ಕರ್ನಾಟಕ

karnataka

ಆಸ್ತಿಗಾಗಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿ ಕಪಟ ನಾಟಕವಾಡಿದ ತಮ್ಮ: ಇಬ್ಬರು ಆರೋಪಿಗಳು ಅರೆಸ್ಟ್​

By

Published : Mar 26, 2022, 2:32 PM IST

ಕಳೆದ ಮಾರ್ಚ್ 17 ರಂದು ಕಲಬುರಗಿ ಹೊರವಲಯದ ತಾಜಸುಲ್ತಾನಪುರ ಗ್ರಾಮದಲ್ಲಿ ಮನೋಹರ ರುದ್ರಕರ್ (36) ಎಂಬಾತನ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲೆಂದು ದೇಹ ಸುಟ್ಟುಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

murder
ಇಬ್ಬರ ಬಂಧನ​

ಕಲಬುರಗಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸ್ವಂತ ಅಣ್ಣನನ್ನೇ ಕೊಲೆ ಮಾಡಿ, ಸುಟ್ಟುಹಾಕಿದ ಆರೋಪದ ಮೇರೆಗೆ ಕಲಬುರಗಿಯ ಅರ್ಬನ್‌ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ. ನಗರದ ಸುಲ್ತಾನಪುರದ ನಿವಾಸಿ ಸುನೀಲಕುಮಾರ ಶಾಂತಪ್ಪ ರುದ್ರಕರ್ ಹಾಗೂ ಸಹಚರನಾದ ಕೃಷ್ಣಾ ಮದನಕರ್ ಬಂಧಿತರು.

ಏನಿದು ಘಟನೆ?:ಕಳೆದ ಮಾರ್ಚ್ 17 ರಂದು ಕಲಬುರಗಿ ಹೊರವಲಯದ ತಾಜಸುಲ್ತಾನಪುರ ಗ್ರಾಮದಲ್ಲಿ ಮನೋಹರ ರುದ್ರಕರ್ (36) ಎಂಬಾತನ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲಿ ಎಂದು ದೇಹ ಸುಟ್ಟುಹಾಕಲಾಗಿತ್ತು. ಮಹಾರಾಷ್ಟ್ರದ ಪುನಾದಲ್ಲಿ ವಾಸವಿದ್ದ ಮನೋಹರ್ ರುದ್ರಕರ್, ಹೋಳಿ ಹುಣ್ಣಿಮೆ ಪ್ರಯುಕ್ತ ಎರಡು ದಿನ ತಾಜಸುಲ್ತಾನಪುರ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ ಊಟ ಮುಗಿಸಿ ಮನೆಯಿಂದ ಹೊರಬಂದವನ ದೇಹ ಗ್ರಾಮದ ಹೊರವಲಯಲ್ಲಿ ಅರ್ಧಂಬರ್ಧ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಡಿಸಿಪಿ ಆಡೂರು ಶ್ರೀನಿವಾಸಲು

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ್ರು. ಆದರೆ, ಕೊಲೆಗಾರ ಯಾರು ಅಂತ ಗೊತ್ತಾದ ತಕ್ಷಣ ಪೊಲೀಸರೇ ಒಂದುಕ್ಷಣ ದಂಗಾಗಿ ಹೋಗಿದ್ರು. ಯಾಕಂದರೆ ಕೊಲೆ ಮಾಡಿದ ಆರೋಪಿ ಬೇರೆ ಯಾರೂ ಅಲ್ಲ, ಅಣ್ಣ ಸತ್ತ ಎಂದು ಕಪಟ ನಾಟಕವಾಡುತ್ತಾ ಊರಲ್ಲಿ ಓಡಾಡಿಕೊಂಡಿದ್ದ ಮನೋಹರನ ಸ್ವಂತ ತಮ್ಮ ಸುಶೀಲಕುಮಾರ. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ, ಕಂಬಿ ಹಿಂದೆ ತಳ್ಳಿದ್ದಾರೆ.

