ಬೆಳಗಾವಿ : ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಗೆ ಕಾರಣವಾಗಿದ್ದ ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಎರಡೂ ಕುಟುಂಬಗಳು ಅಚ್ಚರಿ ರೀತಿಯಲ್ಲಿ ಗೆದ್ದು ಬೀಗಿವೆ. ಈ ಫಲಿತಾಂಶ ಬೆಳಗಾವಿಯಲ್ಲಿ ಠಿಕಾಣಿ ಹೂಡಿರುವ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ.
ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಇಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರು ಬೆಳಗಾವಿ ಜಿಲ್ಲೆಯವರಿದ್ದಾರೆ. ಇನ್ನು 18 ವಿಧಾನಸಭೆ ಕ್ಷೇತ್ರಗಳ ಪೈಕಿ 13 ಬಿಜೆಪಿ ಶಾಸಕರು, ಇಬ್ಬರು ಬಿಜೆಪಿ ಸಂಸದರು ಹಾಗೂ ಓರ್ವ ರಾಜ್ಯಸಭೆ ಸದಸ್ಯ ಬೆಳಗಾವಿಯವರಿದ್ದಾರೆ. ಬಿಜೆಪಿಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿರುವ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು ಆಡಳಿತರೂಢ ಬಿಜೆಪಿಗೆ ಇರಿಸುಮುರಿಸು ತರಿಸಿದೆ.
ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ 3431 ಮತ ಪಡೆದು ಭರ್ಜರಿ ಗೆಲುವು ದಾಖಲಿಸಿದರೆ, ಎರಡನೇ ಪ್ರಾಶಸ್ತ್ಯ ಮತಗಳ ನೆರವಿನಿಂದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದರು. ಆ ಮೂಲಕ ಜಾರಕಿಹೊಳಿ ಕುಟುಂಬದ ನಾಲ್ಕನೇ ಸದಸ್ಯ ಇದೀಗ ವಿಧಾನಸಭೆ ಮೆಟ್ಟಿಲೇರಲಿದ್ದಾರೆ.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಕೊನೆ ಕ್ಷಣದಲ್ಲಿ ಸಿಎಂ ಎಂಟ್ರಿ; ಸಿಗದ ಫಲ!
ಜಿಲ್ಲಾ ಬಿಜೆಪಿ ಘಟಾನುಘಟಿ ನಾಯಕರನ್ನು ಹೊಂದಿದೆ. ವಿಧಾನಸಭೆಯ ಹಿರಿಯ ಶಾಸಕರೂ ಆಗಿರುವ ಹಾಲಿ ಸಚಿವ ಉಮೇಶ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಜೊಲ್ಲೆ ಕುಟುಂಬ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆಯಂಥ ನಾಯಕರ ಮಧ್ಯೆಯೂ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋತಿದ್ದಾರೆ. ಚುನಾವಣೆ ಮೂರುದಿನಗಳು ಬಾಕಿ ಇರುವಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಬೆಳಗಾವಿಗೆ ಎಂಟ್ರಿ ಕೊಟ್ಟಿದ್ದರು. ಪ್ರತ್ಯೇಕವಾಗಿ ಎಲ್ಲರ ಜೊತೆಗೆ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಸಹೋದರ ಲಖನ್ ಜೊತೆಗೆ ಬಿಜೆಪಿ ಗೆಲ್ಲಿಸುತ್ತೇವೆ ಹಾಗೂ ಕಾಂಗ್ರೆಸ್ ಸೋಲಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ನಾಯಕರ ಎದುರೇ ಹೇಳಿಕೊಂಡಿದ್ದರು. ಬಿಜೆಪಿ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಆದಿಯಾಗಿ ಜಿಲ್ಲಾ ಬಿಜೆಪಿ ನಾಯಕರು ಹಾಗೂ ಜಾರಕಿಹೊಳಿ ಸಹೋದರರ ಜೊತೆಗೆ ಬಿಜೆಪಿಯ ಇತರ ನಾಯಕರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಹೀಗಾಗಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಮಹಾಂತೇಶ ಕವಟಗಿಮಠ ಸೋಲನುಭವಿಸಿದರೆ ಕಾಂಗ್ರೆಸ್ಸಿನ ಚನ್ನರಾಜ್ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ದಾಖಲಿಸಿ ಚೊಚ್ಚಲ ಬಾರಿಗೆ ಪರಿಷತ್ ಪ್ರವೇಶಿಸಿದರು.
ಪ್ರತಿಷ್ಠೆಗಾಗಿ ಪಕ್ಷ ಬಲಿ ಕೊಟ್ಟರಾ ಬ್ರದರ್ಸ್?
ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಸಿಡಿ ವಿಚಾರವಾಗಿಯೇ ಡಿಕೆಶಿ ವಿರುದ್ಧ ರಮೇಶ ಆಗಾಗ ಬಹಿರಂಗ ಸಮರ ಸಾರುತ್ತಲೇ ಬಂದಿದ್ದಾರೆ. ಡಿಕೆಶಿ ಆಪ್ತರಲ್ಲಿ ಗುರಿತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಇತ್ತ ಜಾರಕಿಹೊಳಿ ಬ್ರದರ್ಸ್ ಕೂಡ ಸಹೋದರರನ್ನು ಕಣಕ್ಕಿಳಿಸಲು ನಿರ್ಧರಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸೋಲಲೇಬಾರದು ಎಂದು ಜಾರಕಿಹೊಳಿ ಬ್ರದರ್ಸ್ ನಿರ್ಧರಿಸಿದರು. ಹೀಗಾಗಿ ಮೊದಲನೇ ಮತ ಬಿಜೆಪಿಗೆ ಹಾಕಿ ಎರಡನೇ ಮತ ಕಾಂಗ್ರೆಸ್ಸಿಗೆ ಹಾಕಬೇಡಿ ಎಂದೇ ಪ್ರಚಾರ ಮಾಡಿದ್ದರು. ಕಾಂಗ್ರೆಸ್ಸಿಗೆ ಹೋಗುವ ಮತವನ್ನು ಪಕ್ಷೇತರ ಅಭ್ಯರ್ಥಿ ಲಖನ್‍ಗೆ ನೀಡಬೇಕು ಎಂದು ಪರೋಕ್ಷವಾಗಿ ಮನವಿ ಮಾಡುತ್ತಿದ್ದರು. ದ್ವಿಸದಸ್ಯ ಸ್ಥಾನಗಳಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ಸ್ಥಾನಕ್ಕೆ ಸ್ಪರ್ಧಿಸಿದ್ದವು. ಇಬ್ಬರೇ ಸ್ಪರ್ಧಿಸಿದ್ದರೆ ತಲಾ ಒಂದೊಂದು ಸ್ಥಾನವನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪಡೆಯಬಹುದಿತ್ತು. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಿಜೆಪಿ ಮತಗಳ ವಿಭಜನೆಗೆ ಕಾರಣವಾಯಿತು. ಹೀಗಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲನುಭವಿಸಬೇಕಾಯಿತು. ಪ್ರತಿಷ್ಠೆಗಾಗಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಇದೀಗ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಗುರಿಯಾಗಿದ್ದಾರೆ. ಚುನಾವಣೆ ಸೋಲಿನಿಂದ ಸ್ಥಾನಮಾನ ಹಂಚಿಕೆ ವೇಳೆ ಜಾರಕಿಹೊಳಿ ಸಹೋದರಿಗೆ ಪೆಟ್ಟು ಬೀಳುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ.