ಕರ್ನಾಟಕ

karnataka

ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆ ತರಲು ಮುಂಜಾಗ್ರತೆ ವಹಿಸದಿರುವುದು ಕೇಂದ್ರ ಸರ್ಕಾರದ ಬೇಜಾವಾಬ್ದಾರಿತನ : ಸಿದ್ದರಾಮಯ್ಯ

By

Published : Feb 26, 2022, 7:13 PM IST

ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಮಾಡುತ್ತೇವೆ ಎಂದು ಓಪನ್ ಆಗಿ ಹೇಳಿದ್ದರು. ಆದರೂ ಭಾರತ ಸರ್ಕಾರ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ಮಾಡಿರಲಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ..

It is irresponsible not to take steps to bring students who stuck in Ukraine: siddaramaiah
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆ ತರಲು ಸರ್ಕಾರ ಮುಂಜಾಗ್ರತೆ ವಹಿಸದಿರುವುದು ಬೇಜಾವಾಬ್ದಾರಿತನ: ಸಿದ್ದರಾಮಯ್ಯ

ಮಂಗಳೂರು :ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿರೋದು 10-15 ದಿನಗಳ ಹಿಂದೆಯೇ ತಿಳಿದಿತ್ತು. ದೇಶ, ರಾಜ್ಯದ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ ಎಂಬುದೂ ಗೊತ್ತಿತ್ತು. ಆದರೆ, ಆ ವಿದ್ಯಾರ್ಥಿಗಳನ್ನು ಕರೆ ತರಲು ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರ್ಕಾರ ಇಂತಹ ವಿಚಾರಗಳಲ್ಲಿ ಈ ರೀತಿ ಮೈಮರೆಯಬಾರದು, ಎಚ್ಚರಿಕೆಯಿಂದ ಇರಬೇಕಿತ್ತು. ಸಿಎಂ ಬೊಮ್ಮಾಯಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಮೂಲಕ ಮಾತನಾಡಬೇಕು. ಫ್ಲೈಟ್ ಚಾರ್ಜ್ ಕೊಟ್ಟು ತಕ್ಷಣ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.

ಈಗ ವಿದ್ಯಾರ್ಥಿಗಳು ಬಂಕರ್ಸ್‌ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ವಿದ್ಯಾರ್ಥಿಗಳಿರುವ ಪಕ್ಕದಲ್ಲಿಯೇ ಬಾಂಬ್‌ಗಳು ಸ್ಫೋಟ ಆಗುತ್ತಿವೆ. ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ವಿದ್ಯಾರ್ಥಿಗಳಿಗೆ ಮರಳಿ ತಾಯ್ನಾಡಿಗೆ ಬರಲು ಸಮಸ್ಯೆಯಾಗಿದೆ.‌‌ ಬಹಳ ಮಂದಿ ವಿದ್ಯಾರ್ಥಿಗಳಿಗೆ ಊಟಕ್ಕೂ ತೊಂದರೆಯಾಗಿದ್ದು, ದುಡ್ಡೂ ಇಲ್ಲ.

ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸೋದು ಭಾರತ ಸರ್ಕಾರ ಹಾಗೂ ರಾಜ್ಯ ಸರಕಾರದ ಕರ್ತವ್ಯ. ಇದು ಅವರ ಜವಾಬ್ದಾರಿ. ಈ ಸರ್ಕಾರಕ್ಕೆ ಜವಾಬ್ದಾರಿಯೇ ಇಲ್ಲ. ನಮ್ಮ ಮಕ್ಕಳು ಅಲ್ಲಿದ್ದಾರೆ, ಅವರನ್ನು ವಾಪಸ್ ಕರೆದುಕೊಂಡು ಬರಬೇಕಲ್ಲ.‌ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಮಾಡುತ್ತೇವೆ ಎಂದು ಓಪನ್ ಆಗಿ ಹೇಳಿದ್ದಾರೆ. ಆದ್ದರಿಂದ ಇದು ಸರ್ಕಾರದ ಬೇಜವಾಬ್ದಾರಿತನ ಎಂದು ಸಿದ್ದರಾಮಯ್ಯ ಹೇಳಿದರು.

