ಬೆಳಗಾವಿ: 10 ವರ್ಷಗಳ ನನ್ನ ಸಿನಿ ಬದುಕಿನಲ್ಲಿ ಲೂಸಿಯಾ ಸಿನಿಮಾದ ಬಳಿಕ, ಒಂದು ಕ್ರಾಂತಿಕಾರಿ ಕಥೆ ಹೊಂದಿರುವ ಅಶೋಕ ಬ್ಲೇಡ್ ಸಿನಿಮಾ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂದು ಚಿತ್ರನಟ ನಿನಾಸಂ ಸತೀಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಶೋಕ ಬ್ಲೇಡ್ ಸಿನಿಮಾದ ಶೇ. 90ರಷ್ಟು ಚಿತ್ರೀಕರಣ ಮುಗಿದಿದೆ. ಈಗಾಗಲೇ ನೂರು ದಿನ ಶೂಟಿಂಗ್ ಮುಗಿದಿದ್ದು, ಇನ್ನು 20 ದಿನದ ಕೆಲವಷ್ಟೇ ಬಾಕಿಯಿದೆ. ಕ್ಲೈಮ್ಯಾಕ್ಸ್ ಫೈಟಿಂಗ್ ಅನ್ನೇ 20 ದಿನ ಶೂಟ್ ಮಾಡಿದ್ದೇವೆ. ಅಶೋಕ ಬ್ಲೇಡ್ ಚಿತ್ರದಲ್ಲಿ ಪಿರಿಯಾಡಿಕ್ ಬರುತ್ತದೆ. 100-200 ವರ್ಷದ ಘಟನೆ ಬರುತ್ತದೆ. ಅದೊಂದು ಕಥೆಗೆ ಬೇರೆ ಭಾಷೆಯ ಸೂಪರ್ ಸ್ಟಾರ್ ಒಬ್ಬರು ಎಂಟ್ರಿ ಕೊಡುತ್ತಾರೆ. ಅದು ಇನ್ನು ಅಂತಿಮವಾಗಬೇಕಿದೆ. ಈಗಾಗಲೇ ಮಲೆಯಾಳಂ ಮತ್ತು ತಮಿಳಿನಲ್ಲಿ ನಟಿಸಿರುವ ಹರೀಶ ಪೆರಾಡಿ ಅವರನ್ನು ಕನ್ನಡಕ್ಕೆ ಈ ಸಿನಿಮಾದ ಮೂಲಕ ಪರಿಚಯಿಸುತ್ತಿದ್ದು, ಒಂದು ಹಾಡಿನಲ್ಲಿ ಅವರು ಬಂದಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಮೊದಲಿಗೆ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಚಿತ್ರ ಮಾಡುತ್ತಿದ್ದೇವೆ. ಇಲ್ಲಿ ಸಕ್ಸಸ್ ಕಂಡರೆ ಇನ್ನುಳಿದ ಭಾಷೆಗಳಲ್ಲೂ ಚಿತ್ರ ಮಾಡುತ್ತೇವೆ. ಈ ಹಿಂದಿನ ಚಿತ್ರಗಳಿಗೆ ಪ್ರೋತ್ಸಾಹಿಸಿದಂತೆ ಈ ಸಿನಿಮಾಗೂ ತಾವು ಸಹಕಾರ ನೀಡಬೇಕು ಎಂದು ಕೇಳಿಕೊಂಡರು.
ನಾನು ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷವಾಗಿದೆ. ನನ್ನ ಸಿನಿ ಜೀವನದಲ್ಲಿ ಗೆದ್ದಿರುವ ಎಲ್ಲ ಸಿನಿಮಾಗಳನ್ನು ಗೆಲ್ಲಿಸಿದ್ದು, ಇಲ್ಲಿಯ ಜನರೇ. ಮಹದಾಯಿ ಹೋರಾಟ, ಪ್ರವಾಹ ಸಂದರ್ಭದಲ್ಲೂ ಇಲ್ಲಿಗೆ ಬಂದಿದ್ದೆ. ಲೂಸಿಯಾ ಚಿತ್ರದಿಂದ ಬೇರೆ ಭಾಷೆ ನಟರು ಕೂಡ ನನ್ನ ಗುರುತಿಸುವಂತಾಯಿತು. ಲೂಸಿಯಾ ಚಿತ್ರ ಎಲ್ಲರಿಗೂ ಇಷ್ಟವಾಗಿ, ದೇಶ ವಿದೇಶಗಳಲ್ಲೂ ಪ್ರದರ್ಶನಗೊಂಡಿತ್ತು. ಇದೀಗ ಅಯೋಗ್ಯ ಸಿನಿಮಾ ಬಳಿಕ ರಚಿತಾ ರಾಮ್ ಜೊತೆಗೆ ಮ್ಯಾಟನಿ ಎಂಬ ಹೊಸ ಚಿತ್ರ ಮಾಡುತ್ತಿದ್ದೇನೆ. ಇದೊಂದು ಕಮರ್ಷಿಯಲ್ ಸಿನಿಮಾ ಆಗಿದ್ದು, ರಚಿತಾ ರಾಮ್ ಜೊತೆ ಅದಿತಿ ಪ್ರಭುದೇವ ಕೂಡ ಇದರಲ್ಲಿ ನಟಿಸುತ್ತಿದ್ದಾರೆ ಎಂದರು.