ಕರ್ನಾಟಕ

karnataka

ಐಟಿ ದಾಳಿ ವೇಳೆ ಸಾಕ್ಷ್ಯ ನಾಶ ಪ್ರಕರಣ : ಡಿಕೆಶಿಗೆ ಹೈಕೋರ್ಟ್ ಬಿಗ್ ರಿಲೀಫ್

By

Published : Apr 5, 2021, 7:04 PM IST

ಆದಾಯ ತೆರಿಗೆ ಪಾವತಿಸದೆ ವಂಚಿಸಿದ ಆರೋಪದಡಿ ಐಟಿ ಅಧಿಕಾರಿಗಳು 2017ರ ಆಗಸ್ಟ್ 2ರಂದು ಡಿ ಕೆ ಶಿವಕುಮಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಡಿಕೆಶಿ ಮನೆಯಲ್ಲಿಲ್ಲದೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಅದರಂತೆ ಐಟಿ ಆಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು..

dk shivakumar  Case for destruction of evidence if IT attacks hearing
ಶಿವಕುಮಾರ್

ಬೆಂಗಳೂರು :ಆದಾಯ ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿದ್ದ ವೇಳೆ ಸಾಕ್ಷ್ಯ ನಾಶಪಡಿಸಿದ್ದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಐಟಿ ದಾಳಿ ವೇಳೆ ಡಿ ಕೆ ಶಿವಕುಮಾರ್ ಸಾಕ್ಷ್ಯನಾಶಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಪುರಸ್ಕರಿಸದ ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನ ವಜಾಗೊಳಿಸಿ ಆದೇಶಿಸಿದೆ. ಡಿ ಕೆ ಶಿವಕುಮಾರ್ ಮೇಲಿನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರವಿಲ್ಲ ಎಂದೇ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿದೆ.

ಆರೋಪವನ್ನು ಸಾಬೀತುಗೊಳಿಸುವಂತಹ ಅಂಶಗಳನ್ನು ನೀಡುವಲ್ಲಿ ಐಟಿ ವಿಫಲವಾಗಿದೆ. ಈ ಹಿನ್ನೆಲೆ ವಿಚಾರಣಾ ನ್ಯಾಯಾಲಯದ ಆದೇಶ ಸರಿ ಇದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಗೊಳಿಸಿದೆ.

ಪ್ರಕರಣದ ಹಿನ್ನೆಲೆ :ಆದಾಯ ತೆರಿಗೆ ಪಾವತಿಸದೆ ವಂಚಿಸಿದ ಆರೋಪದಡಿ ಐಟಿ ಅಧಿಕಾರಿಗಳು 2017ರ ಆಗಸ್ಟ್ 2ರಂದು ಡಿ ಕೆ ಶಿವಕುಮಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಡಿಕೆಶಿ ಮನೆಯಲ್ಲಿಲ್ಲದೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿರುವ ಮಾಹಿತಿ ಲಭ್ಯವಾಗಿತ್ತು. ಅದರಂತೆ ಐಟಿ ಆಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು.

ಈ ವೇಳೆ ಡಿಕೆಶಿ ತನ್ನ ಪರ್ಸ್‌ನಲ್ಲಿದ್ದ ಒಂದು ಚೀಟಿ ಹೊರತೆಗೆದು ಅದನ್ನು ಹರಿದು ಹಾಕಿದ್ದರು. ಈ ಹಿನ್ನೆಲೆ ಡಿಕೆಶಿ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಹಾಗೂ ತನಿಖೆಗೆ ಸಹಕರಿಸದ ಆರೋಪದಡಿ ಪ್ರಕರಣ ದಾಖಲಿಸಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಗಳಿಗೆ ಸೂಕ್ತ ಆಧಾರ ಇಲ್ಲ ಎಂದು ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಐಟಿ ಇಲಾಖೆ ಹೈಕೋರ್ಟ್‌ಗೆ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

ABOUT THE AUTHOR

...view details