ಕರ್ನಾಟಕ

karnataka

ವರ್ಷದ ಮೊದಲೇ ರಾಜ್ಯದಲ್ಲಿ ಕಾವೇರಿದ ಎಲೆಕ್ಷನ್ ಜ್ವರ, ಅಬ್ಬರದ ಪ್ರಚಾರ

By

Published : Apr 23, 2022, 9:47 PM IST

ಕರ್ನಾಟಕದಲ್ಲಿ ಚುನಾವಣೆಗೆ ವರ್ಷ ಇರುವಾಗಲೇ ಪ್ರಚಾರದ ಬಿಸಿ ಹೆಚ್ಚಾಗಿದೆ. ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್​ ರಾಜ್ಯ ಪ್ರವಾಸ ಆರಂಭಿಸಿದೆ. ಇದಲ್ಲದೇ ಆಮ್​ ಆದ್ಮಿ, ಶರದ್ ಪವಾರ್ ನೇತೃತ್ವದ ಎನ್​ಸಿಪಿ ಪಕ್ಷವೂ ಕರ್ನಾಟಕದ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.

political parties eye on karnataka election
ರಾಜ್ಯ ವಿಧಾನಸಭೆ ಚುನಾವಣೆ: ವರ್ಷದ ಮೊದಲೇ ಏರಿದ ಎಲೆಕ್ಷನ್ ಜ್ವರ, ಅಬ್ಬರದ ಪ್ರಚಾರ..!

ಬೆಂಗಳೂರು: ರಾಜ್ಯ ವಿಧಾನಸಭೆಗೆ ಸಾರ್ವಜನಿಕ ಚುನಾವಣೆ ನಡೆಯುವುದು ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಎಲೆಕ್ಷನ್ ಜ್ವರ ಏರತೊಡಗಿದೆ. ಕರ್ನಾಟಕದಲ್ಲಿ ಭದ್ರ ನೆಲೆ ಇರುವ ಹಾಗು ನೆಲೆಯೇ ಇಲ್ಲದ ರಾಜಕೀಯ ಪಕ್ಷಗಳು ಸಹ ಕರ್ನಾಟಕದ ವಿಧಾನಸಭೆ ಮೇಲೆ ಕಣ್ಣಿಟ್ಟಿದ್ದು ಬಿರುಸಿನ ಚುನಾವಣೆ ಪೂರ್ವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ಆಡಳಿತಾರೂಢ ಬಿಜೆಪಿಯ, ಪ್ರತಿಪಕ್ಷ ಕಾಂಗ್ರೆಸ್​ನ ಹೈಕಮಾಂಡ್ ಈಗಾಗಲೇ ಒಂದು ಸುತ್ತು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ಪ್ರಮುಖರ ಸಭೆ ನಡೆಸಿ ಚುನಾವಣೆ ಸಿದ್ಧತೆಗಳು ಹೇಗಿರಬೇಕೆನ್ನುವ ಬಗ್ಗೆ ಸೂಚನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವರಾದ ಬಿಜೆಪಿ ಹೈಕಮಾಂಡ್ ಏಪ್ರಿಲ್ ಮೊದಲವಾರ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿ ಚುನಾವಣೆ ತಾಲೀಮು ಆರಂಭಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ‌ ಸಹ ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಹಿರಿಯರ ಸಭೆ ನಡೆಸಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಆಪ್, ಎನ್​ಸಿಪಿಗಳಿಂದಲೂ ಕಣ್ಣು:ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಹಾಗು ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ಎನ್​ಸಿಪಿ ಕರ್ನಾಟಕ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಕಳೆದ ವಾರ ಶರದ್ ಪವಾರ್ ಅವರು ಬೆಂಗಳೂರಿಗೆ ಭೇಟಿ ನೀಡಿ ಬಾಣಸವಾಡಿನಲ್ಲಿ ಪಕ್ಷದ ಕಚೇರಿ ಆರಂಭಿಸಿದ್ದಾರೆ. ದೇವನಹಳ್ಳಿಯಲ್ಲಿ ರ್ಯಾಲಿ ನಡೆಸಿದ್ದಾರೆ.

