ಕರ್ನಾಟಕ

karnataka

ಕೇಂದ್ರ ಸರ್ಕಾರ ಆಯ್ತು, ರಾಜ್ಯದಲ್ಲೂ ಕೃಷಿ ಕಾಯ್ದೆಗಳ ವಾಪಸ್​ಗೆ ರೈತ ಸಂಘ ಆಗ್ರಹ

By

Published : Nov 24, 2021, 7:01 PM IST

kodihalli chandrashekar
ಕೃಷಿ ಕಾಯ್ದೆಗಳ ವಾಪಸ್​ಗೆ ರೈತ ಸಂಘ ಆಗ್ರಹ ()

ರೈತರ ಬೇಡಿಕೆಗಳಾದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವುದು, ವಿದ್ಯುತ್​ ಖಾಸಗೀಕರಣಕ್ಕ ತಡೆ, ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘ ಆಗ್ರಹಿಸಿದೆ.

ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಾದಿತ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ಅದಕ್ಕೆ ಸಚಿವ ಸಂಪುಟವೂ ಒಪ್ಪಿಗೆ ನೀಡಿದೆ. ಸರ್ಕಾರದ ನಿರ್ಧಾರವನ್ನು ರೈತ ಸಂಘ ಸ್ವಾಗತಿಸುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದಿದೆ. ಈಗ ರಾಜ್ಯದಲ್ಲೂ ಆ ಕಾಯ್ದೆಗಳನ್ನು ವಾಪಸ್​ ಪಡೆಯಬೇಕು. ಇಲ್ಲವಾದಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ ಸುವರ್ಣಸೌಧವನ್ನು ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲೂ ಕಾಯ್ದೆಗಳನ್ನು ಹಿಂಪಡೆಯುವ ತನಕ ರಾಜ್ಯಾದ್ಯಂತ ಹೆದ್ದಾರಿ ತಡೆ ಚಳವಳಿ ಮುಂದುವರೆಸುತ್ತೇವೆ. ರೈತರ ಬೇಡಿಕೆಗಳಾದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವುದು, ವಿದ್ಯುತ್​ ಖಾಸಗೀಕರಣಕ್ಕ ತಡೆ, ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯಬೇಕು. ಇದರ ಅಂಗವಾಗಿ ನ.26ರಂದು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.

ಇದನ್ನೂ ಓದಿ: Tomato price: ಹುಬ್ಬಳ್ಳಿಯಲ್ಲೂ ದಾಖಲೆ ಏರಿಕೆ ಕಂಡ ಟೊಮೆಟೊ.. ಗ್ರಾಹಕರು ಕಂಗಾಲು

ರೈತ ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಹೆಚ್ಚು ರೈತರಿಗೆ ತೆಲಂಗಾಣ ಸರ್ಕಾರ ತಲಾ 3 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರ ತಲಾ 10 ಲಕ್ಷ ಮತ್ತು ಕೇಂದ್ರ ಸರ್ಕಾರ ತಲಾ 1 ಕೋಟಿ ಪರಿಹಾರ ಕೊಡಬೇಕಾಗಿ ಆಗ್ರಹಿಸಿದರು.

ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಕೊಡಿ:

ಇನ್ನು ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಹುತೇಕ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಜನ- ಜಾನುವಾರುಗಳು ಸಂಕಷ್ಟಕ್ಕೀಡಾಗಿದ್ದಾರೆ. ನಷ್ಟ ಅನುಭವಿಸಿರುವ ಎಲ್ಲಾ ರೈತರ ಹೊಲ, ತೋಟ ಗದ್ದೆಗಳಲ್ಲಿ ಬೆಳೆಯಾನುಸಾರ ಆಗಿರುವ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details