ಕರ್ನಾಟಕ

karnataka

ಕೃಷಿ ಹೊಂಡ ಸೇರಿದಂತೆ ವಿವಿಧ ಯೋಜನೆಗಳಡಿ ರೈತರಿಗೆ ಭರ್ಜರಿ ಸಬ್ಸಿಡಿ.. ಈಗಲೇ ಅರ್ಜಿ ಸಲ್ಲಿಸಿ

By

Published : Jul 19, 2022, 2:10 PM IST

ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯಧನವನ್ನು ಇದೀಗ ನರೇಗಾ ಯೋಜನೆಯಡಿ ನೀಡಲಾಗುತ್ತಿದೆ. ಶೇ.80 ರಷ್ಟು ಸಹಾಯಧನವನ್ನು ರೈತರು ಪಡೆಯಬಹುದಾಗಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಸಿಗುವ ಸಹಾಯಧನ ಎಷ್ಟು ಗೊತ್ತಾ?
ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಸಿಗುವ ಸಹಾಯಧನ ಎಷ್ಟು ಗೊತ್ತಾ?

ಬೆಂಗಳೂರು:ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಶೇ.80 ರಷ್ಟು ಸಹಾಯಧನ ಪಡೆಯಬಹುದು. ಕೃಷಿಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯಧನವನ್ನು ಇದೀಗ ನರೇಗಾ ಯೋಜನೆಯಡಿ ಕೊಡಲಾಗುತ್ತಿದೆ.

ರೈತರ ಕೃಷಿ ಚಟುವಟಿಕೆಗೆ ಮತ್ತು ನೀರಿನ ಅಭಾವ ನೀಗಿಸಲು ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಕೃಷಿ ಚಟುವಟಿಕೆಯಲ್ಲಿ ಬಳಸಿಕೊಳ್ಳುವುದು ಇದರ ಉದ್ದೇಶ. ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ ಅಳವಡಿಕೆ, ಹೊಂಡದಿಂದ ನೀರೆತ್ತಲು ಡೀಸೆಲ್ ಪಂಪ್ ಸೆಟ್, ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿ ಅವಕಾಶವಿದೆ. ಕೃಷಿಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಗನುಗುಣವಾಗಿ ಶೇ.80 ಸಬ್ಸಿಡಿ ನೀಡಲಾಗುತ್ತದೆ.

ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಸಿಗುವ ಸಹಾಯಧನ ಎಷ್ಟು ಗೊತ್ತಾ?

ಯಾವ ದಾಖಲೆ ಬೇಕು: ಕೃಷಿ ಹೊಂಡ ನಿರ್ಮಾಣಕ್ಕೆ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಇರಬೇಕು. ಸಂಬಂಧಿಸಿದ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ತಾಂತ್ರಿಕವಾಗಿಯೂ ಕೃಷಿ ಹೊಂಡ ಎಲ್ಲಿ ನಿರ್ಮಿಸಬೇಕು ಎಂಬುದನ್ನು ಸ್ಥಳ ಗುರುತಿಸುತ್ತಾರೆ. ಕೃಷಿ ಹೊಂಡದ ಸುತ್ತ ನೆರಳು ಪರದೆ ರಚಿಸಲು ಹಾಗೂ ಹೊಂಡದ ಸುತ್ತ ಬದು ನಿರ್ಮಾಣಕ್ಕೆ ಅವಕಾಶವಿದೆ.

ಇತ್ತೀಚೆಗೆ ಕೃಷಿ ಹೊಂಡದಲ್ಲಿ ಜಾನುವಾರುಗಳು, ಜನರಿಗೆ ಅನಾಹುತ ಆಗುವುದನ್ನು ತಪ್ಪಿಸಲು ಹೊಂಡಗಳ ಸುತ್ತಮುತ್ತ ಬೇಲಿ ನಿರ್ಮಾಣವನ್ನು ಕಡ್ಡಾಯಗೊಳಿಸಲಾಗಿದೆ. ಬೇಲಿ ಹಾಕಿಸಿಕೊಳ್ಳಲು ಶೇ.50 ರಷ್ಟು ಸಹಾಯಧವೂ ಸಿಗಲಿದೆ.

ಉಪಯೋಗವೇನು?: ಹೊಲದಲ್ಲಿ ಮಳೆ ನೀರು ಹರಿದು ಹೋಗಿ ಮಣ್ಣಿನ ಸವಕಳಿಯನ್ನು ತಡೆಯಬಹುದು. ಇದರಿಂದ ಅಂತರ್ಜಲ ವೃದ್ಧಿಯೂ ಸಾಧ್ಯ. ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕಾದರೆ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು. ಈ ಕಾರ್ಡ್ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಗೂ ರೈತ ಮಹಿಳೆಯರು ಅರ್ಹರಾಗಿರುತ್ತಾರೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಿಚ್ಚಿಸಿದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕು.

ವೈಯಕ್ತಿಕ ಕೃಷಿ ಹೊಂಡ, ಸಾಮೂಹಿಕ ಕೃಷಿ ಹೊಂಡದೊಂದಿಗೆ ಯಾಂತ್ರೀಕರಣ, ಪ್ಯಾಕ್ ಹೌಸ್, ಒಣದ್ರಾಕ್ಷಿ ಘಟಕ, ತಳ್ಳುವ ಗಾಡಿ, ಈರುಳ್ಳಿ ಶೇಖರಣಾ ಘಟಕ ಹಾಗೂ ಅರಿಶಿಣ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಜುಲೈ 25 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಓದಿ:ಪತ್ನಿಯನ್ನು ಎಟಿಎಂನಂತೆ ಬಳಸುವುದು ಮಾನಸಿಕ ಕಿರುಕುಳಕ್ಕೆ ಸಮ: ಧನದಾಹಿ ಪತಿಗೆ ಹೈಕೋರ್ಟ್ ಚಾಟಿ

ABOUT THE AUTHOR

...view details