ಕರ್ನಾಟಕ

karnataka

'ಅರ್ಧಂಬರ್ಧ ಪ್ರೇಮಕಥೆ' ಯುವ ಪೀಳಿಗೆಯನ್ನ ಸೆಳೆಯೋ ಚಿತ್ರಕಥೆ: ನಿರ್ದೇಶಕ ಅರವಿಂದ್ ಕೌಶಿಕ್

By ETV Bharat Karnataka Team

Published : Nov 27, 2023, 5:45 PM IST

Ardhambardha Premakathe trailer release: ಇತ್ತೀಚೆಗೆ ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು, 'ಅರ್ಧಂಬರ್ಧ ಪ್ರೇಮಕಥೆ'ಯ ಕಿರುನೋಟವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

Ardhambardha Premakathe Film Team
ಅರ್ಧಂಬರ್ಧ ಪ್ರೇಮಕಥೆ ಚಿತ್ರತಂಡ

ಕನ್ನಡ ಚಿತ್ರರಂಗದ ತುಘಲಕ್ ಸಿನಿಮಾ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದ ಮತ್ತೊಂದು ಪ್ರೇಮ್‌ ಕಹಾನಿ 'ಅರ್ಧಂಬರ್ಧ ಪ್ರೇಮಕಥೆ'. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರೋ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಪ್ರಿಯರು ಟ್ರೈಲರ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಈ ಚಿತ್ರದಲ್ಲಿ ಯುವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ತನ್ನ ಟ್ರೈಲರ್ ಹಾಗು ಹಾಡುಗಳಿಂದ ಚಿತ್ರಪ್ರೇಮಿಗಳ ಮನ ಗೆದ್ದಿರುವ ಈ ಚಿತ್ರ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಚಿತ್ರಕ್ಕೆ 4 ಹಾಡುಗಳನ್ನು ಸುಂದರವಾಗಿ ಕಂಪೋಸ್​ ಮಾಡಿದ್ದಾರೆ.

ಅರ್ಧಂಬರ್ಧ ಪ್ರೇಮಕಥೆ ಚಿತ್ರತಂಡ

ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅರವಿಂದ್ ಕೌಶಿಕ್, "ಈಗ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದೇವೆ. ಇದೊಂದು ಲವ್‌ಸ್ಟೋರಿ ವಿಥೌಟ್ ಲವ್. ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಅನ್ನೋದೇ ನೋಡುಗರ ಆಸೆಯಾಗಿರುತ್ತೆ, ಅವರು ಒಂದಾಗ್ತಾರಾ, ಇಲ್ವಾ ಅಂತ ಹೇಳೋದೇ ಈ ಚಿತ್ರ. ಇದು ಪ್ಯಾನ್ ಹೃದಯಗಳ ಕಥೆ. ಲವ್ ಅನ್ನೋದೆಲ್ಲ ಪುಸ್ತಕದ ಬದನೇಕಾಯಿ ಅಂತ ಯಾವ ಪಾತ್ರ ಹೇಳುತ್ತೆ, ಕೊನೆಗೂ ಅವರು ಪ್ರೀತಿಯನ್ನು ನಂಬ್ತಾರಾ, ಇಲ್ವಾ ಅನ್ನೋದೇ ಸಿನಿಮಾ. ಪ್ರೀತಿ ನಮ್ಮ ಕನಸುಗಳ ಜೊತೆಗೆ ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ಉಳಿಸಿಕೊಳ್ಳೋದು ಕಷ್ಟ. ಕಳೆದ 48 ಗಂಟೆಗಳಲ್ಲಿ ನಾನು 6 ಸಲ ಸಿನಿಮಾನ ನೋಡಿದ್ದೇನೆ. ಇಂಟರ್​ವೆಲ್ ಬ್ಲಾಕ್ ಹಾಗೂ ಕ್ಲೈಮ್ಯಾಕ್ಸ್​ನಲ್ಲಿ ನಾಯಕ, ನಾಯಕಿ ಮಧ್ಯೆ ಮಾತುಗಳೇ ಇರಲ್ಲ. ಕ್ಲೈಮ್ಯಾಕ್ಸ್ ನೋಡಿ ಸ್ವತಃ ನನ್ನ ಕಣ್ಣಲ್ಲೂ ನೀರು ಬಂತು. ಎರಡು ಸೀನ್‌ಗಳನ್ನು ಜನರಿಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಹೇಳಿದರು.

