ಕರ್ನಾಟಕ

karnataka

ಮುಂದುವರಿದ ಮೇಕೆದಾಟು ಪಾದಯಾತ್ರೆ.. ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ವಾಗ್ದಾಳಿ

By

Published : Mar 2, 2022, 10:14 AM IST

ಸರ್ಕಾರದಿಂದ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಕಿರಿಕಿರಿಗಳು ಹೆಚ್ಚಾಗಿವೆ ಎಂದು ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

congress leaders outrage on bjp state government
ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ವಾಗ್ದಾಳಿ

ಬೆಂಗಳೂರು: ಮಹಾನಗರ ಪ್ರವೇಶಿಸಿದ ನಂತರ ಸರ್ಕಾರದಿಂದ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಕಿರಿಕಿರಿಗಳು ಹೆಚ್ಚಾಗಿವೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮೇಕೆದಾಟು ಪಾದಯಾತ್ರೆ ನಡೆಯುತ್ತಿದ್ದು ಮಂಗಳವಾರದಂದು ಈಟಿವಿ ಭಾರತ ಜೊತೆ ಮಾತನಾಡಿದ ಹರಿಪ್ರಸಾದ್, ಮೇಕೆದಾಟು ನಮ್ಮ ನೀರು ನಮ್ಮ ಹಕ್ಕು ಎಂಬುದು ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಮಹತ್ವದ ಪಾದಯಾತ್ರೆಯಾಗಿದೆ. ಈಗಾಗಲೇ ಎರಡನೇ ಹಂತದ ಪಾದಯಾತ್ರೆ ಆರಂಭವಾಗಿ ನಾಲ್ಕನೇ ದಿನ ತಲುಪಿದ್ದು, ಬೆಂಗಳೂರು ನಗರವನ್ನು ಪ್ರವೇಶಿಸಿದ್ದೇವೆ. ಬೆಂಗಳೂರು ಪ್ರವೇಶ ಮಾಡಿದ ಸಂದರ್ಭದಿಂದಲೂ ಸಾಕಷ್ಟು ಕಿರಿಕಿರಿ ಸರ್ಕಾರದಿಂದ ಎದುರಾಗುತ್ತಿದೆ ಎಂದರು.

ಭಯಪಡುವ ಜನ ನಾವಲ್ಲ:ನಮ್ಮವರು ಅಳವಡಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್​ಗಳನ್ನು ಕಿತ್ತು ಹಾಕುವ ಹಾಗೂ ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಇತರ ಬಿಜೆಪಿ ನಾಯಕರ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿಲ್ಲ. ಅವರಿಗೊಂದು ಕಾನೂನು, ನಮಗೊಂದು ಕಾನೂನು ಮಾಡುವುದು ಸರಿಯಲ್ಲ. ಸರ್ಕಾರ ನಮ್ಮನ್ನು ಎಷ್ಟೇ ಭಯ ಬೀಳಿಸಲು ಪ್ರಯತ್ನಿಸಿದರೂ ಭಯಪಡುವ ಜನ ನಾವಲ್ಲ ಎಂದರು.

ಪಿಎಂ ವಿರುದ್ಧ ಕಿಡಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಬಿ.ಕೆ ಹರಿಪ್ರಸಾದ್, ಜನರ ನೀರಿಗಾಗಿ ಹೋರಾಟ ಮಾಡುತ್ತಿರುವವರು ನಾವು. ಈಗಾಗಲೇ ಇದಕ್ಕೆ ಜನರ ಬೆಂಬಲವೂ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಬೇರೆಡೆ ಭಯ ಬೀಳಿಸಿದಂತೆ ನಮ್ಮನ್ನು ಭಯ ಬೀಳಿಸಲು ಸಾಧ್ಯವಿಲ್ಲ. ಜನರ ಬೆಂಬಲ ಗಮನಿಸಿದಾಗ ನಾವು ಸಾಕಷ್ಟು ದೊಡ್ಡ ಯಶಸ್ಸನ್ನು ಪಾದಯಾತ್ರೆಯಲ್ಲಿ ಸಾಧಿಸಿದ್ದೇವೆ ಎನಿಸುತ್ತಿದೆ. ಮುಂದೆಯೂ ಸಹ ಇದೇ ರೀತಿ ಯಶಸ್ವಿಯಾಗಿ ಸಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಇತ್ತೀಚೆಗೆ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರೊಂದಿಗೆ ಪ್ರಾಥಮಿಕ ಹಂತದ ಸಭೆ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ರೀತಿ ಸಕ್ರಿಯವಾಗಬೇಕು ಎಂಬ ಕುರಿತು ಚರ್ಚೆ ನಡೆದಿದೆ. ಸೂಕ್ತ ನಿರ್ದೇಶನವನ್ನು ಸಹ ರಾಹುಲ್ ಗಾಂಧಿ ಅವರು ನೀಡಿದ್ದಾರೆ ಎಂದರು.

ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ವಾಗ್ದಾಳಿ

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೆವು. ಅವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಒಪ್ಪಿಗೆ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಸಹ ಸ್ಪಷ್ಟವಾಗಿ ಹೇಳಿದೆ. ಕೆಲವು ಮುಳುಗಡೆ ಪ್ರದೇಶಗಳು, ಅರಣ್ಯ ಪ್ರದೇಶಗಳು ಮುಳುಗಡೆಯಾಗುವ ಹಿನ್ನೆಲೆ ಪರಿಸರ ಸಚಿವಾಲಯ ಇದನ್ನು ತಡೆ ಹಿಡಿದಿದೆ.

ಈ ಯೋಜನೆಗೆ ಕೇಂದ್ರ, ತಮಿಳುನಾಡು ಬಿಜೆಪಿಯಿಂದಲೇ ವಿರೋಧ: ನಮ್ಮ ಸರ್ಕಾರ ಈಗಾಗಲೇ ಈ ಬಗ್ಗೆ ಭರವಸೆ ನೀಡಿದ್ದು, 4.5 ಸಾವಿರ ಹೆಕ್ಟೇರ್ ಪ್ರದೇಶ ಮುಳುಗಡೆ ಆಗಲಿದೆ. ಅದರ ಬದಲಿಗೆ 10 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀಡುವುದಾಗಿ ಸ್ಥಳವನ್ನು ಸಹ ತೋರಿಸಿದ್ದೇವೆ. ಇದರಿಂದ ಅರಣ್ಯ ಪ್ರದೇಶಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ತಮಿಳುನಾಡಿನಲ್ಲಿರುವ ಬಿಜೆಪಿ ನಾಯಕರು ಇದಕ್ಕೆ ವಿರೋಧಿಸುತ್ತಿದ್ದಾರೆ. ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ಕಾರ್ಯಕ್ರಮ ಇದ್ದೇ ಇರುತ್ತದೆ. ಮುಂಬರುವ ವಿಧಾನಸಭೆ ಚುನಾವಣೆ ಪ್ರಣಾಳಿಕೆ ರಚಿಸುವ ಸಂದರ್ಭದಲ್ಲಿ ಇದರ ಅಳವಡಿಕೆ ಆಗಲಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೇವೆ. ಅವರು ಏನು ಮಾಡುತ್ತಾರೆ ನೋಡೋಣ. ಜನಪರ ಕಾಳಜಿ ಸರ್ಕಾರಕ್ಕೆ ಇದ್ದರೆ ಬಜೆಟ್​​ನಲ್ಲಿ ಒಂದಿಷ್ಟು ನೆರವನ್ನು ಮಂಜೂರು ಮಾಡಬೇಕಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಮಹಾದಾಯಿ ವಿಚಾರದಲ್ಲಿ ಸಹ ಇದೇ ಮಾದರಿಯ ಹೋರಾಟವನ್ನು ನಾವು ಕೈಗೊಳ್ಳುತ್ತೇವೆ. ಎತ್ತಿನಹೊಳೆ ಯೋಜನೆಯ ಹೋರಾಟ ಸಹ ನಡೆಯುತ್ತಿದೆ, ಅದು ಸಹ ಮುಂದುವರಿಯಲಿದೆ. ಪ್ರಮುಖವಾಗಿ ಮುಂದಿನ ದಿನಗಳಲ್ಲಿ ಮಹಾದಾಯಿ ಯೋಜನೆ ಸಂಬಂಧ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್ ಆಂಜನೇಯ ಏನಂದ್ರು?ಹಬ್ಬದ ಸಂದರ್ಭ ಜನರು ಶಿವರಾತ್ರಿಯನ್ನು ಕಾಂಗ್ರೆಸ್ ಪಾದಯಾತ್ರೆ ಮೂಲಕ ಆಚರಿಸುತ್ತಿರುವುದನ್ನು ಗಮನಿಸಿದರೆ ಅವರಿಗೆ ಶಿವನ ಮೇಲೆ ಎಷ್ಟು ಭಕ್ತಿ ಇದೆಯೋ ಕಾಂಗ್ರೆಸ್ ಮೇಲೆ ಅಷ್ಟೇ ಶ್ರದ್ಧೆ ಇದೆ ಎನ್ನುವುದನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.

ಮೇಕೆದಾಟು ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಇದು ಜಾರಿಗೆ ಬರುವುದರಿಂದ ಬೆಂಗಳೂರು ಮಹಾನಗರದ ನಾಗರಿಕರಿಗೆ ಕುಡಿಯುವ ನೀರು ದೊರೆಯುತ್ತದೆ. ಸಾವಿರಾರು ಎಕರೆ ಭೂಮಿಗೆ ನೀರು ಒದಗಿಸಬಹುದು. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಇಂತಹ ಒಂದು ಮಹತ್ವದ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತೇವೆ ಎಂಬ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.

