ಕರ್ನಾಟಕ

karnataka

ಕನ್ನಡ ಸಾಹಿತ್ಯ ಸಮ್ಮೇಳನ - ಪ್ರಧಾನ ವೇದಿಕೆಯಲ್ಲಿ ಮಾತ್ರ ಕಾರ್ಯಕ್ರಮಗಳ ಆಯೋಜನೆ: ಮಹೇಶ್ ಜೋಶಿ

By

Published : Apr 26, 2022, 8:14 AM IST

ಸೆಪ್ಟೆಂಬರ್ 23, 24 ಹಾಗೂ 25ರಂದು ಹಾವೇರಿಯ ಜಿ.ಎಚ್. ಕಾಲೇಜು ಸಮೀಪ ಇರುವ ಸುವರ್ಣ ಪತ್ತಿನ ಸಹಕಾರಿ ಸಂಘದ ನಿವೇಶನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.

86th-kannada-sahitya-sammelana
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ವೇದಿಕೆಯಲ್ಲಿ ಮಾತ್ರ ಕಾರ್ಯಕ್ರಮಗಳ ಆಯೋಜನೆ: ಮಹೇಶ್ ಜೋಶಿ

ಬೆಂಗಳೂರು: ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಗಳನ್ನು ತೆಗೆದು ಕೇವಲ ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ 23, 24 ಹಾಗೂ 25ರಂದು ಹಾವೇರಿಯ ಜಿ.ಎಚ್. ಕಾಲೇಜು ಸಮೀಪ ಇರುವ ಸುವರ್ಣ ಪತ್ತಿನ ಸಹಕಾರಿ ಸಂಘದ ನಿವೇಶನದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ ಒಂದೇ ವೇದಿಕೆಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಈ ಹಿಂದೆ ಪ್ರಧಾನ ವೇದಿಕೆಯ ಜೊತೆಗೆ 2 ಸಮಾನಾಂತರ ವೇದಿಕೆಗಳನ್ನು ನಿರ್ಮಿಸಿ ಅಲ್ಲಿ ವಿಚಾರ ಗೋಷ್ಠಿಗಳನ್ನು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದೇ ವೇದಿಕೆಯಲ್ಲಿ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜೋಶಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.

ಸಾರ್ವಜನಿಕರ ಗೋಷ್ಠಿಯಲ್ಲಿ ಸಿಎಂ: ಸೆ. 24ರಂದು ನಡೆಯಲಿರುವ ಕನ್ನಡ, ಕನ್ನಡಿಗ, ಕರ್ನಾಟಕ ಎನ್ನುವ ವಿಚಾರ ಗೋಷ್ಠಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಈ ಗೋಷ್ಠಿಗೆ ಸಾರ್ವಜನಿಕರಿಗೂ ಅವಕಾಶವಿದ್ದು, ಜನರು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಬಹುದು. ಈ ಬಾರಿಯ ಸಮ್ಮೇಳನದಲ್ಲಿ ಮಹತ್ವದ ವಿಷಯವಸ್ತುಗಳನ್ನು ಮಾತ್ರ ಗೋಷ್ಠಿಯಲ್ಲಿ ಚರ್ಚಿಸಲಾಗಿದ್ದು, ಹೊಸದಾಗಿ ಯಕ್ಷಗಾನ, ವೈದ್ಯಕೀಯ, ಚಲನಚಿತ್ರ, ಸಾಹಿತ್ಯಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಪರಿಷತ್ ನಿರ್ಣಯ ಅನುಷ್ಠಾನಕ್ಕಾಗಿ ಸಮಿತಿ: ಸಾಹಿತ್ಯ ಸಮ್ಮೇಳನದ ಅಂತ್ಯದಲ್ಲಿ ಬರುವ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಅದನ್ನು ಅನುಷ್ಠಾನಕ್ಕೆ ತರುವವರೆಗೂ ಈ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಮಿತಿ ರಚಿಸಲಾಗುವುದು. ಇನ್ನು ಸಂಪೂರ್ಣ ಸಮ್ಮೇಳನವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಒಟ್ಟು 19 ಸಮಿತಿಗಳನ್ನು ರಚಿಸಲಾಗುವುದು. ಈ ಬಾರಿ 3 ರಿಂದ 5 ಲಕ್ಷ ಜನರನ್ನು ಸಮ್ಮೇಳನಕ್ಕೆ ಅಪೇಕ್ಷಿಸಲಾಗಿದೆ. ಇನ್ನು ಸಮ್ಮೇಳನಕ್ಕಾಗಿ 20 ಕೋಟಿ ರೂ ಅನುದಾನ ಸರ್ಕಾರದಿಂದ ಸಿಗುತ್ತಿದ್ದು, ಜೊತೆಗೆ ರಾಜ್ಯದ ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಪ್ರತೀ ಬಾರಿಯಂತೆ ಸಮ್ಮೇಳನಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.

86 ಕೃತಿ ಲೋಕಾರ್ಪಣೆ: 86ನೇ ಸಾಹಿತ್ಯ ಸಮ್ಮೇಳನದ ನಿಮಿತ್ತ 86 ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅದರಲ್ಲಿ ತಾಲೂಕು ದರ್ಶನಗಳ ಕುರಿತು 9 ಪುಸ್ತಕ, ಮರೆಯಲಾಗದವರು ಮಾಲಿಕೆಯಡಿ - 9 ಪುಸ್ತಕ, ದಾರಿ ತೋರಿದ ದಾರ್ಶನಿಕರು -4 ಪುಸ್ತಕ, ನಾಡು ಕಟ್ಟಿದವರು- 6 ಪುಸ್ತಕ, ಸಾಂದರ್ಭಿಕ ಹೆಚ್ಚುವರಿ ಪುಸ್ತಕ 2, ಇನ್ನು ಉಳಿದಂತೆ ಸ್ಮರಣ ಸಂಚಿಕೆಗೆ ಸಂಬಂಧಿಸಿದ ಆಯ್ದ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೇ 1ರಂದು ಕಾಗಿನೆಲೆಯಲ್ಲಿ ಪರಿಷತ್ ಸಭೆ: ಕನ್ನಡ ಸಾಹಿತ್ಯ ಪರಿಷತ್‌ನ ವಾರ್ಷಿಕ ಮತ್ತು ತಿದ್ದುಪಡಿ ಸಭೆಯನ್ನು ಮೇ 1ರಂದು ಕಾಗಿನೆಲೆಯ ಕನಕ ಕಲಾವನದಲ್ಲಿ ಬೆಳಗ್ಗೆ 11 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಪರಿಷತ್ತಿನ ಸಂಪೂರ್ಣ ವಾರ್ಷಿಕ ವಿವರಗಳನ್ನು ಇಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಓದಿ :ಇಲ್ಲಿನ‌ ಗ್ರಾಮಸ್ಥರಿಗೆ ಬೀರಪ್ಪ- ಈಶ್ವರನೂ ಇವನೇ, ಜಮಾಲ್‌ಷಾ ವಲಿಯೂ ಇವನೇ !

ABOUT THE AUTHOR

...view details