'ನಾಳೆಯಿಂದ ಮೇಕೆದಾಟು ಪಾದಯಾತ್ರೆ': ನಾಳೆಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡಲಿದೆ. ಇನ್ನು 50-60 ವರ್ಷಗಳವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಿದೆ. ಇಂದಿಗೂ ಬೆಂಗಳೂರಿನಲ್ಲಿ ಶೇ.20ರಷ್ಟು ನಾಗರಿಕರಿಗೆ ಕಾವೇರಿ ನೀರು ಸಿಗುತ್ತಿಲ್ಲ. ಆದ್ದರಿಂದ 'ನಮ್ಮ ನೀರು ನಮ್ಮ ಹಕ್ಕು' ಘೋಷ ವಾಕ್ಯದಡಿ ಮೇಕೆದಾಟು ಪಾದಯಾತ್ರೆ ಮಾಡಲಿದ್ದೇವೆ ಎಂದರು.

'ಗಲಭೆಗೆ ಸಚಿವ ಈಶ್ವರಪ್ಪ ಕಾರಣ': ಹತ್ಯೆಯಾದ ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಕಾಂಗ್ರೆಸ್ ಪಕ್ಷದಿಂದ ಯಾರು ಹೋಗಿಲ್ಲ ಅನ್ನೋದು ನಿಜ. ಆದರೆ, ಅದು ವೈಯಕ್ತಿಕ ದ್ವೇಷದಿಂದ ನಡೆದಿರುವ ಮರ್ಡರ್. ಅದಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದೆ. ಹರ್ಷ ಸಾವಿಗೂ ಹಿಜಾಬ್‌ಗೂ ಸಂಬಂಧವಿಲ್ಲ. ಹರ್ಷ ಸಾವಿನ ಬಳಿಕ ನಡೆದಿರುವ ಗಲಭೆಗೆ ಮಂತ್ರಿ ಈಶ್ವರಪ್ಪ ಅವರೇ ಕಾರಣ. 144 ಸೆಕ್ಷನ್ ಅನ್ನು ಈಶ್ವರಪ್ಪ ಉಲ್ಲಂಘಿಸಿದ್ದಾರೆ ಎಂದು ಹೇಳಿದರು.

ಬಜರಂಗದಳದವರಿಂದ ದಲಿತ ಯುವಕನ ಹತ್ಯೆ : ಬೆಳ್ತಂಗಡಿಯಲ್ಲಿ ಬಜರಂಗದಳದ ನಾಯಕನಿಂದ ವ್ಯಕ್ತಿಯ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿರುವ ಹತ್ಯೆ ಬಜರಂಗದಳದವರು ಮಾಡಿರುವ ಹತ್ಯೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತನನ್ನೆ ಅವರು ಹತ್ಯೆ ಮಾಡಿದ್ದಾರೆ. ಯಾರೇ ಕೊಲೆ‌ ಮಾಡಿದರೂ ಅದನ್ನು ನಾನು ಖಂಡಿಸುತ್ತೇನೆ. ಶಿವಮೊಗ್ಗ, ಬೆಳ್ತಂಗಡಿ ಎರಡು ಹತ್ಯೆಯನ್ನು‌ ಖಂಡಿಸುತ್ತೇನೆ. ಜೀವ ಅಮೂಲ್ಯವಾದದ್ದು. ಯಾರೂ ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಬ್ಯಾನ್ ಮಾಡೋದಾದ್ರೆ ಮಾಡಿ ಯಾರು ಬೇಡ ಅಂತಾರೆ.‌ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲಿದೆ. ನಾವು ಬ್ಯಾನ್ ಮಾಡೋದು ಬೇಡ ಎಂದು ಹೇಳಿದ್ದೇವಾ ಎಂದು ಹೇಳಿದರು.

ಇದನ್ನೂ ಓದಿ:ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ

ABOUT THE AUTHOR

...view details