ಮನೆ ಖಾಲಿ ಮಾಡುವ ವಿಚಾರವಾಗಿ ಗಲಾಟೆ: ಹುಟ್ಟುತ್ತ ಅಣ್ಣತಮ್ಮರು ಬೆಳೆಯುತ್ತ ದಾಯಾದಿಗಳು ಅನ್ನೋ ಮಾತಿನಂತೆ ಒಂದೆ ಗರ್ಭದಲ್ಲಿ ಹುಟ್ಟಿದರೂ ಕೂಡ ಕೇವಲ ಆಸ್ತಿಗಾಗಿ ಸ್ವಂತ ಅಣ್ಣನನ್ನೇ‌ ಸುಶೀಲಕುಮಾರ ಕೊಲೆ ಮಾಡಿದ್ದಾನೆ. ಅಂದ ಹಾಗೆ, ಕೊಲೆ ಮಾಡಿದ ಆರೋಪಿ ಸುಶೀಲಕುಮಾರ ಹಾಗೂ ಕೊಲೆಯಾದ ಮನೋಹರ ಮೂಲತಃ ಕಮಲಾಪುರ ತಾಲೂಕಿನವರು. ಮನೋಹರನ ಪತ್ನಿಯ ಊರು ತಾಜಸುಲ್ತಾನಪುರ.

ಇದೇ ಗ್ರಾಮಕ್ಕೆ ಕಳೆದ ಎಂಟತ್ತು ವರ್ಷಗಳ ಹಿಂದೆ ಆಗಮಿಸಿದ ಮನೋಹರನ ಕುಟುಂಬ, ಮಾವನ ಮನೆಯಲ್ಲಿಯೇ ಬಾಡಿಗೆ ಪಡೆದು ವಾಸವಾಗಿದ್ದತ್ತು. ಇದೀಗ ಮಾವ ಹಾಗೂ ಹೆಂಡತಿ ಮತ್ತು ಮನೋಹರ ಎಲ್ಲರೂ ಪುಣೆಯಲ್ಲಿ ವಾಸವಿದ್ದಾರೆ. ಆದರೆ, ತಾಜಸುಲ್ತಾನಪುರ ಗ್ರಾಮದ ಮನೆಯಲ್ಲಿದ್ದವರಿಗೆ ಮನೆ ಖಾಲಿ ಮಾಡುವಂತೆ ಹೇಳಿದ್ರು ಖಾಲಿ ಮಾಡಿದ್ದಿಲ್ಲ. ಈ ಸಂಬಂಧ ಕಳೆದ ಏಳು ವರ್ಷದಿಂದ ಆಗಾಗ ಮನೆಯಲ್ಲಿನ ಗಲಾಟೆ ನಡೆಯುತ್ತಿತ್ತು.

ಅಣ್ಣನ ಥಳಿಸಿದ ತಮ್ಮ: ಹೋಳಿ ಹುಣ್ಣಿಮೆಗೆ ಬಂದಿದ್ದ ಮನೋಹರ ತನ್ನ ಸಹೋದರ ಸುಶೀಲಕುಮಾರ ಜೊತೆ ಜಗಳ ತೆಗೆದು ತನ್ನ ಮಾವನ ಮನೆ ಖಾಲಿ ಮಾಡುವಂತೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸುಶೀಲಕುಮಾರ, ಅಣ್ಣ ಮನೆಯಿಂದ ಹೊರಬರುವುದನ್ನು ಗಮನಿಸಿ ಜಗಳ ತೆಗೆದು ಥಳಿಸಿದ್ದಾನೆ. ಜಗಳದಲ್ಲಿ ಮನೋಹರ ಪ್ರಾಣಪಕ್ಷಿ ಹಾರಿಹೋಗಿದೆ.

