ಕರ್ನಾಟಕ

karnataka

ವಿಜಯನಗರ ಜಿಲ್ಲೆಗೆ ತಕ್ಷಣ ಅಧಿಕಾರಿಗಳನ್ನು ನೇಮಿಸಿ: ಸಿಎಂ ಸೂಚನೆ

By

Published : May 22, 2022, 7:02 AM IST

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೂಡಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿದ್ದು, ಗುರುತಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

CM Bommai Video Conference with Dc and Ministers
ಜಿಲ್ಲಾಧಿಕಾರಿಗಳು ಹಾಗೂ ಸಚಿವರೊಂದಿಗೆ ಸಿಎಂ ಬೊಮ್ಮಾಯಿ ವಿಡಿಯೋ ಸಂವಾದ

ವಿಜಯನಗರ/ಬಳ್ಳಾರಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಾದ ಮಳೆ ಹಾನಿ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ಅಧಿಕಾರಿಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು, ತುರ್ತಾಗಿ ಅಗತ್ಯವಿರುವ ಇಲಾಖೆಗಳಿಗೆ ಅಧಿಕಾರಿಗಳನ್ನು ಒದಗಿಸುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದಾರೆ. ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಶನಿವಾರ ಅವರು ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್ ಮನವಿಗೆ ಸ್ಪಂದಿಸಿದ ಸಿಎಂ, ನೂತನ ಜಿಲ್ಲೆಗೆ ಸಂಬಂಧಿಸಿದ ಕೂಡಲೇ ಎಲ್ಲ ಪೋಸ್ಟಿಂಗ್ ಕ್ಲಿಯರ್ ಮಾಡಿಕೊಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಯಾವುದೇ ರೀತಿಯ ಮಳೆ ಸಮಸ್ಯೆಗಳಿಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರದಲ್ಲಿ ಮಳೆಯಿಂದ ಹೆಚ್ಚಾಗಿ ಹಾನಿಯಾದರೆ ಸಮೀಕ್ಷೆ ನಡೆಸುವಲ್ಲಿ ಹಾಗೂ ಮಾಹಿತಿ ಕಲೆಹಾಕುವಲ್ಲಿ ತೋಟಗಾರಿಕೆ, ಅಗ್ನಿಶಾಮಕದಳ, ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಕೊರತೆ ಇದೆ. ಇದನ್ನು ಕೂಡಲೇ ಒದಗಿಸುವಂತೆ ಆನಂದ್‌ ಸಿಂಗ್‌ ಮನವಿ ಮಾಡಿದರು.

'ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ':ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೂಡಲೇ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಸಮಸ್ಯೆಯಿದ್ದು, ಗುರುತಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ವರ್ಷ ಅತಿವೃಷ್ಟಿ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸಮಸ್ಯೆಗಳಾಗುವುದಕ್ಕಿಂತ ಮುಂಚೆಯೇ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ ಸಿಎಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಫೀಲ್ಡ್​​‍ಗೆ ತೆರಳಿ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಹೇಳಿದರು. ಕೆಳಹಂತದ ಅಧಿಕಾರಿಗಳು ನೀಡಿದ ಮಾಹಿತಿಯನ್ನೇ ವಿಸಿಯಲ್ಲಿ ಓದಿ ಹೇಳಿದರೆ ಮುಗಿಯಿತು. ಇದುವೇ ನಮ್ಮ ಜವಾಬ್ದಾರಿ ಎನ್ನುವ ಮನೋಭಾವದಿಂದ ಹೊರಬನ್ನಿ. ಹಾನಿಗೊಳಗಾದ ಪ್ರದೇಶಗಳಿಗೆ ಅಗತ್ಯ ಇರುವ ಇಲಾಖಾ ಅಧಿಕಾರಿಗಳ ಜೊತೆಗೂಡಿ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದರು.

'ನಿಯಮಾನುಸಾರ ಪರಿಹಾರ':ಹೆಚ್ಚಿನ ಮಳೆಹಾನಿಯಾಗಿರುವ ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ರಜೆ ನೀಡದಂತೆ ಡಿಸಿಗಳಿಗೆ ಸೂಚನೆ ನೀಡಿದ ಸಿಎಂ, ತಾವು ಕೂಡ ರಜೆ ಮಾಡದೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆಯೂ ತಿಳಿಸಿದರು. ನಿಯಮಾನುಸಾರ ಪರಿಹಾರಗಳನ್ನು ಒದಗಿಸುವಂತೆಯೂ ನಿರ್ದೇಶನ ಕೊಟ್ಟರು.

979 ಹೆಕ್ಟೇರ್ ಬೆಳೆ ಹಾನಿ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದು, ಹಲವು ಪ್ರಾಣಿಗಳು ಬಲಿಯಾಗಿವೆ. 503 ಮನೆಗಳು ಹಾಗೂ 1 ಗುಡಿಸಲಿಗೆ ಹಾನಿಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ 979 ಹೆಕ್ಟೇರ್ ಬೆಳೆ ಹಾನಿಯಾಗಿದೆ. 309 ವಿದ್ಯುತ್ ಕಂಬಗಳು, 35 ಟ್ರಾನ್ಸಫಾರ್ಮರ್​​ಗಳು, 277 ಅಂಗನವಾಡಿ ಕೇಂದ್ರಗಳು, 322 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

ಬಳ್ಳಾರಿಯಲ್ಲಿ 2.39 ಕೋಟಿ ರೂ. ಹಾನಿ: ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ 2.39 ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಬೆಳೆಹಾನಿ, ವಸತಿ ಹಾನಿ ಮತ್ತು ಜನ-ಜಾನುವಾರುಗಳ ಹಾನಿಯಾಗಿದ್ದಕ್ಕೆ ಪರಿಹಾರ ವಿತರಿಸಲಾಗಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಯಾದ ಬೆಳೆ, ವಸತಿ ಮತ್ತು ಜಾನುವಾರುಗಳಿಗೆ ನಿಯಮಾನುಸಾರ ಪರಿಹಾರವನ್ನು 3 ದಿನದೊಳಗೆ ವಿತರಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಮುಖ್ಯಮಂತ್ರಿಗಳ ಸಭೆಯ ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಇಬ್ಬರು ಸಾವನ್ನಪ್ಪಿದ್ದು ಅವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. 2 ದೊಡ್ಡ ಮತ್ತು 12 ಸಣ್ಣ ಜಾನುವಾರುಗಳು ಸಾವನ್ನಪ್ಪಿವೆ. 161 ಮನೆಗಳಿಗೆ ಹಾನಿಯಾಗಿದೆ. 244.1 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ. 371 ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಇದರ ಜೊತೆಗೆ 31 ವಿದ್ಯುತ್ ಟ್ರಾನ್ಸ್‍ಫಾರ್ಮರ್​​ಗಳು ಕೆಟ್ಟಿದ್ದು, ಒಟ್ಟು 2.39 ಕೋಟಿ ರೂ.ಗಳ ಹಾನಿ ಜಿಲ್ಲೆಯಲ್ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಸಂಪುಟ ವಿಸ್ತರಣೆ ಸದ್ಯಕ್ಕೆ ಗಗನ ಕುಸುಮ.. ಆ ಬಗ್ಗೆ ಚರ್ಚೆಯೇ ಆಗಿಲ್ಲ : ಸಿಎಂ ಬೊಮ್ಮಾಯಿ..

ABOUT THE AUTHOR

...view details