವಾಗಿದ್ದು, ಅಸಲಿ ಆಟ ಇನ್ನು ಶುರುವಾಗಲಿದೆ.

ತುಕಾಲಿ ಸಂತೋಷ್:ಡಿಫರೆಂಟ್ ಆಗಬೇಕು ಎಂಬ ಹಂಬಲದಲ್ಲಿ ‘ತುಕಾಲಿ’ ಎಂಬುದನ್ನು ತಮ್ಮ ಹೆಸರಿಗೇ ಅಂಟಿಸಿಕೊಂಡಿರುವ ಸಂತೋಷ್‌ ಅವರು ಬಿಗ್‌ಬಾಸ್‌ ಮನೆಯೊಳಗೆ ಸಂತೋಷದ ನಗುವನ್ನು ಹರಡುವ ಆಸೆಯಿಂದ ಹೊರಡುತ್ತಿದ್ದಾರೆ. ತುಕಾಲಿ ಎಂಬ ಬೈಗುಳವನ್ನು ಹೆಮ್ಮೆಯಿಂದ ಸ್ವೀಕರಿಸುವ ಸಂತೋಷ್‌ ಅವರು ಹೆಂಡತಿಯನ್ನು ಬಿಟ್ಟು, ಸಿಂಗಲ್ ಆಗಿ ಮನೆಯೊಳಗೆ ಕಾಲಕಳೆಯುವ ಹಂಬಲದಿಂದ ಬಂದಿದ್ದರು. ಗಂಡ-ಹೆಂಡತಿ ಇಬ್ಬರ ಕಾಲೆಳೆಯುವ ಖುಷಿಯನ್ನು ನೋಡಲು ಕಿಚ್ಚ ಆಸೆಪಟ್ಟರು. ಅದಕ್ಕೂ ಜನತಾ ವೋಟಿಂಗ್ ಅನ್ನು ಅಪೇಕ್ಷಿಸಿದ ಕಿಚ್ಚ ಅವರ ಊಹೆಯಂತೆ ಜನರೂ ಸಂತೋಷ್ ದಂಪತಿ ಒಟ್ಟಿಗೆ ಮನೆಯೊಳಗೆ ಹೋಗಬೇಕು ಎಂದು ಆಸೆಪಟ್ಟರು. ಇದಕ್ಕೆ ಪ್ಯಾನಲಿಸ್ಟ್‌ ಕೂಡ ಅನುಮೋದನೆ ಕೊಟ್ಟರು.

ಸ್ಟೇಜ್‌ ಮೇಲೆಯೇ ಕಿಚ್ಚ ಕೊಟ್ಟ ಟಾಸ್ಕ್‌ನಲ್ಲಿ ಗೆದ್ದ ಸಂತೋಷ್, ಹೆಂಡತಿಯನ್ನು ಹೊರಗಡೆಯೇ ಬಿಟ್ಟು ಮನೆಯೊಳಗೆ ಹೋಗುತ್ತಿದ್ದಾರೆ. ಇದುವರೆಗಿನ ಸ್ಪರ್ಧಿಗಳಲ್ಲಿ ಜನರಿಂದ ಅತಿ ಹೆಚ್ಚು ಅಂದರೆ, 93% ಪಡೆದು, ಹೆಂಡತಿಯಿಂದ ಬೀಳ್ಕೊಟ್ಟು ಮನೆಯೊಳಗೆ ಅಡಿಯಿಟ್ಟಿದ್ದಾರೆ. ಮನೆಯೊಳಗೆ ನಗೆಹೊನಲನ್ನು ಹರಿಸಲು ಸಂತೋಷ್‌ ರೆಡಿಯಾಗಿದ್ದಾರೆ.

ವಿನಯ್ ಗೌಡ:‘ಹರಹರ ಮಹಾದೇವ’ ಶಿವನ ಪಾತ್ರವನ್ನು ಮಾಡಿ ಮನೆಮನಗಳೀಗೆ ಮುಟ್ಟಿದವರು ವಿನಯ್ ಗೌಡ. ಬಿಗ್‌ಬಾಸ್‌ವರೆಗೂ ಒಂದು ಜರ್ನಿ, ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ ಅನ್ನೋದು ಅವರ ಮಾತು. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್‌ ಅವರಿಗೆ ಪತ್ನಿಯೇ ಸರ್ವಸ್ವ. ಹದಿನಾಲ್ಕು ವರ್ಷದ ಮುದ್ದು ಮಗ ರಿಷಭ್‌ ಎಂದರೆ ಪಂಚಪ್ರಾಣ.

