ಕರ್ನಾಟಕ

karnataka

ಬಾಲಕನ ಜೀವನಕ್ಕೆ ಹೊಸ ತಿರುವು ಕೊಟ್ಟ ಕಾರ್ ಆ್ಯಕ್ಸಿಡೆಂಟ್!

By

Published : Aug 2, 2021, 6:36 PM IST

ಶಿಕ್ಷಣ ಇಲಾಖೆ ಅಧಿಕಾರಿಯ ಕಾರು ಎಮ್ಮೆಗಳು ಅಡ್ಡಲಾಗಿ ಬಂದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿತ್ತು. ಎಮ್ಮೆ ಕಾಯುತ್ತಿದ್ದ ಬಾಲಕನನ್ನು ಅವರು ಗಮನಿಸಿ ಪೂರ್ವಾಪರ ವಿಚಾರಣೆ ನಡೆಸಿದ್ದಾರೆ. ಆತ ಜೀತಕ್ಕಿರುವುದನ್ನು ತಿಳಿದು, ಶಿಕ್ಷಣ ನೀಡಲು ಕ್ರಮ ಕೈಗೊಂಡಿದ್ದಾರೆ.

accident-gives-new-turn-to-boys-life
accident-gives-new-turn-to-boys-life

ಕಲಬುರಗಿ:ಆತ ಬಡತನದಲ್ಲಿ ಹುಟ್ಟಿ ಬೆಳೆದ ಬಾಲಕ, ಹೊಟ್ಟೆ ಪಾಡಿಗಾಗಿ ಪಾಲಕರೊಂದಿಗೆ ತಾನೂ ಕೂಡಾ ಊರಿಂದ ಊರಿಗೆ ವಲಸೆ ಹೋದ, ಶಾಲೆ ಬಿಟ್ಟು ಬಂದಿದ್ದ, ಜೀತಕ್ಕೆ ಇದ್ದು ಎಮ್ಮೆ ಕಾಯುವ ಕೆಲಸ ಮಾಡುತ್ತಿದ್ದ, ಈ ವೇಳೆ ನಡೆದ ಒಂದು ಪುಟ್ಟ ಆ್ಯಕ್ಸಿಡೆಂಟ್ ಆತನ ಜೀವನ ಹೊಸ ತಿರುವು ಪಡೆಯುವಂತೆ ಮಾಡಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಬಳಿ ಶಿಕ್ಷಣಾಯುಕ್ತಾಲಯದ ನಿರ್ದೇಶಕರ ಕಾರು ಕಳೆದ ಜುಲೈ 27ರಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಕಾರಿನ ಸೈಡ್ ಭಾಗದಲ್ಲಿ ಹಾನಿ ಆಗಿದ್ದು ಬಿಟ್ಟರೆ ಹೆಚ್ಚಿನ ತೊಂದರೆ ಏನು ಆಗಿಲ್ಲ. ಆದರೆ, ಈ ಚಿಕ್ಕ ಅಪಘಾತ ಶಾಲೆ ಬಿಟ್ಟ ಬಾಲಕನ ಜೀವನ ಹೊಸ ತಿರುವು ಪಡೆಯುವಂತೆ ಮಾಡಿದೆ. ಜೀತದಿಂದ ಮುಕ್ತಿಯಾಗಿ ಹೊಸ ಜೀವನದ ಆಸೆ ಚಿಗುರುವಂತಾಗಿದೆ.

ಕಲಬುರಗಿ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ನಿರ್ದೇಶಕ ಬಿಕೆಎಸ್ ವರ್ಧನ್ ಅವರು ಕೆಲಸದ ನಿಮಿತ್ತ ಜು.27ರಂದು ಕೊಪ್ಪಳಕ್ಕೆ ತೆರಳುವಾಗ ದಾರಿಯಲ್ಲಿ ಮಂದೇವಾಲ ಬಳಿ ಅವರ ಕಾರಿಗೆ ಎಮ್ಮೆಗಳು ಅಡ್ಡಲಾಗಿ ಬಂದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿತ್ತು. ವರ್ಧನ ಅವರು ಎಮ್ಮೆ ಕಾಯುತ್ತಿದ್ದ ಬಾಲಕನನ್ನು ಗಮನಿಸಿ, ಅವನನ್ನು ಹತ್ತಿರಕ್ಕೆ ಕರೆದು ಪೂರ್ವಾಪರ ವಿಚಾರಣೆ ನಡೆಸಿದ್ದಾರೆ.

ಬಾಲಕ ಬಿರಪ್ಪ ಗುರುಶಾಂತಪ್ಪ ಪೂಜಾರಿ

ಈ ವೇಳೆ, ಬಾಲಕ ತನ್ನ ಹೆಸರು ಬೀರಪ್ಪ ಗುರುಶಾಂತಪ್ಪ ಪೂಜಾರಿ, ಅಫಜಲಪುರ ತಾಲೂಕಿನ ಹಸರಗುಂಡಗಿ ಸರ್ಕಾರಿ ಶಾಲೆಗೆ ಹೋಗುತ್ತಿದೆ.‌ 8ನೇ ತರಗತಿ ಓದುತ್ತಿದ್ದೆ. ಕಳೆದ ಎರಡು ವರ್ಷಗಳ ಹಿಂದೆ ಶಾಲೆ ಬಿಟ್ಟು ಮಂದೇವಾಲಕ್ಕೆ ಬಂದು ಅಣ್ಣಾರಾವ್​ ನಾಟಿಕಾರ ಎಂಬುವರ ಮನೆಯಲ್ಲಿ ಜೀತ ಇದ್ದೇನೆ ಅಂತೆಲ್ಲಾ ಹೇಳಿಕೊಂಡಿದ್ದಾನೆ.

ಸಮಾಜದ ಅನಿಷ್ಠ ಎಂದೇ ಹೇಳಲಾಗುವ ಜೀತಕ್ಕೆ ಶಾಲಾ ಬಾಲಕ ತುತ್ತಾಗಿದ್ದಾನಲ್ಲ ಎಂದು ಮರುಗಿ ಮರುಕ್ಷಣವೇ ಬಾಲಕನ ಮೇಲಿನ ಕಾಳಜಿಯಿಂದ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಜೀತಕ್ಕಿಟ್ಟುಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಬಾಲಕನನ್ನು ಮತ್ತೆ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.

ನಿರ್ದೇಶಕರ ಆದೇಶದಂತೆ ಜೇವರ್ಗಿ ಬಿಇಓ ವೆಂಕಣ್ಣ ಇನಾಮದಾರ್ ಅವರು, ಬಾಲಕ ಬೀರಪ್ಪ ಪೂಜಾರಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.‌ ಸದ್ಯ ಜೀತಕ್ಕೆ ಇಟ್ಟುಕೊಂಡವರ ವಿರುದ್ಧ ನೇಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಬಾಲಕ ಬಿರಪ್ಪನಿಗೆ ಹಸರಗುಂಡಗಿ ಅಥವಾ ಮಂದೆವಾಲ, ಬಾಲಕ ಇಚ್ಚೆ ಪಡುವ ಶಾಲೆಗೆ ಕಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.‌ ಅಲ್ಲದೆ ಅಗತ್ಯ ಬಿದ್ದರೆ ಆತ‌ನಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಅವನಿಗೆ ಶಿಕ್ಷಣ ಹಕ್ಕು ದೊರಕಿಸಿಕೊಡಲು ಮುಂದಾಗಿದ್ದಾರೆ.

ABOUT THE AUTHOR

...view details