ಕರ್ನಾಟಕ

karnataka

ಚೀನಾ ಮಾರುಕಟ್ಟೆಯಂತೆ ಇಲ್ಲೂ ವನ್ಯಜೀವಿ ಮಾಂಸ ಮಾರಾಟ!

By

Published : Nov 21, 2020, 5:16 PM IST

ಬನ್ನೇರುಘಟ್ಟ ವನ್ಯಜೀವಿ ಅಭಯಾರಣ್ಯದ ಸುತ್ತಲೂ ಎಲ್ಲ ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ, ವಾಹನ ಓಡಾಟ ಹೆಚ್ಚಿದ್ದು, ಪ್ರಾಣಿಗಳ ಅಪಘಾತಕ್ಕೂ ಕಾರಣವಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಡೈನಮೈಟ್ ಬಳಕೆ ಹೆಚ್ಚಾಗಿದ್ದು, ಸಾವಿರದ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿವೆ ಎಂದು ಮಾಜಿ ಅರಣ್ಯಾಧಿಕಾರಿ ಯಲ್ಲಪ್ಪರೆಡ್ಡಿ ಹೇಳಿದರು.

animal meat
ವನ್ಯಜೀವಿ ಮಾಂಸ

ಬೆಂಗಳೂರು:ನಗರ ಪ್ರದೇಶದಲ್ಲಿ ಹಸಿರಿನ ಜೊತೆ ಪ್ರಾಣಿ - ಪಕ್ಷಿಗಳ ಸಂತತಿ ಕ್ಷೀಣಿಸುತ್ತಿದ್ದು, ಅಭಯಾರಣ್ಯಗಳು ಇದಕ್ಕೆ ಹೊರತಾಗಿಲ್ಲ. ಅರಣ್ಯ ವಿನಾಶದಿಂದ ಕ್ರೂರ ಮೃಗಗಳು ನಾಡಿಗೆ ಧಾವಿಸುತ್ತಿದ್ದು, ಅದಕ್ಕೆ ಮೂಲ ಕಾರಣ ನಾವೇ ಎಂಬುದನ್ನು ಮರೆತಿದ್ದೇವೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವನ್ಯಜೀವಿಗಳನ್ನು ಬೇಟೆಯಾಡಿ ಅದರ ಮಾಂಸ ಮಾರಾಟ ಮಾಡುತ್ತಿದ್ದೇವೆ.

ಪರಿಸರ ತಜ್ಞ, ಮಾಜಿ ಅರಣ್ಯಾಧಿಕಾರಿ ಯಲ್ಲಪ್ಪ ರೆಡ್ಡಿ ಅವರು ಈ ಕುರಿತು ಕೆಲ ಮಾಹಿತಿಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ವನ್ಯಜೀವಿ ಹತ್ಯೆ ನಿರಂತರವಾಗಿ ಏರುತ್ತಿದ್ದರೂ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೊರತೆ ಹಾಗೂ ಗಾರ್ಡ್ಸ್​​ಗಳ ನೇಮಕಾತಿ ವಿಳಂಬ ಅದಕ್ಕೆ ಕಾರಣ ಹಾಗೂ ಪ್ರಾಣಿಗಳ ಮೇಲೆ ಗನ್​,ಆಯುಧಗಳ ಪ್ರಯೋಗ ಎಂದರು.

ಕಾವೇರಿ ನದಿ ಪಾತ್ರದ ಅಭಯಾರಣ್ಯಗಳಲ್ಲಿ ಪಕ್ಷಿಗಳ ಹತ್ಯೆ ಅಧಿಕವಾಗಿ ಕಂಡು ಬರುತ್ತಿದೆ. ಅದಕ್ಕಾಗಿ ಒಂದು ಜಾಲವೇ ಸೃಷ್ಟಿಯಾಗಿದೆ. ಬೆಂಗಳೂರಿನ ರಸೆಲ್ ಮಾರುಕಟ್ಟೆ ಸುತ್ತಮುತ್ತ ವನ್ಯಜೀವಿಗಳ ಮಾಂಸ ಮಾರಾಟ ಹೆಚ್ಚಿದ್ದು, ನೂರಾರು ಹೋಟೆಲ್​​ಗಳಲ್ಲಿ ಅವುಗಳ ಭಕ್ಷ್ಯ ಭೋಜನಗಳು ದೊರೆಯುತ್ತಿದೆ. ಉದ್ಯೋಗಿಗಳು, ಶ್ರೀಮಂತರೇ ಅದರ ಗ್ರಾಹಕರು ಎಂದು ಅಚ್ಚರಿ ಮಾಹಿತಿ ಹೊರಹಾಕಿದರು.

ಚೀನಾ ಮಾರುಕಟ್ಟೆಯಂತೆ ಇಲ್ಲೂ ಅನಧಿಕೃತವಾಗಿ ಮಾರುಕಟ್ಟೆ ಇದ್ದು, ವನ್ಯಜೀವಿ ಮಾಂಸ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಅದರಲ್ಲೂ ನಕ್ಷತ್ರ ಆಮೆಗೆ ಬೇಡಿಕೆ ಹೆಚ್ಚಿದ್ದು, ಇದೊಂದು ದೊಡ್ಡ ಮಾಫಿಯಾ ಆಗಿದೆ. ವಿದ್ಯುತ್ ತಂತಿ ಬೇಲಿಗಳಿಂದ, ವಿಷ ಪ್ರಾಸನದಿಂದ ಆನೆಗಳ ಸಾವಾಗುತ್ತಿದೆ. ಅದರಲ್ಲಿ ಕೆಲವು ಉದ್ದೇಶ ಪೂರ್ವಕವಾಗಿವೆ. ಇನ್ನೂ ಕೆಲ ಯುವಕರು ಮೋಜಿಗಾಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದಾರೆ.

