ದೊಡ್ಡಬಳ್ಳಾಪುರ:ಇಂದು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸ್ವಾತಂತ್ರ್ಯ ಪಡೆದಿದ್ದೇವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡಬಳ್ಳಾಪುರದಿಂದ ಬಂದ ಹೋರಾಟಗಾರರ ಕೊಡುಗೆ ಅಪಾರ.
ದೊಡ್ಡಬಳ್ಳಾಪುರಕ್ಕೆ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಕಸ್ತೂರ ಬಾ ಬರಲು ಪ್ರಮುಖ ಕಾರಣವಾಗಿದ್ದು ದೊಡ್ಡಬಳ್ಳಾಪುರದ ನಾಯಕರಾದ ಟಿ. ಸಿದ್ದಲಿಂಗಯ್ಯ, ರುಮಾಲೆ ಚನ್ನಬಸಪ್ಪ ಮತ್ತು ಮುಗುವಾಳಪ್ಪನವರು. ಅಂದಿನ ಕಾಂಗ್ರೆಸ್ ಪಕ್ಷದಲ್ಲಿ ಇವರು ಪ್ರಮುಖ ಹುದ್ದೆಯಲ್ಲಿದ್ದವರು, ಇವರ ಸ್ಫೂರ್ತಿಯಿಂದ ದೊಡ್ಡಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡಬಳ್ಳಾಪುರದ ಹೋರಾಟಗಾರರು - ಇತಿಹಾಸಕಾರರ ಪ್ರತಿಕ್ರಿಯೆ ಶಿವಪುರ ಧ್ವಜಸತ್ಯಾಗ್ರಹದಲ್ಲಿ ಧ್ವಜಾರೋಹಣ ಮಾಡಿದ್ದು ಟಿ.ಸಿದ್ದಲಿಂಗಯ್ಯ.
ದೊಡ್ಡಬಳ್ಳಾಪುರದವರಾದ ಟಿ. ಸಿದ್ದಲಿಂಗಯ್ಯ ವಕೀಲ ವೃತ್ತಿಯನ್ನ ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ರಾಜ್ಯ ಮಟ್ಟದ ಕಾಂಗ್ರೆಸ್ ಮುಖಂಡರಾಗಿ ಸಾಕಷ್ಟು ಹೆಸರು ಗಳಿಸಿದ್ದರು. ಮೈಸೂರು ರಾಜ್ಯದ ಪ್ರಥಮ ರಾಷ್ಟ್ರಕೂಟದ ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾಗಿದ್ದರು. 1938ರ ಎಪ್ರಿಲ್ 11 ರಂದು ಮಂಡ್ಯದ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಧ್ವಜಾರೋಹಣವನ್ನು ಮಾಡಲು ಟಿ. ಸಿದ್ದಲಿಂಗಯ್ಯ ಸಿದ್ಧತೆ ನಡೆಸಿದ್ದರು. ಆದರೆ ಧ್ವಜಾರೋಹಣ ಮಾಡದಂತೆ ನಿಷೇಧಾಜ್ಞೆಯನ್ನು ಮೈಸೂರು ಸರ್ಕಾರ ಜಾರಿ ಮಾಡಿತ್ತು. 600ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. ಇದ್ಯಾವುದಕ್ಕೂ ಹೆದರದ ಟಿ.ಸಿದ್ದಲಿಂಗಯ್ಯ ಧ್ವಜಾರೋಹಣ ಮಾಡಿಯೇ ಬಿಟ್ಟರು.