ನೀತು ವನಜಾಕ್ಷಿ:‘ಯಾರಮ್ಮಾ ಇವಳು ಚೆಲುವೆ’ ಎಂಬ ಹಾಡಿನೊಂದಿಗೆ ಬಿಗ್‌ಬಾಸ್‌ ವೇದಿಕೆಯ ಮೇಲೆ ಕಾಣಿಸಿಕೊಂಡ ನೀತು ವನಜಾಕ್ಷಿ, ಟ್ರಾನ್ಸ್‌ಜೆಂಡರ್‌ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ‘ತನ್ನ ಬದುಕಿನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಹಾನಗರಕ್ಕೆ ಬಂದ ಮಂಜು, ಬಳಿಕ ನೀತು ವನಜಾಕ್ಷಿಯಾಗಿದ್ದು ಒಂದು ಸಾಧನೆಯ ಕಥೆಯೇ ಸರಿ. ತಾನೊಬ್ಬಳು ತೃತೀಯಲಿಂಗಿ ಎಂದು ಗುರುತಿಸಿಕೊಂಡ ಅವರಿಗೆ ತಾಯಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾದರು.

ತಮ್ಮ ಹೆಸರಿನ ಜೊತೆಗೇ ಇರುವ ನೀತು ಅವರ ತಾಯಿ ವನಜಾಕ್ಷಿ ಅವರ ಬದುಕಿನ ಜೊತೆಗೂ ಇದ್ದಾರೆ. ಚಿತ್ರಕಲೆಯ ಅವರ ಆಸಕ್ತಿ. ತನ್ನ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎಂದು ಟ್ಯಾಟೋ ಆರ್ಟಿಸ್ಟ್ ಆಗಿ ಬದುಕಿನ ಸುಂದರ ಚಿತ್ರವನ್ನು ತಾವೇ ಬಿಡಿಸಿಕೊಳ್ಳಲು ಆರಂಭಿಸಿರುವ ಅವರು ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಾಡೆಲಿಂಗ್‌ನಿಂದ ನಟನೆಯ ಕ್ಷೇತ್ರಕ್ಕೂ ಕಾಲಿಟ್ಟಿರುವ ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೀತು ಅವರಿಗೆ ಪ್ರೇಕ್ಷಕಪ್ರಭುಗಳು 86% ವೋಟ್‌ ನೀಡಿ ಮನೆಯೊಳಗೆ ಕಳಿಸಿದ್ದಾರೆ.

ನಟಿ ಸಿರಿ:30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ನಾನು ನಾನಾಗಿರಬೇಕು’ ಎಂಬ ಆಸೆಯೊಂದಿಗೆ ಅವರು ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ಸಿರಿಯನ್ನು ತೆರೆಯ ಮೇಲಿನ ಪಾತ್ರವಾಗಿಯಷ್ಟೇ ನೋಡಿದ್ದ ಜನರಿಗೆ ತನ್ನ ನಿಜವಾದ ವ್ಯಕ್ತಿತ್ವವನ್ನು ತೋರಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ಸೂಕ್ಷ್ಮ ವ್ಯಕ್ತಿತ್ವದ, ತುಸು ಕೋಪಿಷ್ಠರಾದ ಸಿರಿಅವರಿಗೆ ಜನರು 83% ವೋಟ್ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ತಂದೆಯ ನೆನಪಿಸಿಕೊಂಡು ಬಲಗಾಲಿಟ್ಟು ಸಿರಿ ಮನೆಯೊಳಗೆ ಹೋಗಿದ್ದಾರೆ.

