ಕರ್ನಾಟಕ

karnataka

ವಿಜಯೇಂದ್ರಗೆ ಕೈತಪ್ಪಿದ ಎಂಎಲ್​​ಸಿ ಟಿಕೆಟ್; ಈಡೇರದ ಸಚಿವ ಸ್ಥಾನದ ಕನಸು

By

Published : May 27, 2022, 8:48 AM IST

ಇಂದಲ್ಲ, ನಾಳೆ ಮಂತ್ರಿಯಾಗುವ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ದೃಢ ನಂಬಿಕೆಯಿಂದ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ತಾಳ್ಮೆಯಿಂದ ಕಾಲವನ್ನು ಎದುರು ನೋಡುತ್ತಿದ್ದರು. ಈ ನಡುವೆ ಹೈಕಮಾಂಡ್ ವಿಧಾನ ಪರಿಷತ್​​ಗೆ ಟಿಕೆಟ್ ನೀಡಲು ನಿರಾಕರಿಸಿರುವ ವಿದ್ಯಮಾನ ಯಡಿಯೂರಪ್ಪ ಕುಟುಂಬವನ್ನು ಭ್ರಮನಿರಸನಗೊಳಿಸಿದೆ.

B.Y Vijayendra
ಬಿ.ವೈ ವಿಜಯೇಂದ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಟಿಕೆಟ್ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವ ಕನಸನ್ನು ಬಿಜೆಪಿ ಹೈಕಮಾಂಡ್ ಭಗ್ನಗೊಳಿಸಿದೆ.

ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸಿಎಂ ಪದವಿ ಬಿಟ್ಟುಕೊಡುವಾಗ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಅಥವಾ ಸಚಿವ ಸ್ಥಾನ ನೀಡಬೇಕೆನ್ನುವ ಅಲಿಖಿತ ಷರತ್ತು ವಿಧಿಸಿದ್ದರು. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಷರತ್ತು ಈಡೇರಿಸುವ ಭರವಸೆ ಸಹ ನೀಡಿತ್ತು ಎನ್ನಲಾಗಿದೆ.

ಈ ಕಾರಣದಿಂದಲೇ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುವಾಗಲೆಲ್ಲ ವಿಜಯೇಂದ್ರ ಸಚಿವರಾಗಿ ನೇಮಕಗೊಳ್ಳುತ್ತಾರೆ ಎನ್ನುವ ಸುದ್ದಿ ಪ್ರಮುಖವಾಗಿ ಹರಿದಾಡುತ್ತಿತ್ತು. ಆದರೆ, ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಇರಲಿ, ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲೂ ಸಹ ಹೈಕಮಾಂಡ್ ಸಿದ್ಧವಿಲ್ಲ ಎನ್ನುವುದು ಇತ್ತೀಚಿನ ಎಂಎಲ್​​ಸಿ ಟಿಕೆಟ್ ಹಂಚಿಕೆ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್​​ನ ಟಿಕೆಟ್ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೂ ಹೈಕಮಾಂಡ್ ಅದನ್ನು ಪರಿಗಣಿಸದೆ ಟಿಕೆಟ್ ನೀಡದಿರುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಪದತ್ಯಾಗ ಮಾಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ಪುತ್ರನನ್ನು ಉಪ ಮುಖ್ಯಮಂತ್ರಿ ಇರಲಿ ಸಚಿವರನ್ನಾಗಿಯೂ ನೇಮಕ ಮಾಡದಿರುವ ಬಗ್ಗೆ ಬೇಸರಗೊಂಡಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಇಂದಲ್ಲ ನಾಳೆ ಮಂತ್ರಿಯಾಗುವ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ದೃಢ ನಂಬಿಕೆಯಿಂದ ತಾಳ್ಮೆಯಿಂದ ಕಾಲವನ್ನು ಎದುರು ನೋಡುತ್ತಿದ್ದರು. ಈ ನಡುವೆ ಹೈಕಮಾಂಡ್ ವಿಧಾನ ಪರಿಷತ್​​ಗೆ ಟಿಕೆಟ್ ನೀಡಲು ನಿರಾಕರಿಸಿರುವ ವಿದ್ಯಮಾನ ಯಡಿಯೂರಪ್ಪ ಕುಟುಂಬವನ್ನು ಭ್ರಮನಿರಸನಗೊಳಿಸಿದೆ.

ತಲೆಕೆಳಗಾದ ಬಿಎಸ್​​ವೈ ಲೆಕ್ಕಾಚಾರ:ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರಿಂದ ಬಿಜೆಪಿ ಹೈಕಮಾಂಡ್ ತಮ್ಮ ಮಗ ವಿಜಯೇಂದ್ರಗೆ ಡಿಸಿಎಂ ಅಥವಾ ಸಚಿವ ಸ್ಥಾನವನ್ನು ಖಂಡಿತವಾಗಿ ನೀಡುತ್ತದೆ. ಇದರಿಂದ ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಯಡಿಯೂರಪ್ಪನವರು ಹೊಂದಿದ್ದರು. ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಇನ್ನೊಬ್ಬ ಪುತ್ರ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಚಿವರಾಗುವ ಅವಕಾಶ ಬಂದಾಗಲು ಅದನ್ನ ನಿರಾಕರಿಸಿದ್ದರು ಎನ್ನಲಾಗಿದೆ.

ಸಂಸದ ರಾಘವೇಂದ್ರ ಕೇಂದ್ರ ಸಚಿವರಾದರೆ, ರಾಜ್ಯದ ಬಿಜೆಪಿ ಸರ್ಕಾರದಲ್ಲಿ ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಪಡೆಯಲು ಅಡ್ಡಿಯಾಗುತ್ತದೆ ಎನ್ನುವ ಉದ್ದೇಶದಿಂದ ಕೇಂದ್ರ ಸಚಿವ ಸ್ಥಾನದ ಆಫರ್​​ನ್ನು ತಿರಸ್ಕಾರ ಮಾಡಿದ್ದರು ಎನ್ನಲಾಗಿದೆ. ಈಗ ಇಬ್ಬರೂ ಮಕ್ಕಳಿಗೆ ಸಚಿವ ಸ್ಥಾನ ಸಿಗದಿರುವ ಬೆಳವಣಿಗೆಯಿಂದ ಯಡಿಯೂರಪ್ಪ ಹೈಕಮಾಂಡ್ ನಡೆಯಿಂದ ತಮ್ಮ ರಾಜಕೀಯ ಲೆಕ್ಕಾಚಾರ ತಲೆಕೆಳಗಾದ ಕುರಿತು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಬಿಎಸ್​ವೈ ಪುತ್ರ ವಿಜಯೇಂದ್ರ ಮೇಲ್ಮನೆ ಪ್ರವೇಶಕ್ಕೆ ಬಿಜೆಪಿ ಹೈಕಮಾಂಡ್​​ನಿಂದ ಅಡ್ಡಿ?

ABOUT THE AUTHOR

...view details