ಕರ್ನಾಟಕ

karnataka

ಅನೈತಿಕ ಸಂಬಂಧ: ಪ್ರೇಯಸಿ ಪತಿಯ ಕತ್ತು ಹಿಸುಕಿ ಸುಟ್ಟು ಹಾಕಿದ ಆರೋಪಿಯ ಬಂಧನ

By

Published : Mar 6, 2022, 9:48 AM IST

ತನ್ನ ಪ್ರೇಯಸಿಯ ಪತಿಯ ಕತ್ತು ಹಿಸುಕಿ ದಾರುಣವಾಗಿ ಕೊಲೆ ಮಾಡಿ ನಂತರ ಶವವನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

belagavi murder case
ಬೆಳಗಾವಿ ಕೊಲೆ ಪ್ರಕರಣದ ಆರೋಪಿ ಅರೆಸ್ಟ್

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹಿಳೆಯ ಪತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮೃತದೇಹವನ್ನು ಸುಟ್ಟು ಹಾಕಿದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಪರಶುರಾಮ ಕುರುಬರ ಬಂಧಿತ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡದ ಸಂತೋಷನಾರಾಯಣ ಪರೀಟ್ (36) ಕೊಲೆಯಾದ ವ್ಯಕ್ತಿ.

ಆರೋಪಿ ಪರಶುರಾಮನೊಂದಿಗೆ ಕೊಲೆಗೀಡಾದ ಸಂತೋಷನ ಪತ್ನಿ ರೂಪಾ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಲ್ಲದೇ ಪತಿಯನ್ನು ಬಿಟ್ಟು ಪರಶುರಾಮನೊಂದಿಗೆ ಕಣಬರ್ಗಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಸಂತೋಷ ಮಾ.1ರಂದು ಪತ್ನಿ ರೂಪಾಳನ್ನು ಭೇಟಿ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದಾನೆ.

ಸುಟ್ಟು ಕರಕಲಾದ ಸಂತೋಷ ನಾರಾಯಣ ಪರೀಟ್ ಮೃತದೇಹ

ಈ ವೇಳೆ ಆರೋಪಿ ಪರಶುರಾಮ ಕುರುಬರ ಕಣಬರ್ಗಿ ಬಸ್ ತಂಗುದಾಣದಲ್ಲಿ ಸಂತೋಷನನ್ನು ನೋಡಿದ್ದಾನೆ. ತಕ್ಷಣ ಆತನನ್ನು ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಸುರಭಿ ಕ್ರಾಸ್ ಬಳಿ ಇರುವ ನ್ಯೂ ರೇಣುಕಾ ನಗರ ಹತ್ತಿರವಿದ್ದ ವಂಟಮೂರಿ ಕಾಲೋನಿಯ ಯಲ್ಲಪ್ಪ ಬುಡುಗ ಎಂಬುವವರ ಕೃಷಿ ಜಮೀನಿಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದಾನೆ‌. ಇದೇ ಸಂದರ್ಭದಲ್ಲಿ ತನ್ನ ಬಳಿಯಿದ್ದ ಟವೆಲ್‌ನಿಂದ ಸಂತೋಷನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.

ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ಭತ್ತದ ಒಣಹುಲ್ಲಿನ ಬಣವೆಗೆ ಹಾಕಿ ಬೆಂಕಿ ಹಚ್ಚಿ ಪರಾರಿ ಆಗಿದ್ದಾನೆ. ಬಣವೆಯಲ್ಲಿ ಮೃತದೇಹ ಸುಟ್ಟು ಕರಕಲಾಗಿತ್ತು.

ಇದನ್ನೂ ಓದಿ:ವಿಡಿಯೋ ನೋಡಿ: ಕಾರವಾರದಲ್ಲಿ ಮೆಲ್ಲಗೆ ರಸ್ತೆ ದಾಟಿದ ಭಾರಿ ಗಾತ್ರದ ಹೆಬ್ಬಾವು

ಎಂದಿನಂತೆ ತನ್ನ ಜಮೀನಿಗೆ ಮಾ.2ರಂದು ಆಗಮಿಸಿದ್ದ ಜಮೀನಿನ ಮಾಲೀಕ ಯಲ್ಲಪ್ಪ ಸುಟ್ಟ ಬಣವೆ ಮತ್ತು ಸುಟ್ಟು ಕರಕಲಾದ ಮೃತದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ವಿಶೇಷ ಎಂದರೆ, ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಾಳಮಾರುತಿ ಪೊಲೀಸರು ಸಫಲರಾಗಿದ್ದಾರೆ.

ಇನ್ಸ್‌ಪೆಕ್ಟರ್‌ ಸುನೀಲ ಪಾಟೀಲ ನೇತೃತ್ವದಲ್ಲಿ ಪಿಎಸ್ಐ ಹೊನ್ನಪ್ಪ ತಳವಾರ, ಪ್ರೊಬೇಶನರಿ ಪಿಎಸ್‌ಐ ಶ್ರೀಶೈಲ್ ಹುಳಗೇರಿ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ABOUT THE AUTHOR

...view details