ಕರ್ನಾಟಕ

karnataka

ಅವಾಚ್ಯ ಶಬ್ಧ ಬಳಕೆ.. ಕ್ಷಮೆ ಕೋರುವಂತೆ ಸರ್ಕಾರಿ ನೌಕರರ ಸಂಘದಿಂದ ಶಾಸಕ ರಮೇಶ್ ಕುಮಾರ್​​ಗೆ ಪತ್ರ..

By

Published : Oct 4, 2021, 9:11 PM IST

ರಾಜ್ಯದ ಜನಪ್ರತಿನಿಧಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಸದಾ ಮೇಲ್ಪಂಕ್ತಿಯಾಗಿ ನಿಲ್ಲುವ ವ್ಯಕ್ತಿತ್ವದವರೆಂಬ ಕಾರಣದಿಂದ ತಮ್ಮ ಈ ಮಾತುಗಳು ರಾಜ್ಯದಾದ್ಯಂತ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದೆ..

Ramesh Kumar
ರಮೇಶ್ ಕುಮಾರ್

ಬೆಂಗಳೂರು :ಸರ್ಕಾರಿ ನೌಕರರ ವಿರುದ್ಧ ಅವಾಚ್ಯ ಶಬ್ಧ ಬಳಸಿದ್ದಕ್ಕೆ ಕ್ಷಮೆಯಾಚಿಸುವಂತೆ ಕೋರಿ ಕಾಂಗ್ರೆಸ್ ಶಾಸಕ‌ ರಮೇಶ್ ಕುಮಾರ್​​ಗೆ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರ ಬರೆದಿದೆ. ಪತ್ರದಲ್ಲಿ ರಾಜ್ಯದ ಸಂಸದೀಯ ಇತಿಹಾಸದಲ್ಲಿ ಅತ್ಯಂತ ಘನತೆವೆತ್ತ ರಾಜಕಾರಣಿಯಾಗಿ, ಆಳವಾದ ಸಂವಿಧಾನಿಕ ಜ್ಞಾನ ಹಾಗೂ ಅಪರೂಪದ ಸರಳ, ಸಜ್ಜನ ನಡವಳಿಕೆಯ ಸಭಾಧ್ಯಕ್ಷರಾಗಿ, ರಾಜ್ಯದ ವಿಧಾನಸಭೆಗೊಂದು ಗೌರವ ತಂದು ಕೊಟ್ಟ ತಮ್ಮ ಬಗ್ಗೆ ಸರ್ಕಾರಿ ನೌಕರರ ಸಂಘ ಅತ್ಯಂತ ಗೌರವ ಹೊಂದಿರುತ್ತದೆ. ತಮ್ಮ ಪ್ರತಿ ನಡವಳಿಕೆಯೂ ರಾಜ್ಯದ ಇತರೆ ಜನಪ್ರತಿನಿಧಿಗಳಿಗೆ ಮಾರ್ಗದರ್ಶಕವಾಗಿರುತ್ತದೆ ಎಂಬ ಅಭಿಪ್ರಾಯ ನಮ್ಮದು ಎಂದು ವಿವರಿಸಿದ್ದಾರೆ.

ಅ.1ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಇಲಾಖೆಯ ನೌಕರರ ಬಗ್ಗೆ ಅವಾಚ್ಯ ಶಬ್ಧ ಬಳಸಿರುವ ಬಗ್ಗೆ ನಮಗೆ ತೀವ್ರ ನೋವಾಗಿರುತ್ತದೆ. ಅಲ್ಲದೇ, ಆ ಪದ ಬಳಕೆಯ ಬಗ್ಗೆ ತಾವು ಸಮರ್ಥನೆಯನ್ನು ನೀಡುತ್ತಾ, ಇದರ ವಿರುದ್ಧ ಪ್ರತಿಭಟನೆ ನಡೆಸಬಹುದಾದ ಸಂಘಟನೆಯ ಬಗ್ಗೆ ಕೂಡ 'ಸೀಮೆ ಎಣ್ಣೆ ಹಾಕಿ ಸುಡಿಸಿಬಿಡ್ತೀನಿ' ಎಂದು ಹೇಳಿರುವುದೂ ಕೂಡ ನೌಕರರನ್ನು ತಾವೇ ಪ್ರತಿಭಟನೆಗೆ ಪ್ರಚೋಧಿಸಿದಂತಾಗುತ್ತದೆ.

ರಾಜ್ಯದ ಜನಪ್ರತಿನಿಧಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಸದಾ ಮೇಲ್ಪಂಕ್ತಿಯಾಗಿ ನಿಲ್ಲುವ ವ್ಯಕ್ತಿತ್ವದವರೆಂಬ ಕಾರಣದಿಂದ ತಮ್ಮ ಈ ಮಾತುಗಳು ರಾಜ್ಯದಾದ್ಯಂತ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದೆ. ಸರ್ಕಾರಿ ನೌಕರರು ಕೆಲಸ ನಿರ್ವಹಿಸುವಲ್ಲಿ ಇರುವ ಆಡಳಿತಾತ್ಮಕ ಲೋಪದೋಷಗಳು ತಮಗೆ ತಿಳಿದಿರುವಂತದ್ದಾಗಿದೆ.

ಸರ್ಕಾರದಲ್ಲಿ ಸುಮಾರು ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಇರುವ ಅತೀವ ಒತ್ತಡದಿಂದಾಗಿ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಲು ಕಷ್ಟಸಾಧ್ಯವಾಗುತ್ತಿದೆ. ಇನ್ನೂ ಅನೇಕ ಸಮಸ್ಯೆಗಳನ್ನು ಅಧಿಕಾರಿ, ನೌಕರರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಅನೇಕ ನ್ಯೂನತೆಗಳ ಮಧ್ಯೆಯೂ ಕರ್ನಾಟಕ ರಾಜ್ಯದ ಕಾರ್ಯಾಂಗ ಉತ್ತಮ ಸೇವೆ ಸಲ್ಲಿಸುತ್ತಿರುವ ಬಗ್ಗೆ ಕೂಡ ತಾವು ತಿಳಿದವರಾಗಿರುತ್ತೀರಿ. ಆದ್ದರಿಂದ ತಮ್ಮಿಂದ ಈ ರೀತಿಯ ಮಾತುಗಳಿಗಿಂತ, ಖಾಲಿ ಹುದ್ದೆಗಳ ಭರ್ತಿ ಮಾಡುವುದರ ಬಗ್ಗೆ ಹಾಗೂ ಇತರೆ ನಮ್ಮ ನ್ಯಾಯಬದ್ಧ ಮನವಿಗಳಿಗೆ ಸೂಕ್ತ ಬೆಂಬಲ ಬಯಸುತ್ತೇವೆ ಎಂದು‌ ಕೋರಿದ್ದಾರೆ.

ಆದರೆ, ಈಗಾಗಲೇ ತಾವು ಬಳಸಿರುವ ಶಬ್ಧದ ಬಗ್ಗೆ ವಿಷಾದ ವ್ಯಕ್ತಪಡಿಸುವ ಮೂಲಕ ಸರ್ಕಾರಿ ನೌಕರರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಸರ್ಕಾರಿ ನೌಕರರ ಮನೋಬಲ ಹೆಚ್ಚಿಸಬೇಕಾಗಿ ತಮ್ಮಲ್ಲಿ ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details