ಆಮ್​ ಆದ್ಮಿ ಮತ್ತು ಎಸ್​ಸಿಪಿಯೂ ಚುನಾವಣಾ ಕಣದಲ್ಲಿ ದೊಡ್ಡ ಹೆಜ್ಜೆಗೆ ಪ್ರತತ್ನಿಸುತ್ತಿದೆ

ಈ ಬೆಳವಣಿಗೆಯ ನಡುವೆ ಆಮ್ ಆದ್ಮಿ ಪಕ್ಷವೂ ಪಂಜಾಬ್ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಕರ್ನಾಟಕ ರಾಜಕಾರಣಕ್ಕೆ ಪ್ರವೇಶಿಸಲು ಉತ್ಸುಕವಾಗಿದೆ. ಮೊನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಂಗಳೂರಿಗೆ ಭೇಟಿ ನೀಡಿ ರೈತ ಸಮಾವೇಶದಲ್ಲಿ ಭಾಗವಹಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಮಾಡುವ ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಪೊಲೀಸ್ ಕಮೀಶನರ್ ಆಗಿದ್ದ ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ಆಪ್ ಸೇರಿದ್ದಾರೆ‌. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಆಪ್ ಪಾರ್ಟಿ ಸೇರಿದ್ದು ರಾಜ್ಯದಲ್ಲಿ ಆಮ್ ಆದ್ಮಿ ಚಟುವಟಿಕೆಗಳು ಚುರುಕುಪಡೆದಿದೆ.

ಬಿಜೆಪಿ, ಕಾಂಗ್ರೆಸ್ ,ಜೆಡಿಎಸ್ ನಿಂದ ರಾಜ್ಯ ಪ್ರವಾಸ :ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿವೆ. ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರ ನೇತ್ರತ್ವದಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅನೇಕ ಸರ್ಕಾರಿ ಯೋಜನೆಗಳಿಗೆ ಚಾಲನೆ‌ನೀಡಿ ಸರ್ಕಾರದ ಪರ ಪ್ರಚಾರ ನಡೆಸಲಾಗುತ್ತಿದೆ.

ಪ್ರತಿ ಪಕ್ಷ ಕಾಂಗ್ರೆಸ್ ಬಿಜೆಪಿ‌ ಸರಕಾರದ ವಿರುದ್ಧ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನಜಾಗೃತಿ ಮಾಡತೊಡಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನೇತ್ರತ್ವದಲ್ಲಿ ಪ್ರವಾಸ ನಡೆಸಿ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರದ ವೈಫಲ್ಯಗಳನ್ನು ಪ್ರಚಾರ ಮಾಡಲಾಗುತ್ತಿದೆ.

ಜನತಾ ಜಲಧಾರೆ ರಾಜ್ಯ ಪ್ರವಾಸ: ಜೆಡಿಎಸ್ ಸಹ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ಚುನಾವಣೆ ಪೂರ್ವ ಪ್ರಚಾರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ಜನತಾ ಜಲಧಾರೆ ಹೆಸರಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳ ವಿರುದ್ಧ ಪ್ರಚಾರ ನಡೆಸಿ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಹೈಕಮಾಂಡ್​ ರ್ಯಾಲಿ: ಬರಲಿರುವ ದಿನಗಳಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಹಿರಿಯ ನಾಯಕರು ಆಗಮಿಸಲಿದ್ದಾರೆ. ಚುನಾವಣಾ ಪೂರ್ವ ರ್ಯಾಲಿಗಳನ್ನು ನಡೆಸಲು ರೂಪರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಾರಿ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಕಾಂಗ್ರೆಸ್ ಹೈಕಮಾಂಡ್​ಗಳಲ್ಲಿ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಇತರ ನಾಯಕರನ್ನು ರಾಜ್ಯಕ್ಕೆ ಕರೆಯಿಸಿ ಚುನಾವಣೆ ಪೂರ್ವ ರ್ಯಾಲಿಗಳನ್ನು ಕೈಗೊಳ್ಳಲು ವೇದಿಕೆ ಸಿದ್ಧಪಡಿಸತೊಡಗಿದೆ.

ಇದನ್ನೂ ಓದಿ:ಹೈಕೋರ್ಟ್​ಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ: ತಮಿಳುನಾಡಿನಲ್ಲಿ ಸಿಜೆಐ ಹೇಳಿದ್ದೇನು?

ABOUT THE AUTHOR

...view details