ಕರ್ನಾಟಕ

karnataka

ಕಡಲೇಕಾಯಿ ಪರಿಷೆ ಭದ್ರತೆಗೆ 700 ಸಿಬ್ಬಂದಿ ನೇಮಕ.. ಮೂಲಸೌಕರ್ಯಕ್ಕೂ BBMP ಹೆಚ್ಚಿನ ಒತ್ತು..

By

Published : Nov 12, 2021, 5:33 PM IST

ನವೆಂಬರ್ 29ರಂದು ಪಾರಂಪರಿಕ ಕಡಲೇಕಾಯಿ ಪರಿಷೆ(Kadalekai parishe)ಜಾತ್ರೆಗೆ ನಡೆಯಲಿದೆ. ಭದ್ರತೆಗಾಗಿ 700 ಪೊಲೀಸ್​ ಮತ್ತು ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ(BBMP Commissioner gourav gupta) ತಿಳಿಸಿದರು..

kadalekai parishe in bagaluru
ಕಡಲೇಕಾಯಿ ಪರಿಷೆ ಜಾತ್ರೆ

ಬೆಂಗಳೂರು :ಕಾರ್ತಿಕ ಮಾಸದ ಕಡೆಯ ಸೋಮವಾರ(ನವೆಂಬರ್ 29ರಂದು) ನಡೆಯುವ ಪಾರಂಪರಿಕ ಕಡಲೇಕಾಯಿ ಪರಿಷೆ ಜಾತ್ರೆಗೆ (Kadalekai parishe fest) ಈಗಾಗಲೇ ಅನುಮತಿ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 700 ಪೊಲೀಸ್​ ಮತ್ತು ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ(BBMP Commissioner gourav gupta) ತಿಳಿಸಿದರು.

ನಗರದ ಬಿಬಿಎಂಪಿ ಕಚೇರಿಯಲ್ಲಿ ಕಡಲೆಕಾಯಿ ಪರಿಷೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ಸಂಸ್ಕೃತಿ ಬಿಂಬಿಸುವ ಕಡಲೇಕಾಯಿ ಪರಿಷೆಯನ್ನು ಸಂಪ್ರದಾಯ, ಸಂಸ್ಕ್ರತಿ ಮತ್ತು ಜಾನಪದ ವೈಭವದಿಂದ ಆಚರಿಸಲಾಗುವುದು. ಅಧಿಕ ಜನರು ಭೇಟಿ ನೀಡುವುದರಿಂದ ಮೂಲಸೌಕರ್ಯ, ಭದ್ರತೆಗೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

2ನೇ ಡೋಸ್​ ಕೊರೋನಾ ಲಸಿಕೆಗೆ ಸೂಚನೆ

ಬೆಂಗಳೂರಿನಲ್ಲಿ ಸದ್ಯಕ್ಕೆ ಕೋವಿಡ್ ಹತೋಟಿಯಲ್ಲಿದೆ. ಜ್ವರ, ನೆಗಡಿಯಂತಹ ಲಕ್ಷಣಗಳು ಇದ್ರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಶೇ.57ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನು, ಕೆಲವರು 12 ವಾರಗಳಾದರೂ 2ನೇ ಡೋಸ್ ಪಡೆದಿಲ್ಲ. ಅಂತಹವರಿಗೆ ಕರೆ ಮಾಡಿ ಜಾಗೃತಿಗೊಳಿಸುತ್ತಿದ್ದೇವೆ. ಜೊತೆಗೆ ಹತ್ತಿರದ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವಂತೆ ಸೂಚಿಸಿದ್ದೇವೆ ಎಂದು ಗೌರವ್​ ಗುಪ್ತಾ ತಿಳಿಸಿದರು.

ಸಿಂಗಾಪುರ ಮಾದರಿ ಚರ್ಚಿಸಿಲ್ಲ

ಸಿಂಗಾಪುರದಲ್ಲಿ ಲಸಿಕೆ ಪಡೆದವರು ಮಾತ್ರ ಸಾರ್ವಜನಿಕವಾಗಿ ಓಡಾಡಲು ಅವಕಾಶದ ಕುರಿತು ಪ್ರತಿಕ್ರಿಯಿಸಿದ ಗುಪ್ತಾ, ಆ ರೀತಿಯ ನಿಯಮಗಳನ್ನು ನಗರದಲ್ಲಿ ಜಾರಿ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ. ಸ್ವಯಂ ರಕ್ಷಣೆಗಾಗಿ ಲಸಿಕೆ ಪಡೆಯಿರಿ. ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಂತರ ಅಕ್ರಮ ಕಟ್ಟಡಗಳ ತೆರವು ವಿಚಾರ ಕುರಿತು ಮಾತನಾಡಿ, ಹೈಕೋರ್ಟ್ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಯೋಜನೆ ಇಲ್ಲದೇ ಕಟ್ಟಡ ನಿರ್ಮಾಣ ಮತ್ತು ಅನುಮತಿಗಿಂತ ಹೆಚ್ಚಿನ ಅಂತಸ್ತಿನ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳು ಆಯಾ ವಲಯಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಕೆಲವು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details