ಕರ್ನಾಟಕ

karnataka

15 ಸಾವಿರ ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ಮೋದಿ ಅಡಿಗಲ್ಲು: ಸಿಎಂ ಬೊಮ್ಮಾಯಿ

By

Published : Jun 7, 2022, 7:30 AM IST

ಬಹು ನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಮುಹೂರ್ತ ಕೂಡಿ ಬಂದಿದೆ. ಪಿಪಿಪಿ ಮಾದರಿಯಡಿ 15,767 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜೂ.20ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜೂ.20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ 15,000 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಪಿಪಿಪಿ ಮಾದರಿಯಡಿ 15,767 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 148.17 ಕಿ.ಮೀ. ವೆಚ್ಚದಲ್ಲಿ ನಾಲ್ಕು ಪ್ರತ್ಯೇಕ ಕಾರಿಡಾರ್​​ಗಳನ್ನು ಹೊಂದಿರಲಿದೆ. ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್​​ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಯೋಜನೆಯಡಿ 62 ನಿಲ್ದಾಣಗಳು, ಎಲಿವೇಟೆಡ್ ಮಾರ್ಗ 22 ಹಾಗೂ at grade 40 ಹೊಂದಿರಲಿದೆ. ಎಲಿವೇಟೆಡ್ ಮಾರ್ಗ 55.57 ಕಿ.ಮೀ ಇದ್ದರೆ, at grade 75.55 ಕಿ.ಮೀ + 17.05 ಕಿ.ಮೀ ಉದ್ದ ಇರಲಿದೆ. 101.7 ಎಕರೆ ಖಾಸಗಿ ಭೂಮಿಯ ಅವಶ್ಯಕತೆ ಇದೆ. ಇದರ ಸ್ವಾಧೀನಕ್ಕಾಗಿ 1,419 ಕೋಟಿ ರೂ. ವೆಚ್ಚವಾಗಲಿದೆ. 2026ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು ಎಲ್ಲಾ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆಗಾ ಸಿಟಿಯಾಗಿ ಬೆಳೆಯಲಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ನನ್ನ ಜೊತೆ ದಕ್ಷ ಸಚಿವರು ಹಾಗೂ ಶಾಸಕರ ತಂಡ ಕೆಲಸ ಮಾಡುತ್ತಿದೆ. ಅತ್ಯುತ್ತಮ ಬೆಂಗಳೂರನ್ನು ಅತ್ಯಂತ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಬೇಕು. ಈ ನಿಟ್ಟಿನಲ್ಲಿ ನಗರೋತ್ಥಾನ ಯೋಜನೆಯಡಿ ಮೂಲಸೌಕರ್ಯ ಯೋಜನೆಗಳಿಗಾಗಿ 6,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 1,500 ಕೋಟಿ ರೂ. ವೆಚ್ಚದಲ್ಲಿ ಬೃಹತ್ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಮೆಟ್ರೋ, ಉಪನಗರ ರೈಲು ಯೋಜನೆ, 12 ಸಿಗ್ನಲ್ ಫ್ರೀ ಕಾರಿಡಾರ್ ಮತ್ತು ಇತರೆ ಯೋಜನೆಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ:ಆಮೆಗತಿಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನ ಕಾರ್ಯ : ಸದ್ಯ ಟೆಂಡರ್ ಪ್ರಕ್ರಿಯೆಯಲ್ಲಿ ಯೋಜನೆ

ABOUT THE AUTHOR

...view details