ಆಗ ಸುಶೀಲ ತನ್ನ ಇನ್ನೊಬ್ಬ ಸ್ನೇಹಿತ ಕೃಷ್ಣಾ ಮದನಕರ್ ಸಹಾಯ ಪಡೆದು ಬೈಕ್ ಮೇಲೆ ಶವ ತೆಗೆದುಕೊಂಡು ಹೋಗಿ ಊರ ಹೊರಗಡೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ.‌ ಆದರೆ, ಅದೆಷ್ಟೇ ಪ್ರಯತ್ನ ಪಟ್ಟರು ಸುಶೀಲಕುಮಾರ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳು ಸಾಧ್ಯವಾಗಲಿಲ್ಲ. ಕೊನೆಗೂ ಪೊಲೀಸರು ಕಿಲಾಡಿ ಆರೋಪಿಯನ್ನ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರನ್ನ ನಂಬಿಸಲು ನಾಟಕ: ಮತ್ತೊಂದು ಗಮನಾರ್ಹ ವಿಷಯ ಅಂದ್ರೆ ಚಾಲಾಕಿ ಸುಶೀಲಕುಮಾರ ತಾನೇ ಕೊಲೆ ಮಾಡಿದ್ದರೂ ಕೂಡ ಯಾರೋ ದುಷ್ಕರ್ಮಿಗಳು ತನ್ನ ಅಣ್ಣನ‌ ಕೊಲೆ ಮಾಡಿದ್ದಾರೆ ಅಂತ ಮಾಧ್ಯಮದವರಿಗೆ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರ ಮುಂದೆ ಅತ್ತು ಕರೆದು ಅಣ್ಣ ಎಂದರೆ ಪಂಚಪ್ರಾಣ ಅನ್ನೋಹಾಗೆ ನಟನೆ ಮಾಡಿ, ಗ್ರಾಮಸ್ಥರನ್ನು ನಂಬಿಸಿದ್ದಾನೆ ಕೂಡಾ.

ತಲೆ ಮುಂಡಾಯಿಸಿಕೊಂಡು ಅಣ್ಣನ ಶ್ರಾದ್ಧಕಾರ್ಯ ಕೂಡ ಅಚ್ಚುಕಟ್ಟಾಗಿ ನೇರವೇರಿಸುವ ಮೂಲಕ ಪೊಲೀಸರ ತನಿಖೆ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿದ್ದ. ಮಾತ್ರವಲ್ಲದೇ, ದೆವ್ವ ಅಂಟಿಕೊಂಡು ನಮ್ಮಣ್ಣ ತಾನೇ ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ್ದಾನೆ ಅಂತಲೂ ನಂಬಿಸಲು ಪ್ರಯತ್ನಿಸಿದ್ದ. ಆದರೆ, ಈತ ಚಾಪೆ ಕೆಳಗೆ ನುಸುಳಿದ್ರೆ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಈತನ‌ ಕೃತ್ಯ ಬಯಲಿಗೆಳೆದಿದ್ದಾರೆ.

ಮೊಬೈಲ್ ಟವರ್ ಕೊಟ್ಟ ಸುಳಿವು: ಕೊಲೆ ಮಾಡಿದ ಸಂದರ್ಭದಲ್ಲಿ ಸುಶೀಲಕುಮಾರನ ಮೊಬೈಲ್ ಟವರ್, ಶವ ಸುಡಲು ತೆರಳಿದ ಸಂದರ್ಭದಲ್ಲಿನ ಮೊಬೈಲ್ ಟವರ್ ಹಾಗೂ ಕೊಲೆಯಾದ ದಿನ ಮಧ್ಯರಾತ್ರಿ ಸುಶೀಲಕುಮಾರ ದೇಹಸುಟ್ಟ ಸ್ಥಳಕ್ಕೆ ಮತ್ತೊಮ್ಮೆ ಹೋಗಿಬಂದಿದ್ದಾನೆ, ಆಗಿನ ಮೊಬೈಲ್ ಟವರ್ ಜೋಡನೆ ಮಾಡಿ ನೋಡಿದಾಗ ಅನುಮಾನಗೊಂಡ ಪೊಲೀಸರು ಸುಶೀಲನನ್ನು ಕರೆತಂದು ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ಮಾಡಿದಾಗ ಸ್ವಂತ ಅಣ್ಣನ ಕೊಲೆ ತಾನೇ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ‌ ಕುರಿತು ಅರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Watch.. ನಿತ್ಯ ದೇವಸ್ಥಾನಕ್ಕೆ ಆಗಮಿಸಿ, ಘಂಟೆ ಬಾರಿಸುವ ಮೇಕೆ.. ಜನರಲ್ಲಿ ಅಚ್ಚರಿ..!

ABOUT THE AUTHOR

...view details