ಅರಣ್ಯ ಸಿಬ್ಬಂದಿ ಗನ್​​​ಗಳ ಕೊರತೆಯಿರುವ ಕಾರಣ ಅಪರಾಧ ಕೃತ್ಯಗಳ ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಅಪರಾಧಿಗಳ ಬಳಿ ಅತ್ಯಾಧುನಿಕ ಆಯುಧಗಳಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಬರಿಗೈಯಲ್ಲಿ ಅವರನ್ನು ಎದುರಿಸುವುದು ಅಸಾಧ್ಯವಾಗಿದೆ. ಈ ಅನುಭವಗಳು ನನಗಾಗಿವೆ. 10 ಸಾವಿರ ಎಕರೆಗೆ ಒಬ್ಬ ಗಾರ್ಡ್​​​ ಇದ್ದರೆ, ಅಪರಾಧ ಕೃತ್ಯಗಳನ್ನು ತಡೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸ್ಥಳೀಯರು ದುಡ್ಡು, ಮದ್ಯದ ಆಮೀಷಕ್ಕೆ ಒಳಗಾಗುತ್ತಿದ್ದು, ದೊಡ್ಡಮಟ್ಟದಲ್ಲಿ ಅಪರಾಧಿಗಳಿಗೆ ಸಹಾಯ ಮಾಡುತ್ತಾರೆ. ವನ್ಯಜೀವಿ ಅಪರಾಧ ಪ್ರಕರಣಗಳು ಪ್ರತಿ ವರ್ಷ 5 ರಿಂದ 10ರಷ್ಟು ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳು ಸುಖಾಸುಮ್ಮನೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ಮಾನವ ಸಂಘರ್ಷಕ್ಕೆ ಕಾರಣವಾಗುತ್ತದೆ. ಮೈನಿಂಗ್, ಕ್ವಾರಿ, ಮರಳು ಕಳ್ಳಸಾಗಣೆ, ಇನ್ನಿತರ ಅಭಿವೃದ್ದಿ ಕಾರ್ಯಗಳಿಂದ ಅವುಗಳ ಜಾಗ, ಅನ್ನ - ನೀರನ್ನು ಕಿತ್ತು ಕೊಳ್ಳುತ್ತಿದ್ದೇವೆ. ನೆಲೆಕಂಡುಕೊಳ್ಳಲು ಒದ್ದಾಡುತ್ತಿರುವ ಪ್ರಾಣಿಗಳಲ್ಲಿ ಸಂತನಾಭಿವೃದ್ಧಿ ಕ್ಷೀಣಿಸುತ್ತಿದೆ. ಸರ್ಕಾರ ಪಂಚಾಯಿತಿಗಳಿಗೆ ಮರಳು ಸಾಗಣೆಗೆ ಅವಕಾಶ ಕೊಟ್ಟಿದ್ದು, ಅದರಿಂದ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರು ಸಿಗುವುದು ದುಸ್ತರವಾಗಿದೆ.

ಮನುಷ್ಯರ ಅತಿ ಆಸೆ, ಅವೈಜ್ಞಾನಿಕ ಅಭಿವೃದ್ಧಿ, ಮಿತಿ ಮೀರಿರುವ ಕ್ರಿಮಿನಾಶಕ ನದಿ ನೀರಿನಲ್ಲಿ ಸೇರುತ್ತಿದ್ದು, ಪ್ರಾಣಿ, ಪಕ್ಷಿಗಳು, ಮೀನುಗಳ ಸಾವಿಗೆ ಕಾರಣವಾಗಿದೆ. ಕಾಡುಗಳ ಬಗೆಗಿರುವ ಕೋರ್ಟ್ ಸೂಚನೆಗಳನ್ನು ಅಧಿಕಾರಿ ವರ್ಗ, ಸರ್ಕಾರ, ಧನಿಕರು ಉಳ್ಳವರು ಮನಸೋ ಇಚ್ಛೆ ಉಲ್ಲಂಘಿಸುತ್ತಿದ್ದಾರೆ. ಪರಿಸರವಾದಿಗಳು ಇವೆಲ್ಲದರ ವಿರುದ್ಧ ಹೊರಾಡುತ್ತಿದ್ದರೂ ಸರ್ಕಾರ, ಅಧಿಕಾರಿ ವರ್ಗ ಕ್ಯಾರೆ ಎನ್ನುತ್ತಿಲ್ಲ. ಇನ್ನಾದರೂ ಅಳಿವಿನಂಚಿಗೆ ಬಂದಿರುವ ಕಾಡುಗಳು, ಪ್ರಾಣಿಗಳ ಉಳಿವಿಗೆ ಸರ್ಕಾರ ಪಣತೊಡಬೇಕಿದೆ ಎಂದು ಒತ್ತಾಯಿಸಿದರು.

ABOUT THE AUTHOR

...view details