ಕರ್ನಾಟಕ

karnataka

'ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ಧ ಆರೋಪ'

By

Published : Nov 6, 2021, 5:28 PM IST

ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಈ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

Bangalore
ರಾಮಲಿಂಗಾರೆಡ್ಡಿ ಮಾಧ್ಯಮಗೋಷ್ಠಿ

ಬೆಂಗಳೂರು:ಅಧಿಕಾರಕ್ಕಾಗಿ ಕೆಲ ರಾಜಕಾರಣಿಗಳು ಬಿಜೆಪಿಗೆ ಹೋದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಬಿಜೆಪಿಯವರು ಆ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಮಾತು, ವಿಷಯ ತಿರುಚುವಲ್ಲಿ ನಿಸ್ಸೀಮರು. ಬಿಜೆಪಿಯವರಿಗೆ ಸುಳ್ಳು ಹೇಳುವುದು ಕರಗತವಾಗಿದೆ. ಹುಟ್ಟುತ್ತಲೇ ಸುಳ್ಳು ಹೇಳುವುದು ಕಲಿತುಕೊಂಡಿದ್ದಾರೆ. ಸುಳ್ಳು ಹೇಳುವುದು ರಕ್ತದಲ್ಲಿ ಇದೆ. ಒಂದೇ ಸುಳ್ಳನ್ನು ನೂರು ಬಾರಿ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

ಸಿಎಂಗೆ ದಲಿತರ ಬಗ್ಗೆ ಕಾಳಜಿಯಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತರಿಗೆ ಅನೇಕ ಸೌಲಭ್ಯ ನೀಡಲಾಗಿದೆ. ಬಿಜೆಪಿಯವರು ಹರಿ ಜನರ ಬಗ್ಗೆ ಮೊಸಳೆ ಕಣ್ಣೀರು ಹಾಕ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

  • ವಸತಿ ನಿಲಯ ಕಟ್ಟಡಕ್ಕೆ 1,498 ಕೋಟಿ
  • ವಸತಿ ಸಂಕೀರ್ಣಗಳಿಗೆ 1573 ಕೋಟಿ
  • ಎಸ್​​ಸಿ- ಎಸ್​ಟಿ ನಡೆಸುವ ಧಾರ್ಮಿಕ ಸಂಸ್ಥೆಗಳಿಗೆ 58 ಕೋಟಿ.
  • ಅಲೆಮಾರಿ ಶೈಕ್ಷಣಿಕ ಅಭಿವೃದ್ಧಿಗೆ 222 ಕೋಟಿ
  • ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ 35 ಸಾವಿರ ರೂ
  • ಸ್ಕಾಲರ್ ಶಿಪ್​​ಗಾಗಿ 1843 ಕೋಟಿ
  • ವಿದೇಶಿ ವ್ಯಾಸಂಗಕ್ಕೆ 197 ವಿದ್ಯಾರ್ಥಿಗಳಿಗೆ ಅವಕಾಶ
  • ಸ್ಮಶಾನ ಭೂಮಿಗಾಗಿ 53.65ಕೋಟಿ
  • ಅಂಬೇಡ್ಕರ್, ಜಗಜೀವನ್ ರಾಂ ಭವನಕ್ಕೆ 233 ಕೋಟಿ
  • ಗಂಗಾ ಕಲ್ಯಾಣ ಯೋಜನೆಯಲ್ಲಿ 67,600 ಕೊಳವೆಬಾವಿ, ಇದೆಲ್ಲವೂ ಪರಿಶಿಷ್ಟರಿಗಾಗಿ ಸಿದ್ದರಾಮಯ್ಯ ಕೊಟ್ಟಿದ್ದರು. ದಲಿತರ ಬಗ್ಗೆ ಎಲ್ಲಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ವಿಚಾರ ಡೈವರ್ಟ್ ಮಾಡಲು ಬಿಟ್ ಕಾಯಿನ್ ವಿಚಾರ ಪ್ರಸ್ತಾಪ :

ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಈ ಆರೋಪ ಮಾಡುತ್ತಿದ್ದಾರೆ. ಬಿಟ್ ಕಾಯಿನ್‌ ಹ್ಯಾಕ್​​ ಮಾಡಿ ಕೋಟ್ಯಂತರ ಹಣ ಮಾಡಿದ್ದಾರೆ. 7 ರಿಂದ 8 ಸಾವಿರ ಕೋಟಿ ಮಾಡಿದ ಬಗ್ಗೆ ಮಾತನಾಡುತ್ತಿದ್ದಾರೆ. ನೆದರ್​​ಲ್ಯಾಂಡ್, ಅಮೆರಿಕಾ ಸೇರಿ ಅನೇಕ ಕಡೆ ಕೇಸ್ ದಾಖಲಾಗಿದೆ.