ಈ ಸರ್ಕಾರಕ್ಕೆ ಜನಪರ ಕೆಲಸವನ್ನು ಮಾಡುವ ಇಚ್ಛೆ ಇಲ್ಲ. ಮೇಕೆದಾಟು ಯೋಜನೆ ಮಾಡುವುದರಿಂದ ಅವರಿಗೆ ಯಾವುದೇ ಲಾಭ ಇಲ್ಲ ಅನಿಸುತ್ತದೆ. ಪ್ರತಿಪಕ್ಷಗಳ ಮೇಲೆ ಗೌರವ ಇದ್ದಿದ್ದರೆ ಹಾಗೂ ಇಂತಹ ಯೋಜನೆಗಳ ಮೇಲೆ ಕಾಳಜಿ ಇದ್ದಿದ್ದರೆ, ಕೂಡಲೇ ನಮ್ಮನ್ನು ಕರೆದು ಮಾತನಾಡಿಸಿ, ಇಂತಹ ಯೋಜನೆಗೆ ಚಳವಳಿಯ ಅಗತ್ಯವಿಲ್ಲ ನಿಲ್ಲಿಸಿ ಅನ್ನಬೇಕಿತ್ತು. ಇದು ರಾಜ್ಯಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಯೋಜನೆ. ನಾವು ನೀವೆಲ್ಲ ಸೇರಿ ಇದನ್ನು ಜಾರಿಗೆ ತರೋಣ ಎಂದು ಹೇಳಬೇಕಿತ್ತು. ಆದರೆ, ಅದನ್ನು ಮಾಡದೇ ನಮ್ಮ ಪಾದಯಾತ್ರೆಯನ್ನು ಅನಾವಶ್ಯಕವಾಗಿ ಟೀಕಿಸುವ ಕಾರ್ಯವನ್ನು ಹಾಗೂ ಪ್ರಕರಣಗಳನ್ನು ದಾಖಲಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ರಮಾನಾಥ್ ರೈ ಹೇಳಿದ್ದೇನು:ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಡಬಲ್​​ ಇಂಜಿನ್ ಸರ್ಕಾರ ಇದ್ದು, ಮನಸ್ಸು ಮಾಡಿದರೆ ಮೇಕೆದಾಟು ಯೋಜನೆ ಜಾರಿಗೆ ತರುವುದು ಕಷ್ಟವೇನಲ್ಲ ಎಂದು ಮಾಜಿ ಸಚಿವ ರಮಾನಾಥ್ ರೈ ಅಭಿಪ್ರಾಯ ಪಟ್ಟಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಜಾರಿ ಮಾಡಲಿ ಎಂಬುದು ನಮ್ಮ ಆಶಯ. ಇದಕ್ಕೆ ಒತ್ತಡ ಹೇರಲು ಪಾದಯಾತ್ರೆ ಮಾಡುತ್ತಿದ್ದೇವೆ. ರಾಜಧಾನಿ ಸೇರಿದಂತೆ ರಾಜ್ಯದ ಎಲ್ಲೆಡೆ ನೀರಿನ ಬಗ್ಗೆ ಚರ್ಚೆ ನಡೆಯುವುದನ್ನು ಕಾಣುತ್ತಿದ್ದೇವೆ. ಮೇಕೆದಾಟು ಯೋಜನೆ ಅನುಷ್ಠಾನವಾದರೆ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.

ಎತ್ತಿನಹೊಳೆ ಯೋಜನೆ ಜಾರಿ ಸಂಬಂಧ ಮಾತನಾಡಿ, ಎತ್ತಿನಹೊಳೆ ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ನಮ್ಮ ಜಿಲ್ಲೆಯವರು ತಡೆಯುತ್ತಾರೆ ಎನ್ನುವ ಗುಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಮಸ್ಯೆ ಆಗದಿರಲಿ ಎಂದು ಪಶ್ಚಿಮವಾಹಿನಿ ಯೋಜನೆ ಕೂಡ ಜಾರಿ ಮಾಡಿದ್ದರು. ಆದರೆ, ಈಗ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ಇದು ಕೇವಲ ಎತ್ತಿನಹೊಳೆ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಬಹಳಷ್ಟು ಯೋಜನೆಗೆ ಹಣದ ಕೊರತೆ ಇದೆ. ಗುತ್ತಿಗೆದಾರರ ಸಂಘ 40 ಪರ್ಸೆಂಟೇಜ್​ ಕಮಿಷನ್​​ ವಿಚಾರ ಪ್ರಸ್ತಾಪ ಮಾಡಿದ್ದನ್ನು ಗಮನಿಸಬಹುದು. ಇನ್ನೊಂದೆಡೆ ಬಿಲ್ ಆಗದೇ ಗುತ್ತಿಗೆದಾರರು ಕಷ್ಟಪಡುವುದನ್ನು ನೋಡುತ್ತಿದ್ದೇವೆ. ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗದೇ ಹಣದ ಕೊರತೆಯಿಂದ ಎತ್ತಿನಹೊಳೆ ಯೋಜನೆ ಸಹ ನಿಧಾನವಾಗುತ್ತಿದೆ ಎಂದು ಹೇಳಬಹುದು ಎಂದರು.

ಇದನ್ನೂ ಓದಿ:ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಲಿದೆ: ಶಾಸಕ ಹರೀಶ್ ಪೂಂಜ


ABOUT THE AUTHOR

...view details