ಅರವಿಂದ ಕೆ ಪಿ ಹಾಗೂ ದಿವ್ಯಾ ಉರುಡುಗ

ನಾಯಕ ಅರವಿಂದ್ ಕೆ ಪಿ ಮಾತನಾಡಿ, "ಈ ಚಿತ್ರದಲ್ಲಿ ನಾವಿಬ್ಬರು ಪ್ರೇಮಿಗಳೇ ಅಲ್ಲ, ಹಾಗಾಗಿ ಐ ಲವ್‌ಯು ಹೇಳುವ ಪ್ರಮೇಯವೂ ಬರಲ್ಲ. ಅದೇ ಕಾರಣದಿಂದ ಚಿತ್ರಕ್ಕೆ ಅರ್ದಂಬರ್ಧ ಪ್ರೇಮಕಥೆ ಟೈಟಲ್ ಇಡಲಾಗಿದೆ ಎಂದರು.

ನಾಯಕಿ ದಿವ್ಯಾ ಮಾತನಾಡಿ, "ಈ ಚಿತ್ರ ನನಗೆ ಸಿಕ್ಕಾಪಟ್ಟೆ ಸ್ಪೆಷಲ್, ಏಕೆಂದರೆ ನಿರ್ದೇಶಕ ಅರವಿಂದ್ ಕೌಶಿಕ್ ಜೊತೆ 2ನೇ ಬಾರಿಗೆ ಕೆಲಸ ಮಾಡಿರೋದು. ಅಲ್ಲದೆ ಕೆಪಿ ಜೊತೆ ಸ್ಕ್ರೀನ್‌ಶೇರ್ ಮಾಡಿರೋದು. ಕಥೆ ಕೇಳುವಾಗ ನಾನು ಕೆಪಿ ಜೊತೆ ಆ್ಯಕ್ಟ್ ಮಾಡ್ತೇನೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ರಿಯಲ್ ಲೈಫ್‌ನಲ್ಲಿ ನಾನು ಹೇಗಿದ್ದೇನೋ, ಅದಕ್ಕೆ ತದ್ವಿರುದ್ಧವಾದ ಪಾತ್ರ ಚಿತ್ರದಲ್ಲಿದೆ. ಲೈಫ್ ತುಂಬಾ ಪ್ರಾಬ್ಲಮ್​ಗಳನ್ನು ಹೆಚ್ಚಿಸಿಕೊಳ್ಳುವ ಹುಡುಗಿ. ಆಕೆ ನೋಡಲು ಸ್ವಲ್ಪ ಮುಂಗೋಪಿಯಾದರೂ, ಆಕೆಯ ಮನಸು ಹೂವಿನಂಥದ್ದು, ಜನ ಆಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲ್ಲ. ಆದರೆ ಅರವಿಂದ್ ಅವರದು ತನ್ನೆದುರು ಬಾಂಬ್​ ಬ್ಲಾಸ್ಟ್ ಆಗುತ್ತಿದ್ದರೂ, ಅದನ್ನು ನೋಡಿಕೊಂಡು ನಕ್ಕುಬಿಡುವಂಥ ಪಾತ್ರ, ಚಿತ್ರದ ಪ್ರೀಮಿಯರ್​ ಶೋ ನೋಡಿದ ನಮ್ಮಮ್ಮ ಅರವಿಂದ್ ಬಗ್ಗೇನೇ ಹೆಚ್ಚು ಮಾತಾಡಿದ್ರು" ಎಂದರು.

ಬಕ್ಸಸ್ ಮೀಡಿಯಾದ ಕಾರ್ತಿಕ್ ಮಾತನಾಡಿ, "ನನಗೆ ಸಿನಿಮಾದ ಬಗ್ಗೆ ಫುಲ್ ಕಾನ್ಫಿಡೆನ್ಸ್ ಇತ್ತು. ಹಾಗಾಗಿ ನಾನು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಕೆಪಿ 15 ವರ್ಷಗಳಿಂದ ನನಗೆ ಗೊತ್ತು. ಅದಕ್ಕೇ ನಾನು ಪೂರ್ತಿ ಫ್ರೀಡಂ ಕೊಟ್ಟಿದ್ದೆ. ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೊಳ್ಳೇ ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ ಎಂದು ತಿಳಿಸಿದರು.

ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಅಲ್ಲದೆ ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ ಅವರ ನಿರ್ಮಾಣ, ನಿರ್ವಹಣೆ ಈ ಚಿತ್ರಕ್ಕಿದೆ. ಸದ್ಯ ಟ್ರೈಲರ್​‌ನಿಂದ ಸದ್ದು ಮಾಡುತ್ತಿರುವ ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಲಿದೆ.

ಇದನ್ನೂ ಓದಿ:'ಅರ್ಧಂಬರ್ಧ ಪ್ರೇಮಕಥೆ'ಯ 'ಆರಂಭ' ಹಾಡು ಕರ್ನಾಟಕರತ್ನ ಅಪ್ಪುಗೆ ಅರ್ಪಣೆ

ABOUT THE AUTHOR

...view details