ವಿದುರಾಶ್ವತ್ಥ ದುರಂತವನ್ನು ಬೆಳಕಿಗೆ ತಂದವರು ರುಮಾಲೆ ಚನ್ನಬಸಯ್ಯ:
ಶಿವಪುರ ಸತ್ಯಾಗ್ರಹದಿಂದ ಉತ್ಸುಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರು 1938ರ ಎಪ್ರಿಲ್ 25 ರಂದು ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ಧ್ವಜಾರೋಹಣ ಮಾಡಲು ಸಿದ್ಧತೆ ನಡೆಸಿದ್ದರು. ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ರಾಮಚಾರ್ ನೇತೃತ್ವದಲ್ಲಿ ಸತ್ಯಾಗ್ರಹಿಗಳ ತಂಡ ಧ್ವಜಾರೋಹಣ ಮಾಡಿತು. ಸತ್ಯಾಗ್ರಹಿಗಳು ಮತ್ತು ಪೊಲೀಸರು ನಡುವೆ ಚಕಮಕಿಯಾದಾಗ ಜನರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದರು. ಪೊಲೀಸರು ಒಟ್ಟು 96 ಸುತ್ತು ಗುಂಡು ಹಾರಿಸಿದರಿಂದ 32 ಜನರು ಪ್ರಾಣ ಕಳೆದುಕೊಂಡಿದ್ದರು. ವಿದುರಾಶ್ವತ್ಥ ದುರಂತವನ್ನ ಪ್ರತ್ಯಕ್ಷ ಕಂಡು ವರದಿ ಮಾಡಿದ ಗುಂಡಿಬಂಡೆ ರಾಮರಾಯರಿಂದ ಮಾಹಿತಿ ಪಡೆದ ರುಮಾಲೆ ಚನ್ನಬಸಯ್ಯರವರು ಈ ಸುದ್ದಿಯನ್ನ ಬೆಂಗಳೂರಿನ ಪತ್ರಿಕೆಗಳಿಗೆ ತಲುಪಿಸುತ್ತಾರೆ. ಈ ಸುದ್ದಿ ಬಿ.ಬಿ.ಸಿ ಯಲ್ಲಿ ಪ್ರಸಾರವಾಗಿದ್ದರಿಂದ ವಿದುರಾಶ್ವತ್ಥ ದುರಂತ ಜಗತ್ತಿಗೆ ತಿಳಿಯಿತು. ಇದರಿಂದ ಸರ್ಕಾರ ತಲ್ಲಣಗೊಂಡಿತ್ತು.
1934ರ ಜನವರಿ 4 ರಂದು ದೊಡ್ಡಬಳ್ಳಾಪುರಕ್ಕೆ ಮಹಾತ್ಮಾ ಗಾಂಧೀಜಿ ಭೇಟಿ:
ಹಿಂದೂಪುರ-ಗೌರಿಬಿದನೂರು ಮಾರ್ಗವಾಗಿ ಮೋಟಾರ್ ಕಾರಿನಲ್ಲಿ ಬರುವಾಗ 1943 ರ ಜನವರಿ 4 ರಂದು ದೊಡ್ಡಬಳ್ಳಾಪುರಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ಮುಗುವಾಳಪ್ಪ, ರುಮಾಲೆ ಭದ್ರಣ್ಣ, ನಾ.ನಂಜುಂಡಯ್ಯ ಮಹಾತ್ಮ ಗಾಂಧೀಜಿಗೆ ಹೂಹಾರ ಹಾಕಿ ಸ್ವಾಗತಿಸಿದರು. ದೊಡ್ಡಬಳ್ಳಾಪುರ ಜನರು ಹರಿಜನ ನಿಧಿಗಾಗಿ 500 ರೂಪಾಯಿ ದೇಣಿಗೆ ನೀಡಿದ್ದರು. ಅಂದು ನೇಲದಾಂಜನೇಯ ಅವರಣದಲ್ಲಿ ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಭಾಷಣವನ್ನು ಗಾಂಧೀಜಿ ಮಾಡಿದರು. ಗಾಂಧೀಜಿಯವರ ಸ್ಮರಣಾರ್ಥ ಅವರು ಭಾಷಣ ಮಾಡಿದ ಸ್ಥಳಕ್ಕೆ ಗಾಂಧಿನಗರವೆಂದು ನಾಮಕರಣ ಮಾಡಲಾಯಿತು.
ಇದನ್ನೂ ಓದಿ:ಸ್ವಾತಂತ್ರ್ಯ ಚಳವಳಿ: ಮಹಾತ್ಮ ಗಾಂಧೀಜಿ ಹಾಗೂ ಬೆಂಗಳೂರಿನ ಕುರುಹುಗಳು..