ಸ್ನೇಕ್‌ ಶಾಮ್ :ಹಾವುಗಳ ಜೊತೆ ಸರಸವಾಡುವುದನ್ನೇ ವೃತ್ತಿ-ಪ್ರವೃತ್ತಿಯನ್ನಗಿಸಿಕೊಂಡಿರುವ ಸ್ನೇಕ್‌ ಶ್ಯಾಮ್‌ ತಮ್ಮ ವಿಶಿಷ್ಟ ಕಾಸ್ಟ್ಯೂಮ್‌ನಿಂದಲೇ ಜನರ ಗಮನ ಸೆಳೆಯುತ್ತಾರೆ. ‘ಡಿಫರೆಂಟ್ ಆಗಿದ್ದರೆ ಮಾತ್ರ ಜನ ಗುರ್ತಿಸುವುದು’ ಎನ್ನುವ ಶ್ಯಾಮ್‌ ತಮ್ಮ ಪ್ರಸಿದ್ಧಿಗೆ ಆ ಶಿವಪ್ಪನ ಕತ್ತಲ್ಲಿರುವ ಹಾವೇ ಕಾರಣ ಎನ್ನುತ್ತಾರೆ. ವಿಷದ ಹಾವು ಹಿಡಿಯುತ್ತಲೇ ಜನರಲ್ಲಿ ಸಂತೋಷದ ನಗು ಉಕ್ಕಿಸುವ ಹವ್ಯಾಸವಾಗಿಸಿಕೊಂಡಿರುವ ಶ್ಯಾಮ್‌ಗೆ ಸೆಲೆಬ್ರಿಟಿ ಆಗುವುದಕ್ಕಿಂತ ಜನರ ಸ್ನೇಹಿತರಾಗಿ ಇರುವುದೇ ಇಷ್ಟ.

ಆಟೋ ಓಡಿಸುವವನ ಮಗನಾಗಿ ಬೆಳೆದ ಶ್ಯಾಮ್‌ ಹಸುಗಳನ್ನು ಅಕ್ಕರೆಯಿಂದ ಸಾಕುವವರು. ಅದೃಷ್ಟ ಒಮ್ಮೆ ಮಾತ್ರ ಬಾಗಿಲು ತಟ್ಟುವುದು. ನಾವು ಬಾಗಿಲು ತೆರೆಯದಿದ್ದರೆ ಪಕ್ಕದ ಮನೆಗೆ ಹೋಗಿಬಿಡುತ್ತದೆ ಎಂದು ತಮಾಷೆಯಗಿಯೇ ಹೇಳುವ ಸ್ನೇಕ್‌ ಶ್ಯಾಮ್‌, ‘ನಗಿಸುವುದು ನನ್ನ ಧರ್ಮ; ನಗುವುದು ಬಿಡುವುದು ಅವರ ಕರ್ಮ’ ಎನ್ನುತ್ತಾರೆ. ಚಿಕ್ಕಂದಿನಲ್ಲಿ ‘ನಾಯಿ ಶ್ಯಾಮ’ನಾಗಿದ್ದ ಅವರು ಸ್ನೇಕ್‌ ಶ್ಯಾಮ್ ಆಗಿದ್ದೇ ಒಂದು ಸ್ಫೂರ್ತಿದಾಯಕ ಕಥನ.

ನಿಜವಾದ ದೇವರು ಇರುವುದು ಗುಡಿಯಲ್ಲಲ್ಲ, ನಮ್ಮ ಸಮಾಜವನ್ನು ಸ್ವಚ್ಛಮಾಡುವ ಪೌರಕಾರ್ಮಿಕರು ದೇವರು’ ಎನ್ನುವ ಸ್ನೇಕ್ ನಾಗ ಆಕಸ್ಮಿಕವಾಗಿ ಕಂಡ ಹಾವನ್ನು ರಕ್ಷಿಸಿ ಬಿಟ್ಟವರು. ನಂತರ ಅದೇ ಹವ್ಯಾಸವಾಗಿತ್ತು. 1998ರಿಂದ ಇಲ್ಲಿಯವರೆಗೆ ಸುಮಾರು 58000 ಹಾವುಗಳನ್ನು ಹಿಡಿದಿರುವ ಸ್ನೇಕ್‌ ಶ್ಯಾಮ್‌ ಅವರಿಗೆ ಜನರು 86% ವೋಟ್‌ ಹಾಕಿ ಮನೆಯೊಳಗೆ ಕಳಿಸಿದ್ದಾರೆ.

ಗೌರೀಶ್​ ಅಕ್ಕಿ:ಪತ್ರಕರ್ತ ಗೌರೀಶ್​ ಅಕ್ಕಿ 10 ನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಾಧ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪತ್ರಕರ್ತ ಮಹಾಮನೆಯಲ್ಲಿ ತನ್ನ ಆಟವನ್ನು ಮುಂದುವರಿಸುವ ಬಯಕೆ ಹೊಂದಿದ್ದಾರೆ.