ನಮ್ಮ ರಾಜ್ಯದಿಂದಲೇ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದರ ಹಿಂದೆ ಪ್ರಭಾವಿಗಳು ಇರುವ ಮಾಹಿತಿ ಇದೆ. ಆಡಳಿತದಲ್ಲಿ ಇರುವವರೇ ಪ್ರಭಾವಿಗಳು. ಪ್ರಭಾವಿಗಳ ಮಗ ಇದರಲ್ಲಿ ಇದ್ದಾನೆ ಎಂದ ಅವರು ವಿಚಾರಣೆ ಹಂತದಲ್ಲಿರುವ ಸಂದರ್ಭ ತಿಳಿದಿದ್ದರೂ ಹೆಸರು ಹೇಳಲಾಗದು. ಈ ಅವ್ಯವಹಾರದ ನ್ಯಾಯಾಂಗ ತನಿಖೆ ಆಗಲಿ ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ದಲಿತ ಪರ:

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ದಲಿತ ಪರವಾಗಿತ್ತು. ಈ ಹಿಂದೆ ಸುಪ್ರಿಂ ಕೋರ್ಟ್ ತೀರ್ಪು ಮೀಸಲಾತಿಗೆ ವ್ಯತಿರಿಕ್ತವಾಗಿ ಬಂದರೂ, ಕಾನೂನು ತಂದು ದಲಿತರಿಗೆ ಮೀಸಲಾತಿ ನೀಡಲಾಯಿತು.

ದಲಿತರಿಗೆ 1 ಕೋಟಿ ರೂ. ನಷ್ಟು ನೇರ ಟೆಂಡರ್‌ ಕೊಡುವ ಕಾರ್ಯಕ್ರಮ ನಮ್ಮದು. ಆದರೆ ಕಾರಜೋಳ ಸಾಹೇಬರು ಏನು ಮಾಡಿದ್ದಾರೆ?. ಅವರ ಸರ್ಕಾರ ಏನು ಮಾಡಿದೆ. ಕೇಂದ್ರ ಸರ್ಕಾರದಲ್ಲಿ ನಾರಾಯಣಸ್ವಾಮಿ ಇದಾರೆ. ಆದರೆ ದಲಿತರಿಗೆ ಇನ್ನೂ ಸ್ಕಾಲರ್ ಶಿಪ್ ಏಕೆ ಕೊಟ್ಟಿಲ್ಲ?. 600 ಕೋಟಿ ಕೋಡಬೇಕು, ಇನ್ನೂ ಕೊಟ್ಟಿಲ್ಲ. ಸಿದ್ದರಾಮಯ್ಯ ಹೇಳಿದ್ದು ಇದನ್ನೇ. ಬಿಜೆಪಿ ದಲಿತರ ಪರ ಇಲ್ಲ ಎಂದು. ಹೊಟ್ಟೆಪಾಡಿಗೆ ಹೋದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಲ್ಲ. ಸಚಿವ ಕಾರಜೋಳ ಇತರರು ಸ್ವಾರ್ಥಕ್ಕಾಗಿ ಹೋಗಿದ್ದಾರೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಸಾಧ್ಯವಿಲ್ಲ. ಇವರಿಗೆ ಕೋಮುವಾದ, ಜಾತಿ ಜಗಳ ಮಾಡಿ ಅಧಿಕಾರಕ್ಕೆ ಬರುವುದು ಮುಖ್ಯ ಅಷ್ಟೇ. ಆದರೆ ಇದು ನಡೆಯುವುದಿಲ್ಲ ಎಂದರು.

ಇದನ್ನೂ ಓದಿ:ದಲಿತರ ಕುರಿತು ವಿವಾದಿತ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

ABOUT THE AUTHOR

...view details