ಡ್ರೋನ್ ಪ್ರತಾಪ್‌ ಪಾಸಾ, ಫೇಲಾ?: ಆಕಾಶದಲ್ಲಿ ಡ್ರೋನ್‌ ಏರುವಷ್ಟೇ ವೇಗವಾಗಿ ಪ್ರಸಿದ್ಧರಾದ ಪ್ರತಾಪ್‌, ಈಗ ಬಿಗ್‌ಬಾಸ್‌ ಮನೆಯಲ್ಲಿ ಅಸಲಿ ಆಟ ಆಡಲು ರೆಡಿಯಾಗಿದ್ದಾರೆ. ಡ್ರೋನ್‌ ಪ್ರತಾಪ್‌ ಅವರಿಗೆ ಜನರು 41% ವೋಟ್ ನೀಡಿದ್ದಾರೆ. ಹಾಗಾಗಿ ಪ್ರತಾಪ್‌ ಹೋಲ್ಡ್‌ನಲ್ಲಿದ್ದಾರೆ.

ತನಿಶಾ: ವಿಲನ್‌ ಪಾತ್ರಗಳ ಮೂಲಕ ಗುರ್ತಿಸಿಕೊಂಡಿರುವ ತನಿಶಾ, ಬಿಗ್‌ಬಾಸ್‌ ಮನೆಯೊಳಗೆ ತೆರೆ ಮೇಲಿನ ಮತ್ತು ಬದುಕಿನಲ್ಲಿನ ತನ್ನ ಇಮೇಜ್‌ ಬದಲಿಸಿಕೊಳ್ಳಲು ತುಡಿದ ಹೊಂದಿದ್ದಾರೆ. ತನಿಶಾ ಅವರನ್ನು ಜನರು 68 % ವೋಟ್ ಮಾಡಿ ಹೋಲ್ಡ್‌ನಲ್ಲಿಟ್ಟಿದ್ದಾರೆ.

ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್‌: ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ ಎಂದ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್​ಗೆ ಜನರು 53% ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

‘ಚಾರ್ಲಿ 777’ ನಟಿ ಸಂಗೀತಾ ಶೃಂಗೇರಿ: ನಟಿ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನ ಉದಯೋನ್ಮುಕ ನಟಿ. ‘ಹುಡುಗಿಯರು ನನ್ನ ಸ್ಪರ್ಧಿಗಳಲ್ಲ; ಹುಡುಗರು ನನ್ನ ಸ್ಪರ್ಧಿಗಳು’ ಎನ್ನುವ ಸಂಗೀತಾ ಸಿನಿಮಾ ಕ್ಷೇತ್ರಕ್ಕೆ ಬರದಿದ್ದರೆ ಹಾರುಹಕ್ಕಿಯಾಗಿ ಏರ್‌ಫೋರ್ಸ್‌ನಲ್ಲಿರುತ್ತಿದ್ದರು. ಚಾರ್ಲಿ 777 ಮೂಲಕ ನಟನಾಪಯಣ ಆರಂಭಿಸಿದ ಸಂಗೀತಾ, ಹೊಸ ಚಾಲೆಂಜ್‌ ಫೇಸ್‌ ಮಾಡುವುದಕ್ಕಾಗಿ ಬಿಗ್‌ಬಾಸ್‌ ಮನೆಗೆ ಬಂದಿದ್ದಾರೆ. ಪಾತ್ರದ ಮೂಲಕ ಗುರುತಿಸಿಕೊಂಡಿರುವೆ ಆದರೆ ನಿಜವಾಗಿ ನಾನು ಎಷ್ಟು ಬೋಲ್ಡ್‌ ಎಂಬುದನ್ನು ತೋರಿಸಬೇಕು ಎಂದ ಸಂಗೀತಾ ಅವರಿಗೆ 76% ಮತ ನೀಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

ವರ್ತೂರು ಸಂತೋಷ್: ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್‌, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ; ಶೋಕಿನೂ ಮಾಡಬಹುದು’ ಎಂದು ದಿಟ್ಟವಾಗಿ ಹೇಳುತ್ತಾರೆ. ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಾರೆ. ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಇವರು ಖ್ಯಾತರಾದವರು. ಇವರಿಗೆ ಜನರು 78% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆಯಲು ವಿಫಲರಾದ ಬಾಡಿ ಬಿಲ್ಡರ್ ಚಿತ್ರಾ:ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾ, ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು. ದಪ್ಪ ಇರುವ ಕಾರಣ ಆರಂಭಿಸಿ ಜಿಮ್ ಬಳಿಕ ಅಡಿಕ್ಟ್ ಆಯಿತು. ಬಳಿಕ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡರು. ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್‌ಬಾಸ್ ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ.

ನೈಜೀರಿಯನ್ ಕನ್ನಡಿಗ ಮೈಖಲ್ ಅಜಯ್:ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆದ ಮೈಖಲ್ ಅಜಯ್‌ಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ನಾಲ್ಕು ವರ್ಷಗಳಿಂದ ಹೇರ್‌ ಸ್ಟೈಲ್ ಬೆಳೆಸುತ್ತಿರುವ ಅಜಯ್‌ ಸ್ನಾನಕ್ಕೆ ನಿಂತರೆ ತಲೆಕೂದಲು ನೆನೆಯಲಿಕ್ಕೆ ಅರ್ಧಗಂಟೆ ಬೇಕಂತೆ! ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್‌ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ‘ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ’ ಎಂಬ ಅಜಯ್ ಮನವಿಗೆ ಜನರು 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.

ನಟ ಕಾರ್ತಿಕ್ ಮಹೇಶ್:ಚಾಮರಾಜನಗರದ ಕಾರ್ತಿಕ್ ಮಹೇಶ್ ನಟನೆಯಷ್ಟೇ ಮೈ ದಂಡನೆಯನ್ನೂ ಇಷ್ಟಪಡುತ್ತಾರೆ. ಬಾಲ್ಯದಲ್ಲೇ ರಂಗಭೂಮಿ ಸಹವಾಸ ಬೆಳೆಸಿಕೊಂಡು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ 'ಡೊಳ್ಳು' ಸಿನಿಮಾಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಸ್ಟಾರ್ ಆಗಬೇಕೆಂಬ ಕನಸಿಟ್ಟುಕೊಂಡಿರುವ ಕಾರ್ತಿಕ್​ಗೆ 76% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದರು.

ಹೋಲ್ಡ್‌ನಲ್ಲಿದ್ದ ಸ್ಪರ್ಧಿಗಳೆಲ್ಲ ಮನೆಯೊಳಗೆ!:ವೀಕ್ಷಕರು ಹೋಲ್ಡ್‌ನಲ್ಲಿಟ್ಟಿದ್ದ ಸ್ಪರ್ಧಿಗಳು ಪ್ರತಾಪ್, ತನಿಶಾ, ಸಂಗೀತಾ, ಸಂತೋಷ್, ರಕ್ಷಕ್, ಕಾರ್ತೀಕ್. ಒಂದು ವಾರದ ಮಟ್ಟಿಗೆ ಈ ಎಲ್ಲ ಸ್ಪರ್ಧಿಗಳನ್ನು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಾರದಲ್ಲಿ ಮನೆಯೊಳಗೆ ತೋರಿಸಲಿರುವ ಪರ್ಫಾರ್ಮೆನ್ಸ್‌ ಮೇಲೆ ಯಾರು ಮನೆಯೊಳಗೆ ಉಳಿದುಕೊಳ್ಳಲಿದ್ದಾರೆ ಎಂಬುದು ನಿರ್ಧಾರವಾಗಲಿದೆ. ಇದರೊಂದಿಗೆ ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ಅದ್ಧೂರಿಯಾಗಿ ಪ್ರಾರಂಭವಾಗಿದೆ. ವೇದಿಕೆಗೆ ಬಂದಿದ್ದ ಒಟ್ಟು 19 ಸ್ಪರ್ಧಿಗಳಲ್ಲಿ ಇಬ್ಬರನ್ನು ಪ್ರೇಕ್ಷಕ ಪ್ರಭುಗಳು ವಾಪಸ್ ಕಳಿಸಿದ್ದಾರೆ. ಆರು ಜನರನ್ನು ಹೋಲ್ಡ್‌ನಲ್ಲಿಟ್ಟಿದ್ದಾರೆ. ಮುಂದಿನ ವಾರ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ. ಯಾರು ಹೊರಗೆ ಬರಲಿದ್ದಾರೆ ಎಂಬುದು ಸದ್ಯದ ಕುತೂಹಲ. ಬಿಗ್‌ಬಾಸ್‌ ಕನ್ನಡವನ್ನು 24 ಗಂಟೆ ಉಚಿತವಾಗಿ JioCinemaದಲ್ಲಿಯೂ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ :ಬಿಗ್​ ಬಾಸ್ ಸೀಸನ್​ 10: ಗ್ರ್ಯಾಂಡ್​ ಈವೆಂಟ್​ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?

Last Updated :Oct 9, 2023, 7:57 AM IST

ABOUT THE AUTHOR

...view details